ಕುಶಾಲನಗರ, ಏ. ೨೨: ಕುಶಾಲನಗರ ಪಟ್ಟಣದ ಬಾರ್ ವೊಂದರಲ್ಲಿ ಗಾಜಿನ ಲೋಟ ದಿಂದ ತಲೆ ಮತ್ತು ಕುತ್ತಿಗೆಗೆ ಚುಚ್ಚಿ

ಮಾರಣಾಂತಿಕ ಹಲ್ಲೆ ನಡೆಸಿ ನೌಕರ ನೊಬ್ಬನನ್ನು ಕೊಲೆ ಮಾಡಿದ ಘಟನೆ ಭಾನುವಾರ ರಾತ್ರಿ ನಡೆದಿದೆ. ಬಾರ್‌ನಲ್ಲಿ ಕ್ಯಾಷಿಯರ್ ಆಗಿದ್ದ ಸಂತೋಷ್ (೪೦) ಮೃತಪಟ್ಟ ವ್ಯಕ್ತಿ. ಆರೋಪಿ ಹರ್ಷಿತ್ (೩೪) ಎಂಬಾತನನ್ನು ಕುಶಾಲನಗರ ಪಟ್ಟಣ ಪೊಲೀಸರು ಬಂಧಿಸಿ ಕ್ರಮ ಕೈಗೊಂಡಿದ್ದಾರೆ. ರಾತ್ರಿ ೧೧:೩೦ಕ್ಕೆ ಘಟನೆ ನಡೆದಿದೆ. ಆರೋಪಿ ಹರ್ಷಿತ್ ಕುಶಾಲನಗರ ಜನತಾ ಕಾಲೋನಿಯ ನಿವಾಸಿಯಾಗಿದ್ದು, ಕೈಗಾರಿಕಾ ಬಡಾವಣೆಯ ಕಾಫಿ ಸಂಸ್ಕರಣಾ ಘಟಕವೊಂದರಲ್ಲಿ ಸ್ಟೋರ್ ಕೀಪರ್ ಆಗಿ ಕೆಲಸ ನಿರ್ವಹಿಸುತ್ತಿದ್ದ.

ಭಾನುವಾರ ಮಧ್ಯಾಹ್ನ ೩ ಗಂಟೆಯಿAದ ರಾತ್ರಿ ೧೧:೩೦ ತನಕ ಹರ್ಷಿತ್ ಬಾರ್‌ನಲ್ಲಿ ಕುಡಿದು ತಡರಾತ್ರಿ ತನಕ ಅಲ್ಲೇ ಇದ್ದು ಬಾರ್ ಮುಚ್ಚುವ ವೇಳೆ ಸಂತೋಷ್ ಬಳಿ ಮದ್ಯ ನೀಡಲು ಬೇಡಿಕೆ ಇಟ್ಟಿದ್ದಾನೆ. ಈ ಸಂದರ್ಭ ಸಮಯ ಮೀರಿದ ಕಾರಣ ಮದ್ಯ ನೀಡಲಾಗುವುದಿಲ್ಲ ಎಂದು ಸಂತೋಷ್ ಹೇಳಿದ್ದು, ಈ ವೇಳೆ ನಡೆದ ಮಾತಿನ ಚಕಮಕಿ ಅತಿರೇಕಕ್ಕೆ ತಿರುಗಿ ಆರೋಪಿ ಹರ್ಷಿತ್ ಅಲ್ಲಿದ್ದ ಬಿಯರ್ ಲೋಟ ತೆಗೆದು ಸಂತೋಷ್ ತಲೆಗೆ ಹೊಡೆದು ನಂತರ ಕುತ್ತಿಗೆಗೆ ಚುಚ್ಚಿದ್ದಾನೆ.

ಹೊಟೇಲ್ ಆವರಣದಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭದಲ್ಲಿ ಪಾಲ್ಗೊಂಡ ಕೆಲವರು ತಡೆಯಲು ಯತ್ನಿಸಿದರೂ ಆರೋಪಿ ಹರ್ಷಿತ್ ಅವರುಗಳನ್ನು ಬೆದರಿಸಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಸಂತೋಷ್‌ಗೆ ಕುಶಾಲನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಂತರ ಮಡಿಕೇರಿಗೆ ಸಾಗಿಸಿ ಆಸ್ಪತ್ರೆಗೆ ತಲುಪುವ ಸಂದರ್ಭ ಮೃತಪಟ್ಟಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಆರೋಪಿ ಹರ್ಷಿತ್‌ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪೊಲೀಸರು ಚಿಕಿತ್ಸೆ ನೀಡಲು ಕ್ರಮ ಕೈಗೊಂಡಿದ್ದಾರೆ. ಮದ್ಯ ನೀಡಲಿಲ್ಲ ಎಂಬುದೇ ದುರ್ಘಟನೆಗೆ ಕಾರಣವೇ ಅಥವಾ ಬೇರೇನಾದರೂ ಕಾರಣವಿತ್ತೇ ಎಂಬುದು ಪೊಲೀಸ್ ತನಿಖೆಯಿಂದ ಬಯಲಾಗಬೇಕಿದೆ. ಮೃತನ ಪತ್ನಿ ಲತಾ ಅವರು ಕುಶಾಲನಗರ ಪಟ್ಟಣ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಸಿಸಿ ಕ್ಯಾಮರಾದ ದೃಶ್ಯಾವಳಿಗಳನ್ನು ಕಲೆ ಹಾಕುತ್ತಿದ್ದಾರೆ. ಕುಶಾಲನಗರ ಡಿವೈಎಸ್‌ಪಿ ಆರ್.ವಿ. ಗಂಗಾಧರಪ್ಪ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.

ಸ್ಥಳಕ್ಕೆ ಕೊಡಗು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳಕ್ಕೆ ಜಿಲ್ಲಾ ಪೊಲೀಸ್ ಇಲಾಖೆಯ ಬೆರಳಚ್ಚು ತಜ್ಞರು, ಅಬಕಾರಿ ಅಧಿಕಾರಿಗಳು, ಚುನಾವಣಾ ಅಧಿಕಾರಿಗಳು ಕೂಡ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ.

ಮೃತ ಸಂತೋಷ್ ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಸಂತೋಷ್ ಮೂಲತಃ ಶಾಂತಳ್ಳಿ ಗ್ರಾಮದ ನಿವಾಸಿಯಾಗಿದ್ದು ಕಳೆದ ೧೫ ವರ್ಷಗಳಿಂದ ಹೊಟೇಲ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು.

ಘಟನೆ ಹಿನ್ನೆಲೆಯಲ್ಲಿ ಕುಶಾಲನಗರ ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಮೋದ್ ಮುತ್ತಪ್ಪ ಮತ್ತು ಇತರರು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿ ಮಾಡಿ ಆರೋಪಿ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಮೃತನ ಕುಟುಂಬಕ್ಕೆ ಸರಕಾರದಿಂದ ಪರಿಹಾರ ನೀಡಲು ಶಿಫಾರಸ್ಸು ಮಾಡಬೇಕು ಎಂದು ಒತ್ತಾಯಿಸಿದರು.