ಮತದಾರರೊಂದಿಗೆ ಗೌರವಯುತವಾಗಿ ನಡೆದುಕೊಳ್ಳಿ

ಮತಕೇಂದ್ರಕ್ಕೆ ಆಗಮಿಸುವ ಮತದಾರರೊಂದಿಗೆ ಪೊಲೀಸರು ಸೌಜನ್ಯಯುತವಾಗಿ ನಡೆದುಕೊಂಡು ಇಲಾಖೆ ಗೌರವ ಕಾಪಾಡಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಸಿಬ್ಬಂದಿಗಳಿಗೆ ಖಡಕ್ ಸೂಚನೆ ನೀಡಿದರು.

ಜಿಲ್ಲಾ ಪೊಲೀಸ್ ಕವಾಯತ್ ಮೈದಾನದಲ್ಲಿ ಪರೇಡ್‌ನಲ್ಲಿ ಭಾಗವಹಿಸಿ ಚುನಾವಣಾ ಸಂದರ್ಭ ಪಾಲಿಸಬೇಕಾದ ನಿಯಮಗಳ ಬಗ್ಗೆ ವಿವರಿಸಿದರು.

ಚುನಾವಣೆ ಪ್ರಜಾಪ್ರಭುತ್ವದ ದೊಡ್ಡ ಹಬ್ಬವಾಗಿದ್ದು, ಪೊಲೀಸ್ ಇಲಾಖೆಯಿಂದ ಯಾವುದೇ ಸಮಸ್ಯೆ ಆಗಬಾರದು. ಜನರ ಸಮಸ್ಯೆ ಅರಿತು ಕರ್ತವ್ಯ ನಿರ್ವಹಿಸಬೇಕು. ಸೆಕ್ಟರ್ ಹಾಗೂ ಹಿರಿಯ ಅಧಿಕಾರಿಗಳು ಮೇಲ್ವಿಚಾರಣೆ ಮಾಡಬೇಕು. ಸಮಸ್ಯೆಗಳಿಗೆ ತ್ವರಿತ ಸ್ಪಂದನ ನೀಡಬೇಕು. ಮಸ್ಟರಿಂಗ್ ಸಂದರ್ಭ ಸರಿಯಾದ ಸಮಯದಲ್ಲಿ ಹಾಜರಿರಬೇಕು. ಇಲ್ಲದಿದ್ದಲ್ಲಿ ಅಮಾನತ್ತು ಶಿಕ್ಷೆ ನೀಡಲಾಗುವುದು. ಸಿಬ್ಬಂದಿಗಳ ಸಮಸ್ಯೆಯನ್ನು ಇಲಾಖೆ ನೋಡಿಕೊಳ್ಳುತ್ತದೆ. ಮತಕೇಂದ್ರದ ೨೦೦ ಮೀಟರ್ ವ್ಯಾಪ್ತಿಯಲ್ಲಿ ವಾಹನ ನಿಲುಗಡೆ ಹಾಗೂ ಪ್ರಚಾರಕ್ಕೆ ನಿರ್ಬಂಧವಿರುತ್ತದೆ. ಪೊಲೀಸರು ಜನರೊಂದಿಗೆ ಗೌರವಯುತವಾಗಿ ಮಾತನಾಡಬೇಕು. ಕ್ಷುಲ್ಲಕ ವಿಚಾರಕ್ಕೆ ಘರ್ಷಣೆ ಮಾಡಿಕೊಳ್ಳದೆ ಸಮಸ್ಯೆ ಬಗೆಹರಿಸುವತ್ತ ಚಿತ್ತ ಹರಿಸಬೇಕು. ಸಮನ್ವಯತೆ ಕಾಯ್ದುಕೊಂಡು ಕಾರ್ಯನಿರ್ವಹಣೆ ಮಾಡಬೇಕು ಎಂದು ನಿರ್ದೇಶನ ನೀಡಿದರು.