ಮಡಿಕೇರಿ, ಏ. ೨೩: ಕೊಡಗು ಗೌಡ ಯುವ ವೇದಿಕೆ ವತಿಯಿಂದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಗೌಡ ಪ್ರೀಮಿಯರ್ ಲೀಗ್ ಲೆದರ್‌ಬಾಲ್ ಕ್ರಿಕೆಟ್‌ನಲ್ಲಿ ಎಲೈಟ್ ಸ್ಕಾ÷್ವಡ್ ೨ ಕ್ವಾಲಿಫೈಯರ್ ಹಂತ ತಲುಪಿದೆ. ಪ್ಲಾಂರ‍್ಸ್ ಕ್ಲಬ್ ಬಿಳಿಗೇರಿ ಎಲಿಮಿನೇಟರ್ ಹಂತ ತಲುಪಿದೆ.

ಕಾಫಿ ಕ್ರಿಕೆಟರ್ಸ್ v/s ಪ್ಲಾಂಟರ್ಸ್ ಕ್ಲಬ್ ಬಿಳಿಗೇರಿ ನಡುವಿನ ಪಂದ್ಯದಲ್ಲಿ ಪ್ಲಾಂಟರ್ಸ್ ಕ್ಲಬ್ ಬಿಳಿಗೇರಿಗೆ ೬ ವಿಕೆಟ್‌ಗಳ ಜಯ ಗಳಿಸಿತು. ಟಾಸ್ ಸೋತು ಬ್ಯಾಟಿಂಗ್ ಮಾಡಿದ ಕಾಫಿ ಕ್ರಿಕೆಟರ್ಸ್ ತಂಡ ನಿಗದಿತ ೧೦ ಓವರ್‌ಗಳಿಗೆ ೭ ವಿಕೆಟ್ ನಷ್ಟಕ್ಕೆ ೬೮ ರನ್ ಗಳಿಸಿ ೬೯ ರನ್‌ಗಳ ಟಾರ್ಗೆಟ್ ನೀಡಿತು. ದೀಪಕ್ ೧೬ ಎಸೆತಗಳಿಗೆ ೧೮ ರನ್ ಗಳಿಸಿದರು. ಪ್ಲಾಂಟರ್ಸ್ ಕ್ಲಬ್ ಪರ ಕೊಂಬಾರನ ರಂಜು ಮತ್ತು ತುಷಾರ್ ಮೂವನ ತಲಾ ೨ ವಿಕೆಟ್ ಪಡೆದರು.

ಪ್ಲಾಂಟರ್ಸ್ ಕ್ಲಬ್ ೮.೨ ಓವರಿನಲ್ಲಿ ೬೯ ರನ್ ಗಳಿಸುವ ಮೂಲಕ ಜಯ ಗಳಿಸಿತು. ರೋಹನ್ ೨೬ ಎಸೆತಗಳಿಗೆ ೪೩ ರನ್ ಪಡೆದರು. ಎರಡನೇ ಪಂದ್ಯಾಟದಲ್ಲಿ ಎಲೈಟ್ ಕ್ರಿಕೆಟ್ ಕ್ಲಬ್ ಸ್ಕಾ÷್ವಡ್-೨ ತಂಡ ದಿ ಮರಗೋಡಿಯನ್ಸ್ ತಂಡದ ವಿರುದ್ಧ ೩೫ ರನ್‌ಗಳ ಗೆಲುವು ದಾಖಲಿಸಿತು.

