ವೀರಾಜಪೇಟೆ, ಏ. ೨೬ : ಲೋಕಸಭಾ ಚುನಾವಣೆಯ ಮತದಾನ ವೀರಾಜಪೇಟೆ ವ್ಯಾಪ್ತಿಯಲ್ಲಿ ಶಾಂತಿಯುತವಾಗಿ ನಡೆಯಿತು. ಜನರು ಉತ್ಸಾಹದಿಂದ ಮತದಾನದಲ್ಲಿ ಭಾಗವಹಿಸಿದ್ದರು. ವೀರಾಜಪೇಟೆ ಪಟ್ಟಣ ಹಾಗೂ ಸುತ್ತಲಿನ ಗ್ರಾಮೀಣ ಪ್ರದೇಶದಲ್ಲಿ ಬೆಳಿಗ್ಗೆಯಿಂದಲೇ ಚುರುಕಿನ ಮತದಾನ ನಡೆಯಿತು.
ಬಿಟ್ಟಂಗಾಲದ ಮತಗಟ್ಟೆ ಸಂಖ್ಯೆ ೧೫೮ರಲ್ಲಿ ಮತಯಂತ್ರದ ಬ್ಯಾಟರಿ ಸಮಸ್ಯೆ ಉಂಟಾಗಿ ಬೆಳಿಗ್ಗೆ ಕೆಲಕಾಲ ಮತ ಚಲಾಯಿಸಲು ವಿಳಂಬವಾಯಿತು. ಅಪರಾಹ್ನದ ಬಳಿಕ ಮತದಾನ ಬಹುತೇಕ ಕಡೆ ನಿಧಾನವಾಗಿ ಸಾಗಿತ್ತು. ಜಯಪ್ರಕಾಶ್ ಬಾಲಕಿಯರ ಪ್ರೌಢಶಾಲೆ ಸಖಿ ಮತಗಟ್ಟೆಯಲ್ಲಿ ಮತದಾರರ ಸಂಖ್ಯೆ ವಿರಳವಾಗಿತ್ತು ಮತ್ತು ಪಕ್ಕದ ಸರ್ವ ಶಿಕ್ಷಣ ಅಭಿಯಾನ ಇಲಾಖೆ ಕಚೇರಿ ಮತಗಟ್ಟೆಯಲ್ಲಿ ಹೆಚ್ಚಿನ ಜನರು ಕಂಡುಬರಲಿಲ್ಲ.
ಸುAಕದಕಟ್ಟೆ ಮತ್ತು ಗೋಣಿಕೊಪ್ಪ ರಸ್ತೆಯ ಶಿಶು ವಿಹಾರ ಕೇಂದ್ರದ ಮತಗಟ್ಟೆಯಲ್ಲಿ ಮತದಾರರು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.
ಕಲ್ಲುಬಾಣೆಯ ಬದ್ರಿಯ ಹಿರಿಯ ಪ್ರಾಥಮಿಕ ಕೇಂದ್ರ ಯುವ ಜನ ಸ್ನೇಹಿ ಮತಗಟ್ಟೆಯಲ್ಲಿ ಬೆಳಿಗ್ಗೆ ಸರತಿ ಸಾಲು ಕಂಡು ಬಂತು.
ವೀರಾಜಪೇಟೆಯ ಸಂತ ಅನ್ನಮ್ಮ ಶಾಲೆಯ ೧೪೯ ನೇ ಮತಗಟ್ಟೆಯಲ್ಲಿ ವಿಶೇµಚೇತನ ಸ್ನೇಹಿ ಮತಗಟ್ಟೆ ಕೇಂದ್ರ ಸ್ಥಾಪಿಸಲಾಗಿತ್ತು. ಜೊತೆಗೆ ವಿಶೇಷಚೇತನರಿಗೆ ಹಾಗೂ ಹಿರಿಯ ನಾಗರಿಕರಿಗೆ ವಿಶ್ರಾಂತಿ ಕೊಠಡಿಯನ್ನು ಸಹ ಸ್ಥಾಪಿಸಲಾಗಿತ್ತು.
