ಸಿದ್ದಾಪುರ, ಏ.೨೩: ರಾತ್ರಿ ಸಮಯದಲ್ಲಿ ಕಾಡಾನೆಗಳು ಮನೆಯ ಅಂಗಳದ ಬಳಿ ಲಗ್ಗೆ ಇಟ್ಟು ದಾಂಧಲೆ ನಡೆಸುತ್ತಿರುವ ಘಟನೆ ಕರಡಿಗೋಡು ಗ್ರಾಮದಲ್ಲಿ ನಡೆದಿದೆ.

ಕರಡಿಗೋಡು ಗ್ರಾಮದ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳ ಪೈಕಿ ರೇಡಿಯೋ ಕಾಲರ್ ಅಳವಡಿಸಿರುವ ಕಾಡಾನೆವೊಂದು ಮನೆಯ ಬಳಿ ಮಧ್ಯರಾತ್ರಿ ಸುತ್ತಾಡುತ್ತಾ ಉಪಟಳ ನೀಡುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಕರಡಿಗೋಡು ಗ್ರಾಮದ ಟೀಕ್‌ವುಡ್ ಕಾಫಿ ತೋಟಗಳ ಸುತ್ತಮುತ್ತಲಿನಲ್ಲಿ ದಿನನಿತ್ಯ ಕಾಡಾನೆಗಳು ಸುತ್ತಾಡುತ್ತಾ ಆತಂಕ ಸೃಷ್ಟಿಸಿವೆ.

ರಾತ್ರಿ ಸಮಯದಲ್ಲಿ ಮನೆ ಅಂಗಳದಲ್ಲಿ ಸುತ್ತಾಡುತ್ತಿರುವುದರಿಂದ ಸ್ಥಳೀಯ ನಿವಾಸಿಗಳು ಭಯಭೀತರಾಗಿದ್ದಾರೆ. ಕಾರ್ಮಿಕರು ಕೂಡ ಕೆಲಸಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.