ಸೋಮವಾರಪೇಟೆ, ಏ. ೨೨: ತಾಲೂಕು ಕಾಫಿ ಬೆಳೆಗಾರರ ಕುಂದುಕೊರತೆ ಸಭೆ ಇಲ್ಲಿನ ಕೊಡವ ಸಮಾಜದ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಮೋಹನ್ ಬೋಪಣ್ಣ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಮಾತನಾಡಿದ ಮೋಹನ್ ಬೋಪಣ್ಣ, ಇತ್ತೀಚಿನ ವರ್ಷಗಳಲ್ಲಿ ಕಾಫಿ ಬೆಳೆಗಾರರು ಸಂಕಷ್ಟದ ಜೀವನ ನಡೆಸುತ್ತಿದ್ದಾರೆ. ಹವಾಮಾನ ವೈಪರೀತ್ಯದಿಂದ ಕಾಫಿ ತೋಟ ಮತ್ತು ಬೆಳೆ ಉಳಿಸಿ ಕೊಳ್ಳುವುದೇ ಸಾಹಸವಾಗಿದೆ. ಬೆಳೆಗೆ ಬೆಲೆ ಇದ್ದರೂ, ತೋಟಗಳಲ್ಲಿ ಬೆಳೆ ಇಲ್ಲ. ಕೂಲಿ ಕಾರ್ಮಿಕರ ವೇತನ, ರಾಸಾಯನಿಕ ಗೊಬ್ಬರ ಸೇರಿದಂತೆ ಎಲ್ಲದರ ಬೆಲೆ ಹೆಚ್ಚಳದಿಂದಾಗಿ ತೋಟಗಳ ನಿರ್ವಹಣಾ ವೆಚ್ಚ ದುಪ್ಪಟ್ಟಾಗಿದೆ. ಆದುದ್ದರಿಂದ ಬೆಳೆಗಾರರು ಕೆಲವೊಂದು ನಿರ್ಣಯ ಗಳನ್ನು ಕೈಗೊಂಡು ಅದು ಪರಿಣಾಮಕಾರಿಯಾಗಿ ಜಾರಿ ಯಾಗುವಂತೆ ನೋಡಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಪಾಲ್ಗೊಂಡಿದ್ದ ಬೆಳೆಗಾರರು, ಕಾರ್ಮಿಕರ ವೇತನ ಮತ್ತು ಕೆಲಸದ ಸಮಯವನ್ನು ನಿಗದಿಗೊಳಿಸಬೇಕು. ಕಾರ್ಮಿಕರ ಕೊರತೆಯಿಂದಾಗಿ ಕೆಲಸ ಕಾರ್ಯಗಳಿಗೆ ಸಮಸ್ಯೆಯಾಗಿದೆ. ಅಂತೆಯೇ ವೇತನ ನಿಗದಿಯಿಲ್ಲದೆ ಬೆಳೆಗಾರರಿಗೆ ಹೊರೆಯಾಗುತ್ತಿದೆ ಎಂದರು.
ಎಲ್ಲ ತೋಟಗಳಲ್ಲಿ ಕಾರ್ಮಿಕರು ಬೆಳಿಗ್ಗೆ ೯ರಿಂದ ಸಂಜೆ ೪-೩೦ರವರೆಗೆ ಕೆಲಸ ಮಾಡಬೇಕು. ಕಾರ್ಮಿಕರ ವೇತನ ಮತ್ತು ಪಿಕ್ಅಪ್ ವಾಹನದ ಬಾಡಿಗೆಗೆ ಸಂಬAಧಿಸಿದAತೆ ಮೇ. ೬ರಂದು ಮತ್ತೊಮ್ಮೆ ಬೆಳೆಗಾರರು, ಪಿಕ್ಅಪ್ ಮಾಲೀಕರು ಹಾಗೂ ಕಾರ್ಮಿಕ ಮುಖಂಡರೊಡನೆ ಚರ್ಚಿಸಿ ಸೂಕ್ತ ನಿರ್ಣಯ ಕೈಗೊಳ್ಳುವಂತೆ ಸಭೆ ತೀರ್ಮಾನಿಸಿತು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಬಿ.ಎಂ. ಲವ, ಕಾರ್ಯದರ್ಶಿ ಪ್ರಕಾಶ್, ಕಾಫಿ ಬೆಳೆಗಾರರಾದ ಎಸ್.ಜಿ. ಮೇದಪ್ಪ, ರಾಮಚಂದ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು.