ಮಡಿಕೇರಿ, ಏ. ೨೬: ೨೪ನೇಯ ವರ್ಷದ ಕೊಡವ ಕೌಟುಂಬಿಕ ಹಾಕಿ ಉತ್ಸವ ಅಂತಿಮ ಘಟ್ಟದಲ್ಲಿ ಈ ಬಾರಿಯ ಪ್ರತಿಷ್ಠಿತ ಕುಂಡ್ಯೋಳAಡ ಕಪ್ ಗೆಲ್ಲಲು ಅಂತಿಮ ಸೆಣಸಾಟ ನಡೆಸಲಿರುವ ಕುಟುಂಬಗಳೆರಡು ಯಾವದೆಂಬುದು ತಾ.೨೭ರಂದು (ಇಂದು) ನಿರ್ಧಾರವಾಗಲಿದೆ.

ಪಂದ್ಯಾವಳಿಯ ಸೆಮಿಫೈನಲ್ ಹಣಾಹಣೆ, ಶನಿವಾರ ನಾಪೋಕ್ಲುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಜರುಗಲಿದೆ. ಸೆಮಿಫೈನಲ್ ಹಂತಕ್ಕೆ ಕುಲ್ಲೇಟಿರ, ಚೇಂದAಡ, ನೆಲ್ಲಮಕ್ಕಡ ಹಾಗೂ ಕುಪ್ಪಂಡ (ಕೈಕೇರಿ) ತಂಡಗಳು ಎಂಟ್ರಿ ಕೊಟ್ಟಿವೆ. ಕುಪ್ಪಂಡ ಹಾಲಿ ಚಾಂಪಿಯನ್ ಆಗಿದ್ದರೆ, ಇತರ ತಂಡಗಳು ಮಾಜಿ ಚಾಂಪಿಯನ್‌ಗಳಾಗಿದ್ದು, ಈ ಬಾರಿಯ ಮತ್ತೊಂದು ಪ್ರಶಸ್ತಿಗೆ ರೋಚಕ ಹೋರಾಟ ನಡೆಸುವುದು ಖಚಿತ. ಈ ಹಿನ್ನೆಲೆ ಸೆಮಿಫೈನಲ್ ಪಂದ್ಯಾಟದ ವೀಕ್ಷಣೆಗೆ ಹಾಕಿ ಅಭಿಮಾನಿಗಳು ಕಾತರದಿಂದಿದ್ದಾರೆ.

ಸೆಮಿಫೈನಲ್ ಅಂಗವಾಗಿ ಆಯೋಜಕರಾದ ಕುಂಡ್ಯೋಳAಡ ಕುಟುಂಬಸ್ಥರು ತಾ.೨೭ರ ಶನಿವಾರ ಕೆಲವು ಇತರ ಕಾರ್ಯಕ್ರಮಗಳನ್ನೂ ಹಮ್ಮಿಕೊಂಡಿವೆ. ಬೆಳಿಗ್ಗೆ ಕಕ್ಕಬೆಯಿಂದ ನಾಪೋಕ್ಲು ಮೈದಾನದ ತನಕ ೧೦ ಕಿ.ಮೀ. ಅಂತರದ ೨.೫x೪ ಫ್ಯಾಮಿಲ್ ರನ್ ಸ್ಪರ್ಧೆ ವಿವಿಧ ಕುಟುಂಬಗಳ ನಡುವೆ ಏರ್ಪಡಿಸಿರುವುದು ಈ ಬಾರಿಯ ಮತ್ತೊಂದು ವಿಶೇಷತೆಯಾಗಿದೆ. ಇದರೊಂದಿಗೆ ಅಂತರರಾಷ್ಟಿçÃಯ ಹಾಕಿ ಆಟಗಾರರ, ಸಾಧಕರ ಸಮ್ಮಿಲನ, ಗೌರವ ಸಲ್ಲಿಕೆ ಕಾರ್ಯಕ್ರಮವೂ ನಿಗದಿಯಾಗಿದೆ. ಕೊಂಬೊ ಮೀಸೆರ ಬಂಬೊ.. ಬೋಜಿಜಡೆರ ಭೋಜಕ್ಕ ಸ್ಪರ್ಧೆಯೂ ಆಕರ್ಷಣೆಯಾಗಿದೆ.

ಅತಿಥಿಗಳಾಗಿ ರಾಜ್ಯ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ, ಚೆಪ್ಪುಡೀರ ಮೊಣ್ಣಪ್ಪ ಪೂಣಚ್ಚ, ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡAಡ ಕೆ. ಬೋಪಣ್ಣ, ಡಾ. ಕಲಿಯಾಟಂಡ ಚಿಣ್ಣಪ್ಪ, ನಿವೃತ್ತ ಮೇಜರ್ ಜನರಲ್ ಬಾಚಮಂಡ ಎ. ಕಾರ್ಯಪ್ಪ ಅವರುಗಳು ಪಾಲ್ಗೊಳ್ಳಲಿದ್ದಾರೆ. ಶುಕ್ರವಾರ ಲೋಕಸಭಾ ಚುನಾವಣೆಯೂ ಮುಗಿದಿದ್ದು, ಜನತೆ ಒಂದಷ್ಟು ನಿರಾಳರಾಗಿರುವದರಿಂದ ಸಾವಿರಾರು ಮಂದಿ ಸೆಮಿಫೈನಲ್ ವೀಕ್ಷಣೆಗೆ ಆಗಮಿಸುವ ನಿರೀಕ್ಷೆಯಿದೆ.