ಕಣಿವೆ, ಏ. ೨೦: ಈ ಬಾರಿ ಯುಗಾದಿ ಕಳೆದರೂ ಕೂಡ ಮಳೆರಾಯನ ಸುಳಿವಿಲ್ಲ. ಕಣಿವೆ ಸಮೀಪದ ಭುವನಗಿರಿ ಗ್ರಾಮದಲ್ಲಿ ಕುಡಿವ ನೀರಿನ ಜಲಮೂಲಗಳೆಲ್ಲಾ ಬತ್ತಿ ಬಸವಳಿದು ಹೋಗಿದ್ದು, ಜನ ಜಾನುವಾರುಗಳು ಹೈರಾಣಾಗಿವೆ.
ಇನ್ನು ಸಣ್ಣ ಪುಟ್ಟ ರೈತರು ಸಾಕಿರುವ ಆಡು - ಮೇಕೆ, ಕುರಿಗಳಿಗೂ ಕುಡಿವ ನೀರಿಲ್ಲದ ಕಾರಣ ಬಾಯಾರಿ ಬಸವಳಿದ ಮೇಕೆಗಳು ನೀರಿಗಾಗಿ ಕೇಕೆ ಹಾಕುತ್ತಿವೆ. ಇಷ್ಟು ದಿನ ಒಂದಷ್ಟು ಮಂದಿ ತಮ್ಮ ಜಮೀನುಗಳಲ್ಲಿ ಅಳವಡಿಸಿಕೊಂಡಿರುವ ಕೊಳವೆ ಬಾವಿಗಳ ನೀರನ್ನು ನೀರಿಲ್ಲದ ನೆರೆ ಹೊರೆಯವರಿಗೆ ಉಚಿತವಾಗಿ ನೀಡುತ್ತಿದ್ದರು.
ಇದೀಗ ಕೊಳವೆ ಬಾವಿಗಳೂ ಕೂಡ ಕೈಕೊಡುತ್ತಿರುವುದರಿಂದ ಕೊಳವೆ ಬಾವಿಗಳನ್ನು ಹೊಂದಿರುವ ರೈತರು ಅನ್ಯರಿಗೆ ನೀರು ಕೊಡುವುದನ್ನು ನಿಲ್ಲಿಸಿದ್ದಾರೆ. ಇಷ್ಟು ದಿನ ಹಾರಂಗಿ ಜಲಾಶಯದಿಂದ ಒಣಗಿದ ಕಾವೇರಿ ನದಿಗೆ ಹಾರಂಗಿ ನದಿಯ ಮೂಲಕ ಒಂದಷ್ಟು ನೀರನ್ನು ಹರಿಯ ಬಿಡಲಾಗಿತ್ತು. ಅದರಿಂದ ನದಿಯಂಚಿನ ಅದೆಷ್ಟೋ ಜನ ಜಾನುವಾರುಗಳು ನಿಟ್ಟುಸಿರು ಬಿಡುವಂತಾಗಿತ್ತು.
ಇದೀಗ ಹಾರಂಗಿ ಜಲಾಶಯದಿಂದ ನೀರು ಹರಿಸುವುದನ್ನು ನಿಲ್ಲಿಸಲಾಗಿದೆ. ಇದು ಈ ಭಾಗದ ಮಂದಿಗೆ ಮುಂದೇನು ಎಂಬ ಚಿಂತೆಯುAಟುಮಾಡಿದೆ.
೨೫ ರಷ್ಟು ಆಡು (ಮೇಕೆ) ಗಳನ್ನು ಹೊಂದಿರುವ ಭುವನಗಿರಿಯ ಕೃಷ್ಣ ಎಂಬವರು ಆಡುಗಳ ದಾಹ ತಣಿಸಲು ತಮ್ಮ ಮನೆಯಿಂದ ಎರಡು ಕಿಮೀ ನಷ್ಟು ದೂರದ ಕಣಿವೆಯ ಕೆರೆಯೊಂದರ ಅಂಗಳಕ್ಕೆ ಒಯ್ಯುತ್ತಿದ್ದ ಚಿತ್ರಣ ‘ಶಕ್ತಿ'ಗೆ ಕಂಡುಬAತು.
ಕುರಿ, ಮೇಕೆಗಳ ಇಷ್ಟದ ತಿನಿಸಾದ ಹಸಿರು ಎಲೆಗಳನ್ನು ಎಲ್ಲಿಂದಲಾದರೂ ತಂದು ಕೊಟ್ಟು ತಿನ್ನಿಸಬಹುದು. ಆದರೆ ಕುಡಿಯುವ ನೀರನ್ನು ದೂರದಿಂದ ಹೊತ್ತು ತಂದು ಕುಡಿಸಲು ಆಗುತ್ತಿಲ್ಲ ಎಂದು ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ ಆಡು-ಮೇಕೆಗಳ ಪಾಲಕ ಕೃಷ್ಣ, ನಾನು ಸುಮಾರು ೩೦ ವರ್ಷಗಳಿಂದ ಆಡುಗಳನ್ನು ಸಾಕುತ್ತಿದ್ದೇನೆ.
ಯಾವತ್ತೂ ಇಂತಹ ಬರವನ್ನು ನೋಡಿರಲಿಲ್ಲ. ಬೀದಿಯಲ್ಲಿ ಕಾಲು ಇಡಲಾಗದಷ್ಟು ಕಾದ ಭೂಮಿ. ನೆತ್ತಿಯ ಸುಡುವ ಬಿಸಿಲು, ಹನಿ ನೀರಿಗೂ ಪರದಾಡುವ ಸ್ಥಿತಿ ನಮ್ಮ ಕಾಲಕ್ಕೆ ಬರುತ್ತೆ ಅಂತ ಅಂದುಕೊAಡಿರಲಿಲ್ಲ.
ಈಗಾಗಲೇ ಹೀಗಾದರೆ ಮುಂದಿನ ಮಕ್ಕಳ, ಮೊಮ್ಮಕ್ಕಳ ಕಾಲದ ಕಥೆ ಏನಾಗಬಹುದು ಎಂಬ ಭಯ ಭೀತ ನುಡಿಯಾಡಿದರು.
- ಕೆ.ಎಸ್. ಮೂರ್ತಿ, ಕಣಿವೆ