ಐಗೂರು, ಏ. ೨೩: ಇಡೀ ದೇಶಕ್ಕೆ ಮಾದರಿಯಾದ ಈ ದೇಶವನ್ನು ಶುಚಿತ್ವದ ವಿಚಾರದಲ್ಲಿ ವಿಶ್ವದ ಮುಂಚೂಣಿಯಲ್ಲಿರುವ ಇತರ ರಾಷ್ಟçಗಳ ಸಾಲಿಗೆ ಸೇರ್ಪಡೆಗೊಳಿಸುವ ಸ್ವಚ್ಛ ಭಾರತ ಯೋಜನೆಯು ಪ್ರಾರಂಭದಲ್ಲಿ ಅತಿಯಾದ ಹುರುಪು ಉತ್ಸಾಹದಿಂದ ಆರಂಭಗೊAಡಿದ್ದರೂ ಬರ ಬರುತ್ತಾ ಕ್ರಮೇಣ ಮೂಲೆಗುಂಪಾಗುತ್ತಿರುವುದು ಕಂಡು ಬರುತ್ತಿದೆ. ಆರಂಭದಲ್ಲಿ ಅಭಿಯಾನ ಪ್ರಾರಂಭವಾದಾಗ ಭಾರೀ ಉತ್ಸಾಹದಿಂದ ರಾಜಕಾರಣಿಗಳು, ಶಾಲಾ ಮಕ್ಕಳು ಮತ್ತು ಸಂಘ ಸಂಸ್ಥೆಗಳು ವಾರಕ್ಕೊಮ್ಮೆ, ತಿಂಗಳಿಗೊಮ್ಮೆ ಸ್ವತಃ ಪೊರಕೆಗಳನ್ನು ಹಿಡಿದು ಪತ್ರಿಕೆ ಮತ್ತು ಮಾಧ್ಯಮಗಳಲ್ಲಿ ಪ್ರಚಾರ ಗಿಟ್ಟಿಸಿಕೊಂಡು ಸ್ವಚ್ಛತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದರು. ಪ್ರತಿ ಗ್ರಾಮ ಪಂಚಾಯಿತಿಗೆ ಲಕ್ಷಾಂತರ ಹಣ ಖರ್ಚು ಮಾಡಿ ಸರಕಾರದಿಂದ ಕಸವಿಲೇವಾರಿ ಘಟಕ, ಹಸಿ ಕಸ, ಒಣ ಕಸ, ಬೇರ್ಪಡಿಸುವ ವಿಧಾನ ಮತ್ತು ಕಸವನ್ನು ಮನೆ ಮನೆಯಿಂದ ಸಂಗ್ರಹಿಸಿ ಸಾಗಿಸಲು ವಾಹನ ಮತ್ತು ಚಾಲಕರನ್ನು ನೇಮಿಸಿದೆ. ಹೀಗಿದ್ದರೂ ತಾಲೂಕಿನ ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಸ್ವಚ್ಛ ಭಾರತ ಮಾಡದೆ ರಾಶಿ ರಾಶಿ ಕಸಗಳು ತುಂಬಿರುವ ದೃಶ್ಯಗಳು ಇತ್ತೀಚೆಗೆ ಕಂಡುಬರುತ್ತಿದೆ. ಇದಕ್ಕೆ ಉದಾಹರಣೆ ಸೋಮವಾರಪೇಟೆ ತಾಲೂಕಿನ ಏ ಗ್ರೇಡ್ ಪಂಚಾಯಿತಿ ಎಂಬ ನಾಮಕರಣ ಹೊಂದಿರುವ ಬಜೆಗುಂಡಿ ಗ್ರಾಮದ ಬೇಳೂರು ಗ್ರಾಮ ಪಂಚಾಯಿತಿ. ಸ್ವಚ್ಛತೆಯ ವಿಷಯದಲ್ಲಿ ಮುಂದೆ ಇದ್ದ ಈ ಪಂಚಾಯಿತಿ ಒಂದು ಹೆಜ್ಜೆ ಹಿಂದೆ ಸರಿದಂತೆ ಕಂಡು ಬರುತ್ತದೆ. ಬಜೆಗುಂಡಿ ಗ್ರಾಮದಿಂದ ಕೋವರ್ ಕೊಲ್ಲಿಯ ತನಕ ಹೆದ್ದಾರಿ ರಸ್ತೆಯ ಇಕ್ಕೆಲಗಳಲ್ಲಿ ರಾಶಿ ರಾಶಿ ಕಸಗಳೇ ತುಂಬಿದ್ದು ಸ್ವಚ್ಛ ಭಾರತ ಅಭಿಯಾನ ಮೂಲೆಗುಂಪಾದAತೆ ಕಂಡುಬರುತ್ತಿದೆ. ಇಲ್ಲಿಯ ಸಮುದಾಯ ಭವನದಲ್ಲಿ ಮದುವೆ ಮತ್ತು ಕೆಲವು ಸಾಮಾಜಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಈ ಸಮುದಾಯ ಭವನದ ಸುತ್ತಲೂ ರಾಶಿ ರಾಶಿ ಕಸದ ಗುಡ್ಡೆಗಳೇ ಕಾಣುತ್ತಿದ್ದು, ಹಳೆಯ ತ್ಯಾಜ್ಯ ವಸ್ತುಗಳು, ಖಾಲಿ ನೀರಿನ ಬಾಟಲ್‌ಗಳು, ಮದ್ಯದ ಖಾಲಿ ಪ್ಯಾಕೆಟ್ಟುಗಳು ತುಂಬಿದ್ದು ಗಬ್ಬೆದ್ದು ನಾರುವ ವಾತಾವರಣದಿಂದ ಕೂಡಿದೆ. ಕೆಲವು ಸಮಾರಂಭದ ದಿನಗಳಂದು ಈ ಭವನದ ಸುತ್ತಲೂ ಇರುವ ತ್ಯಾಜ್ಯ ವಸ್ತುಗಳ ದುರ್ವಾಸನೆಯನ್ನು ಸೇವಿಸಿಕೊಂಡೆ ಭೋಜನವನ್ನು ಸೇವಿಸುವ ಪರಿಸ್ಥಿತಿ ಎದುರಾಗಿದೆ. ಸಮುದಾಯ ಭವನದ ಪಕ್ಕದಲ್ಲಿ ಶನೀಶ್ವರನ ದೇವಾಲಯವಿದ್ದು ಭಕ್ತಿಯ ಪ್ರತೀಕವಾದ ಜಾಗವಾಗಿದೆ. ಇಲ್ಲಿಯ ಹೆದ್ದಾರಿ ರಸ್ತೆಯ ಮುಂಭಾಗದ ಬದಿಯಲ್ಲಿ ಅಯ್ಯಪ್ಪ ದೇವಾಲಯ ಮತ್ತು ಮಸೀದಿಯಿದ್ದು, ಮಸೀದಿಯ ಮುಂಭಾಗದ ರಸ್ತೆಯ ಬದಿಯಲ್ಲಿ ಕಸದ ರಾಶಿಗಳು ತುಂಬಿ ಹೋಗಿದ್ದು, ಸ್ವಚ್ಛ ಮಾಡಿ ಬೇರೆಡೆಗೆ ಸಾಗಿಸದ ಬಗ್ಗೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರ್ಕಾರವು ನೀಡಿದ ಸ್ವಚ್ಛತೆಯ ವಾಹನದಲ್ಲಿ ಈ ಕಸವನ್ನು ಸಾಗಿಸುವ ವ್ಯವಸ್ಥೆಯನ್ನು ಮಾಡುವ ಬಗ್ಗೆ ಯಾರೂ ತಲೆಕೆಡಿಸಿಕೊಂಡAತೆ ಕಾಣುತ್ತಿಲ್ಲ. ಕೂಲಿ ಕಾರ್ಮಿಕರೇ ಅಧಿಕವಾಗಿರುವ ಬಜೆಗುಂಡಿ ಗ್ರಾಮದಲ್ಲಿ ಜನಸಂಖ್ಯೆಯಲ್ಲಿ ದಿನದಿಂದ ದಿನಕ್ಕೆ ಬೆಳವಣಿಗೆ ಕಾಣುತ್ತಿದೆ. ಕಸದ ವಾಹನವಿದ್ದರೂ ಕಸದ ರಾಶಿಗಳು ಗ್ರಾಮಗಳಲ್ಲೆಲ್ಲ ತುಂಬಿ ಗ್ರಾಮದ ಸೌಂದರ್ಯವನ್ನೇ ಹಾಳುಗೆಡಹುತ್ತಿದೆ. ಆದ್ದರಿಂದ ಗ್ರಾಮಗಳು ಸ್ವಚ್ಛವಾಗಿರಲು ಸರಕಾರದ ಅನುದಾನದಿಂದ ಬಂದAತಹ ಲಕ್ಷಾಂತರ ರೂ.ಗಳ ಈ ಬೃಹತ್ ಯೋಜನೆ ದಿನದಿಂದ ದಿನಕ್ಕೆ ಮೂಲೆಗುಂಪಾಗದಿರಲು ಗ್ರಾಮಸ್ಥರು ಮತ್ತು ಜನಪ್ರತಿನಿಧಿಗಳು ಪಣತೊಡಬೇಕಿದೆ. - ಸುಕುಮಾರ, ಐಗೂರು