ಕರ್ನಾಟಕದ ಅಣೆಕಟ್ಟುಗಳಲ್ಲಿ ಶೇ.೨೫ ಕ್ಕಿಂತ ಕಡಿಮೆ ನೀರಿನ ಸಂಗ್ರಹ

ಬೆAಗಳೂರು, ಏ. ೨೬: ಮಳೆ ಕೊರತೆ, ಭೀಕರ ಬರಗಾಲ, ಬೇಸಿಗೆ ಮತ್ತು ನೀರಿನ ಆವಿಯಾಗುವಿಕೆಯಿಂದಾಗಿ ಕರ್ನಾಟಕ ರಾಜ್ಯದ ಪ್ರಮುಖ ಜಲಾಶಯಗಳಲ್ಲಿನ ನೀರಿನ ಮಟ್ಟವು ಅವುಗಳ ಒಟ್ಟು ಸಂಗ್ರಹ ಸಾಮರ್ಥ್ಯದ ಶೇ. ೨೫ ಕ್ಕಿಂತ ಕಡಿಮೆಯಾಗಿದೆ ಎಂದು ತಿಳಿದುಬಂದಿದೆ. ಇತ್ತೀಚಿನ ಮಾಹಿತಿಯ ಪ್ರಕಾರ, ರಾಜ್ಯ ೧೪ ಪ್ರಮುಖ ಜಲಾಶಯಗಳ ಒಟ್ಟು ಸಂಗ್ರಹ ಸಾಮರ್ಥ್ಯ ೮೯೫.೬೨ ಟಿ.ಎಂ.ಸಿ. ಇದ್ದು, ಈಗ ಅವುಗಳಲ್ಲಿ ಕೇವಲ ೨೧೭.೭೫ ಟಿ.ಎಂ.ಸಿ. ನೀರನ್ನು ಮಾತ್ರ ಹೊಂದಿವೆ. ಇದು ಜಲಾಶಯಗಳ ಒಟ್ಟು ಸಂಗ್ರಹಣೆಯ ಶೇ. ೨೫ ಕ್ಕಿಂತ ಕಡಿಮೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯಗಳಲ್ಲಿ ೨೬೯ ಟಿಎಂಸಿ ಅಡಿ ನೀರು ಇತ್ತು. ತುಂಗಭದ್ರ ಜಲಾಶಯದಲ್ಲಿ ತನ್ನ ಒಟ್ಟು ಸಾಮರ್ಥ್ಯದ ಅಂದರೆ ೧೦೫.೭೯ ಟಿಎಂಸಿ ನೀರು ಸಂಗ್ರಹಕ್ಕೆ ಬದಲಾಗಿ ಈಗ ಕೇವಲ ೩.೭೭ ಟಿಎಂಸಿ ನೀರು ಇದೆ. ಅಂತೆಯೇ ಕೆ.ಆರ್.ಎಸ್. ಅಣೆಕಟ್ಟೆಯಲ್ಲಿ ೪೯.೪೫ ಟಿ.ಎಂ.ಸಿ. ನೀರು ಸಂಗ್ರಹ ಸಾಮರ್ಥ್ಯಕ್ಕೆ ಬದಲಾಗಿ ಇಲ್ಲಿ ಕೇವಲ ೧೧.೭೪ ಟಿ.ಎಂ.ಸಿ. ನೀರು ಇದ್ದು, ಕಬಿನಿಯ ೧೯.೫೨ ಟಿ.ಎಂ.ಸಿ. ಒಟ್ಟು ಸಂಗ್ರಹ ಸಾಮರ್ಥ್ಯಕ್ಕೆ ಬದಲಾಗಿ ಇಲ್ಲಿ ಕೇವಲ ೭.೭೨ ಟಿ.ಎಂ.ಸಿ. ನೀರು ಇದೆ ಎಂದು ತಿಳಿದುಬಂದಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರದ (ಕೆಎಸ್‌ಎನ್‌ಡಿಎಂಸಿ) ಮಾಜಿ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ಅವರು ಮಾತನಾಡಿ, ಸಾಮಾನ್ಯವಾಗಿ ಮಾರ್ಚ್ನಿಂದ ಮೇ ತಿಂಗಳವರೆಗೆ ಜಲಾಶಯಗಳಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತದೆ. ಜಲಾಶಯಗಳು ವರ್ಷಕ್ಕೆ ಎರಡು ಬಾರಿ ಅಂದರೆ ಆಗಸ್ಟ್ ಮತ್ತು ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ತುಂಬಿರುತ್ತವೆ. ಇದರಿಂದ ರೈತರಿಗೆ ವರ್ಷದಲ್ಲಿ ಎರಡು ಬೆಳೆ ತೆಗೆಯಲು ಅನುಕೂಲವಾಗುತ್ತದೆ. ಆದರೆ, ಈ ವರ್ಷ ಒಮ್ಮೆ ಮಾತ್ರ ಜಲಾಶಯಗಳು ಭರ್ತಿಯಾಗಿದ್ದವು. ಅಲ್ಲದೆ ರಾಜ್ಯದ ಕಾವೇರಿ ಜಲಾನಯನ ಪ್ರದೇಶದಲ್ಲಿರುವ ಜಲಾಶಯಗಳ ನೀರನ್ನು ತಮಿಳುನಾಡಿಗೆ ಬಿಡಲಾಗಿದೆ. ಈ ಎಲ್ಲಾ ಅಂಶಗಳು ಕರ್ನಾಟಕದ ಜಲಾಶಯಗಳಲ್ಲಿ ಕಳಪೆ ನೀರಿನ ಸಂಗ್ರಹಣೆ ಮಟ್ಟಕ್ಕೆ ಕಾರಣವಾಗಿವೆ ಎಂದು ಅವರು ಹೇಳಿದರು. ಅಲ್ಲದೆ ಬಿಸಿಲ ಧಗೆಗೆ ನೀರು ಆವಿಯಾಗುವಿಕೆಯಿಂದ ಜಲಾಶಯಗಳಲ್ಲಿ ನೀರಿನ ಸಾಮರ್ಥ್ಯ ನಷ್ಟವಾಗುತ್ತದೆ. ಈ ಬಾರಿ ಬಿರು ಬೇಸಿಗೆಯಿಂದಾಗಿ ನಷ್ಟವೇ ಹೆಚ್ಚು. ಕರ್ನಾಟಕವು ಏಪ್ರಿಲ್‌ನಲ್ಲಿ ಸುಮಾರು ೫೦ ಮಿಮೀ ಮಳೆಯನ್ನು ಪಡೆಯುತ್ತದೆ, ಆದರೆ ಆವಿಯಾಗುವಿಕೆಯಿಂದ ದಿನಕ್ಕೆ ಸುಮಾರು ೫ ಮಿಮೀ ನಷ್ಟವಾಗುತ್ತದೆ. ಇದರರ್ಥ ತಿಂಗಳಿಗೆ ೧೫೦ ಮಿ.ಮೀ. ನೀರು ನಷ್ಟವಾಗಿದೆ ಎಂದು ಅವರು ಹೇಳಿದರು. ಕೆಎಸ್‌ಎನ್‌ಡಿಎಂಸಿಯ ಮೂಲಗಳ ಪ್ರಕಾರ ರಾಜ್ಯವು ತೀವ್ರ ಬರಗಾಲವನ್ನು ಎದುರಿಸುತ್ತಿದ್ದು, ಕೆಲವು ಪ್ರದೇಶಗಳಲ್ಲಿ ಮಳೆಯಿಂದಾಗಿ ಜಲಾಶಯಗಳಿಗೆ ಸಮರ್ಪಕ ಒಳಹರಿವು ಉಂಟಾಗುತ್ತಿಲ್ಲ. ಮೇ ತಿಂಗಳಲ್ಲಿ ಮಳೆಯಾದರೂ, ಜೂನ್ ಅಂತ್ಯದವರೆಗೆ ನಮಗೆ ಉತ್ತಮ ಒಳಹರಿವು ಸಿಗುವುದಿಲ್ಲ ಎಂದು ತಿಳಿಸಿವೆ.

