ಕಣಿವೆ, ಏ. ೨೨: ಕುಡಿಯುವ ನೀರಿನ ಬವಣೆಯನ್ನು ನೀಗಿಸಬೇಕೆಂದು ಒತ್ತಾಯಿಸಿ ಹೆಬ್ಬಾಲೆ ಗ್ರಾಮ ಪಂಚಾಯಿತಿ ಮುಂದೆ ಮಹಿಳೆಯರು ಪ್ರತಿಭಟನೆ ನಡೆಸಿದರು.

ಕುಶಾಲನಗರ ತಾಲೂಕಿನ ಹಳಗೋಟೆ ಗ್ರಾಮದ ಮಡಿವಾಳರ ಬೀದಿಯಲ್ಲಿ ಕುಡಿಯುವ ನೀರಿಲ್ಲದೇ ಜನ ಹೈರಾಣಾಗಿದ್ದಾರೆ. ಈ ಬಗ್ಗೆ ಸ್ಥಳೀಯ ಹೆಬ್ಬಾಲೆ ಗ್ರಾಮ ಪಂಚಾಯಿತಿಗೆ ಸಾಕಷ್ಟು ಬಾರಿ ಮನವಿ ನೀಡಿ ಒತ್ತಾಯಿಸಿದರೂ ಯಾವುದೇ ಪ್ರಯೋಜನವಾಗದ ಕಾರಣ ಮಹಿಳೆಯರು ಖಾಲಿ ಕೊಡಗಳನ್ನು ಹಿಡಿದು ಹೆಬ್ಬಾಲೆ ಗ್ರಾಮ ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸಿ ತಮ್ಮ ಅಳಲು ತೋಡಿಕೊಂಡರು.

ಅಲ್ಲದೇ ಇನ್ನೆರಡು ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸದಿದ್ದಲ್ಲಿ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವ ಬಗ್ಗೆಯೂ ನಿರ್ಧರಿಸಿದ ಮಹಿಳೆಯರು ಕುಡಿಯಲು ನೀರು ಕೊಡದ ಆಡಳಿತಾರೂಢರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭ ಸ್ಥಳಕ್ಕೆ ಹೆಬ್ಬಾಲೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅರುಣಕುಮಾರಿ ಆಗಮಿಸಿ ನೀರಿನ ಬವಣೆಯನ್ನು ನೀಗಿಸುವ ಭರವಸೆ ನೀಡಿದರೂ ಕೂಡ ಪ್ರತಿಭಟನಾ ನಿರತ ಮಹಿಳೆಯರು ಅಧ್ಯಕ್ಷರ ಮನವಿಗೆ ಮಣಿಯಲೇ ಇಲ್ಲ.

ಪಂಚಾಯಿತಿಯಲ್ಲಿ ಪಿಡಿಒ ಇಲ್ಲ. ಸಮಸ್ಯೆ ಪರಿಹಾರಕ್ಕೆ ತಡವಾಗುತ್ತಿದೆ ಎಂದು ಅಧ್ಯಕ್ಷೆ ಹೇಳಿದಾಗ ಪ್ರತಿಭಟನಾನಿರತ ಮಹಿಳೆಯರು ಖಾಯಂ ಪಿಡಿಒ ನೇಮಕಕ್ಕೂ ಆಗ್ರಹಿಸಿದರು.