ಟಾಸ್ ಸೋತು ಬ್ಯಾಟಿಂಗ್ ಮಾಡಿದ ಎಲೈಟ್ ತಂಡ ೧೦ ಓವರ್‌ಗಳಲ್ಲಿ ೫ ವಿಕೆಟ್ ನಷ್ಟಕ್ಕೆ ೧೨೬ ರನ್ ಕಲೆ ಹಾಕಿತು. ತಂಡದ ಪರ ರಾಹುಲ್ ಸತತ ನಾಲ್ಕನೇ ಅರ್ಧ ಶತಕ ದಾಖಲಿಸಿದರು. ೨೭ ಎಸೆತಗಳಲ್ಲಿ ೬೮ ರನ್ ಗಳಿಸಿದರು. ೭ ಬೌಂಡರಿ, ೪ ಸಿಕ್ಸರ್ ಬಾರಿಸಿದರು. ಮರಗೋಡಿಯನ್ಸ್ ಪರ ಶರ್ವಿನ್ ೨ ವಿಕೆಟ್ ಪಡೆದರು. ಗುರಿ ಬೆನ್ನತ್ತಿದ ಮರಗೋಡಿಯನ್ಸ್ ತಂಡ ೧೦ ಓವರ್‌ಗಳಲ್ಲಿ ೬ ವಿಕೆಟ್ ನಷ್ಟಕ್ಕೆ ೯೧ ಗಳಿಸಿ ಸೋಲೊಪ್ಪಿಕೊಂಡಿತು. ಎಲೈಟ್ ತಂಡದ ಪರ ಹುದೇರಿ ತಮ್ಮಣ್ಣ ೩ ವಿಕೆಟ್, ಹೃತ್‌ಪೂರ್ವಕ್ ಕೂರನ ೨ ವಿಕೆಟ್ ಪಡೆದರು.

ಇದರೊಂದಿಗೆ ಆಡಿದ ನಾಲ್ಕು ಪಂದ್ಯಗಳನ್ನು ಗೆದ್ದ ಎಲೈಟ್ ತಂಡ ೨-ಪೂಲ್‌ನ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿತು.

ದಿನದ ಮೂರನೇ ಪಂದ್ಯ ಕೂರ್ಗ್ ಹಾಕ್ಸ್ v/s ಕಾಫಿ ಕ್ರಿಕೆಟರ್ಸ್ ನಡುವೆ ನಡೆದು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ಕಾಫಿ ಕ್ರಿಕೆಟರ್ಸ್ ನಿಗದಿತ ೧೦ ಓವರ್‌ಗಳಿಗೆ ೪ ವಿಕೆಟ್ ನಷ್ಟಕ್ಕೆ ೭೬ ರನ್ ಗಳಿಸಿ ೭೭ ರನ್‌ಗಳ ಟಾರ್ಗೆಟ್ ನೀಡಿತು. ಪವನ್ ೨೯ ಎಸೆತಕ್ಕೆ ೩೫ ರನ್‌ಗಳಿಸಿದರು. ಕೂರ್ಗ್ ಹಾಕ್ಸ್ ಪರ ಹರ್ಷ ಕೊಂಬಾರನ ೨ ವಿಕೆಟ್ ಪಡೆದರು.

ಕೂರ್ಗ್ ಹಾಕ್ಸ್ ೭೨ ರನ್ ಗಳಿಸಿ ಸೋಲೊಪ್ಪಿಕೊಂಡಿತು. ಕೀರ್ತನ್ ಕಾಳೆಮನೆ ೨೪ ಎಸೆತಕ್ಕೆ ೩೪ ರನ್ ಪಡೆದರು. ಕಾಫಿ ಕ್ರಿಕೆಟರ್ಸ್ ಪರ ದೀಪಕ್, ತಳೂರು ವಿಕ್ಕಿ, ಪವನ್ ತಲಾ ಒಂದು ವಿಕೆಟ್ ಗಳಿಸಿದರು. ಕೂರ್ಗ್ ಹಾಕ್ಸ್ ತಂಡದಲ್ಲಿ ಮಹಿಳಾ ಆಟಗಾರರ್ತಿ ಕುಕ್ಕೇರ ಬೆಳಕು ಬೊಳ್ಳಮ್ಮ ಆಡಿ ಗಮನ ಸೆಳೆದರು.