ಮತಗಟ್ಟೆಯಲ್ಲೇ ಕರ್ತವ್ಯ ನಿರತ ಮಹಿಳಾ ಸಿಬ್ಬಂದಿ ಸಾವು

ಚಿತ್ರದುರ್ಗ, ಏ. ೨೬: ಲೋಕಸಭೆ ಚುನಾವಣೆಗೆ ರಾಜ್ಯದ್ಯಂತ ಬಿರುಸಿನ ಮತದಾನ ನಡೆಯುತ್ತಿದೆ. ರಾಜ್ಯದ ೧೪ ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಮತದಾನ ನಡೆಯುತ್ತಿದೆ. ಅಲ್ಲಲ್ಲಿ ಕೆಲವು ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿದರೆ ಬಹುತೇಕ ಶಾಂತಿಯುತ ಮತದಾನವಾಗಿದೆ. ಈ ನಡುವೆ ಚಳ್ಳಕೆರೆ ತಾಲೂಕಿನ ಹೊಟ್ಟೆಪ್ಪನಹಳ್ಳಿ ಮತಗಟ್ಟೆಯಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ ಮಹಿಳಾ ಸಿಬ್ಬಂದಿ ಲೋ ಬಿಪಿಯಿಂದ ಮೃತಪಟ್ಟಿದ್ದಾರೆ. ಚಳ್ಳಕೆರೆ ಪಟ್ಟಣದ ವಿಠಲ ನಗರದ ಯಶೋಧಮ್ಮ (೫೫) ಮೃತ ಮಹಿಳಾ ಸಿಬ್ಬಂದಿ. ಯಶೋಧಮ್ಮ ಅವರು ಲೋ ಬಿಪಿಯಿಂದಾಗಿ ಅಸ್ವಸ್ಥಗೊಂಡಿದ್ದರು. ಇವರನ್ನು ಕೂಡಲೇ ಚಳ್ಳಕೆರೆ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು, ಆದರೆ ದಾರಿ ಮಧ್ಯದಲ್ಲೇ ಮೃತಪಟ್ಟರು. ಚಳ್ಳಕೆರೆ ಆಸ್ಪತ್ರೆಗೆ ಅಪರ ಜಿಲ್ಲಾಧಿಕಾರಿ ಕುಮಾರಸ್ವಾಮಿ ಭೇಟಿ ನೀಡಿದ್ದಾರೆ. ಚಳ್ಳಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಬಾರಾಮುಲ್ಲಾ ಎನ್‌ಕೌಂಟರ್: ಇಬ್ಬರು ಉಗ್ರರು ಹತ, ಇಬ್ಬರು ಯೋಧರಿಗೆ ಗಾಯ

ಶ್ರೀನಗರ, ಏ. ೨೬: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರು ಹತರಾಗಿದ್ದು, ಇಬ್ಬರು ಯೋಧರು ಗಾಯಗೊಂಡಿದ್ದಾರೆ. ಉತ್ತರ ಕಾಶ್ಮೀರದ ಸೋಪೋರ್ ಪ್ರದೇಶದ ಚೆಕ್ ಮೊಹಲ್ಲಾ ನೌಪೋರಾದಲ್ಲಿ ಗುರುವಾರ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಎನ್‌ಕೌಂಟರ್ ಪ್ರಾರಂಭಗೊAಡು, ಶುಕ್ರವಾರವೂ ಗುಂಡಿನ ದಾಳಿ ಮುಂದುವರೆದಿದೆ. ಎನ್‌ಕೌಂಟರ್‌ನಲ್ಲಿ ಇದೂವರೆಗೆ ಇಬ್ಬರು ಉಗ್ರರು ಬಲಿಯಾಗಿದ್ದು, ಇಬ್ಬರು ಯೋಧರಿಗೆ ಗಾಯಗಳಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಎನ್‌ಕೌಂಟರ್‌ನಲ್ಲಿ ಗಾಯಗೊಂಡ ಇಬ್ಬರು ಸೇನಾ ಸಿಬ್ಬಂದಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಗುರುವಾರ ನಡೆದ ಎನ್‌ಕೌಂಟರ್‌ನಲ್ಲಿ ಸಮೀಪದ ನಾಗರಿಕರೊಬ್ಬರು ಗಾಯಗೊಂಡಿದ್ದು, ಎನ್‌ಕೌಂಟರ್ ನಡೆದ ಪ್ರದೇಶದಲ್ಲಿ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.