ಕಲ್ಲು ಬಾಣೆ ಬದ್ರಿಯಾ ಶಾಲೆ ಮತಗಟ್ಟೆಯಲ್ಲಿ ಯುವ ಜನ ಸ್ನೇಹಿ ಮತಗಟ್ಟೆ ಗಮನ ಸೆಳೆಯಿತು. ವೀರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ೨೭೩ ಮತಗಟ್ಟೆಗಳಿದ್ದು ೨,೩೨,೦೩೩ ಮತದಾರರಿದ್ದಾರೆ. ೧,೧೪,೪೨೫ ಪುರುಷ ಮತ್ತು ೧,೧೭,೬೦೧ ಮಹಿಳಾ ಮತದಾರರು, ೭ ಇತರ ಮತದಾರರಿದ್ದಾರೆ.
ಮತಗಟ್ಟೆಗಳಲ್ಲಿ ೨೫೦ ಮಹಿಳಾ ಸಿಬ್ಬಂದಿ ಸೇರಿದಂತೆ ಒಟ್ಟು ೧,೨೫೦ ಮಂದಿ ಕರ್ತವ್ಯ ನಿರ್ವಹಿಸಿದರು. ಶಾಂತಿ ಸುವ್ಯವಸ್ಥೆ ಕಾಪಾಡಲು ಕೈಗಾರಿಕಾ ಭದ್ರತಾ ಪಡೆ ಸೇರಿದಂತೆ ಒಟ್ಟು ೭೦೩ ಜನ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು.
ಸೂಕ್ಷö್ಮ, ಅತೀಸೂಕ್ಷö್ಮ ಮತಗಟ್ಟೆಗಳಿಗೆ ಸಿಎಪಿಎಫ್ ತಂಡವನ್ನು ನಿಯೋಜಿಸಿ ಅಗತ್ಯ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ತಿತಿಮತಿ ಮತಗಟ್ಟೆಗಳನ್ನು ವಿಶೇಷವಾಗಿ ಕಾಫಿ, ಅರಣ್ಯ ಮತ್ತು ವನ್ಯಜೀವಿ ಹಾಗೂ ಟ್ರೆöÊಬಲ್ ಥೀಮ್ನಲ್ಲಿ ವಿನ್ಯಾಸಗೊಳಿಸಲಾಗಿತ್ತು.
೫ ಸಖಿ ಮತಗಟ್ಟೆ, ೧ ವಿಶೇಷಚೇತನರ ಮತಗಟ್ಟೆ, ೧ ಯುವ ಮತಗಟ್ಟೆ, ೧ ಥೀಮ್ ಬೇಸ್ಡ್ ಮತಗಟ್ಟೆ, ೨ ಸಾಂಪ್ರದಾಯಿಕ ಮತಗಟ್ಟೆ ಸ್ಥಾಪಿಸಲಾಗಿತ್ತು. ವೃದ್ಧರಿಗೆ ಸರತಿ ಸಾಲಿನಲ್ಲಿ ನಿಲ್ಲದೆ ನೇರವಾಗಿ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿತ್ತು.
ಮತದಾನ ಕೇಂದ್ರಗಳಲ್ಲಿ ಗಾಲಿ ಕುರ್ಚಿ ವ್ಯವಸ್ಥೆ, ಸಂಜ್ಞಾ ಭಾಷಾ ವ್ಯಾಖ್ಯಾನಕಾರರ ವ್ಯವಸ್ಥೆ, ಮತದಾನ ಕೇಂದ್ರಕ್ಕೆ ಬಂದು ಹೋಗಲು ಉಚಿತ ಸಾರಿಗೆ ವ್ಯವಸ್ಥೆ, ಸಹಾಯಕರ ಸೇವೆ ಒದಗಿಸಲಾಗಿತ್ತು. ಕ್ಷೇತ್ರದಲ್ಲಿ ಭದ್ರತೆಗಾಗಿ ೩ ಡಿವೈಎಸ್ಪಿ, ೬ ಸಿಪಿಐ, ೨೪ ಪಿಎಸ್ಐ, ೧೮ ಎಎಸ್ಐ, ೨೬೫ ಪೊಲೀಸ್ ಸಿಬ್ಬಂದಿ, ೧೩೧ ಹೊಂ ಗಾರ್ಡ್, ಭದ್ರತಾ ಪಡೆ ಕಾರ್ಯನಿರ್ವಹಿಸಿದರು.