ಮುಳ್ಳೂರು, ಏ. ೨೬: ಆಲೂರು-ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ವಿಶ್ವ ಭೂಮಿ ದಿನವನ್ನು ಅರ್ಥ ಪೂರ್ಣವಾಗಿ ಆಚರಿಸಲಾಯಿತು. ದಿನದ ಮಹತ್ವದ ಪ್ರಯುಕ್ತ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಸುಪರ್ಣ ಕೃಷ್ಣಾನಂದ್ ಅವರ ನೇತೃತ್ವದಲ್ಲಿ ಆಸ್ಪತ್ರೆಯ ಸಿಬ್ಬಂದಿ ಜೊತೆಗೂಡಿ ಆಸ್ಪತ್ರೆ ಮುಂಭಾಗದ ರಸ್ತೆ ಬದಿಯಲ್ಲಿ ಹರಡಿದ್ದ ಪ್ಲಾಸ್ಟಿಕ್, ರಬ್ಬರ್ ಮುಂತಾದ ಘನ ತ್ಯಾಜ್ಯಗಳನ್ನು ಹೆಕ್ಕಿ ಸ್ವಚ್ಛಗೊಳಿಸಲಾಯಿತು. ನಂತರ ಪ್ಲಾಸ್ಟಿಕ್ ಮುಂತಾದ ಘನ ತ್ಯಾಜ್ಯಗಳನ್ನು ನಾಶಪಡಿಸಲಾಯಿತು.

ಭೂಮಿಯಲ್ಲಿ ಬಿದ್ದ ಪ್ಲಾಸ್ಟಿಕ್, ರಬ್ಬರ್ ಮುಂತಾದ ತ್ಯಾಜ್ಯವಸ್ತುಗಳು ಕರಗುವುದಿಲ್ಲ, ಮಣ್ಣಿನೊಳಗೆ ಇಂತಹ ಘನ ತ್ಯಾಜ್ಯಗಳು ಸೇರಿಕೊಳ್ಳುವು ದರಿಂದ ಪರಿಸರಕ್ಕೆ ಹಾನಿಯಾಗು ತ್ತಿರುವ ಹಿನ್ನೆಲೆ ಪ್ಲಾಸ್ಟಿಕ್ ತ್ಯಾಜ್ಯವನ್ನು ಶ್ರಮದಾನದ ಮೂಲಕ ಹೆಕ್ಕಿ ಸ್ವಚ್ಛ ಗೊಳಿಸುವ ಮೂಲಕ ವಿಶ್ವ ಭೂಮಿ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು.

ದಿನದ ಮಹತ್ವದ ಕುರಿತು ಮಾತನಾಡಿದ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಸುಪರ್ಣ ಕೃಷ್ಣಾನಂದ್, ನಾವೆಲ್ಲರೂ ಭೂಮಿ ಯನ್ನು ತಾಯಿಗೆ ಹೋಲಿಸುತ್ತೇವೆ. ನಾವು ಭೂಮಿ ತಾಯಿಯ ಮಕ್ಕಳು. ಈ ನಿಟ್ಟಿನಲ್ಲಿ ನಾವು ಭೂಮಿಯಲ್ಲಿ ಜೀವನ ನಡೆಸುತ್ತೇವೆ. ಈ ಮೂಲಕವಾಗಿ ಭೂಮಿಯು ನಮ್ಮನ್ನು ಕಾಪಾಡುತ್ತಿದೆ. ಹೀಗಿರುವಾಗ ನಾವು ಭೂಮಿಯನ್ನು ಸ್ವಚ್ಛತೆಯಿಂದ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.

ಶ್ರಮದಾನ ಕಾರ್ಯದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಹೆಚ್.ಡಿ. ಪ್ರವೀಣ್‌ಕುಮಾರ್, ಆಸ್ಪತ್ರೆಯ ಕಿರಿಯ ಆರೋಗ್ಯ ಸಹಾಯಕಿಯರು, ಆಸ್ಪತ್ರೆಯ ಎಲ್ಲಾ ಸಿಬ್ಬಂದಿ ಭಾಗವಹಿಸಿದ್ದರು.