ಚೆಟ್ಟಳ್ಳಿ, ಏ. ೧೯: ಹುಲಿವೇಷ... ಪೀಲ್ಲ್ಭೂತ.. ಬಂಡ್‌ಕಳಿ.., ಜೋಯಿಚೂಳೆ... ನರಿಮಂಗಲ.. ಕೋಡಂಗಿ.. ಬುಡ್‌ಬುಡ್‌ಕೆ, ಪುರುಷರು ಮಹಿಳೆಯರ ವೇಷ.. ತಾಲಿಪಾಟ್ ಹೀಗೆ ವಿವಿಧ ವೇಷಭೂಣದೊಂದಿಗೆ ಆಕರ್ಷಣೀಯ ವಿನೋದ, ಉಲ್ಲಾಸ, ಭಕ್ತಿಯ ಹೆಗ್ಗುರುತಿನ ಕೊಡಗಿನ ಬೋಡ್ ನಮ್ಮೆಯ ಸಾಂಪ್ರದಾಯಿಕ ವೈಭವದ ಆಚರಣೆಗೆ ಸಿದ್ಧತೆ ನಡೆಯುತ್ತಿದೆ...

ಕೊಡಗಿನಲ್ಲೀಗ ಎಲ್ಲೆಡೆ ದೇವರ ಉತ್ಸವದ ಆಚರಣೆ ಸಡಗರ. ತಮ್ಮ ಕೆಲಸ ಕಾರ್ಯವನ್ನೆಲ್ಲ ಬದಿಗಿಟ್ಟು ಊರಿನ ದೇವಾಲಯದ ಕಟ್ಟುಪಾಡಿನಂತೆ ನಡೆಯುತ್ತಾ ಉತ್ಸವದಲ್ಲಿ ತೊಡಗಿಸಿಕೊಳ್ಳುವ ಸಮಯ. ಈ ಉತ್ಸವದೊಂದಿಗೆ ಸಾಂಪ್ರದಾಯಿಕ ಬೋಡ್ ನಮ್ಮೆಯು ಒಂದಾಗಿದೆ. ಉತ್ತರ ಕೊಡಗಿನಲ್ಲಿ ಕೊಂಬಾಟ್, ಪೀಲಿಯಾಟ್, ಚೌರಿಯಾಟ್ ಉತ್ಸವ ಮರೆಗು ನೀಡಿದರೆ, ದಕ್ಷಿಣ ಕೊಡಗಿನಲ್ಲಿ ಬೋಡ್ ನಮ್ಮೆಯದೇ ಮತ್ತೊಂದು ವಿಶೇಷ. ಬಗೆ ಬಗೆಯ ವೇಷದಾರಿಗಳು ವಿಭಿನ್ನ ಹಾಡು, ನೃತ್ಯ, ದುಡಿಕೊಟ್ಟ್, ದೋಳ್, ತಾಲಿಪಾಟ್ ವಾಲಗ.. ಇತ್ಯಾದಿ ಸಂಭ್ರ‍್ರಮೋಲ್ಲಾಸದೊAದಿಗೆ ಹಬ್ಬಾಚರಿಸುತ್ತಾರೆ. ಆಯಾಯ ಊರಿನ ಭದ್ರಕಾಳಿ ದೇವಾಲಯದ ಪುರಾತನ ಧಾರ್ಮಿಕ ಕಟ್ಟುಪಾಡಿಗೆ ಒಳಪಟ್ಟಂತೆ ಸಂಪ್ರದಾಯ, ಆಚರಣೆಗಳು ವಿಭಿನ್ನವಾಗಿ ನಡೆಯುತ್ತದೆ.

ಧಾರ್ಮಿಕ ಬುಡಕಟ್ಟು ಸಂಪ್ರದಾಯದ ಬೋಡ್ ನಮ್ಮೆಯಲ್ಲಿ ಮೈಯೆಲ್ಲ ಬಣ್ಣ ಬಳಿದುಕೊಂಡಿರುವ ಹುಲಿವೇಷದಾರಿಗಳು, ಕೆಸರನ್ನೆಲ್ಲ್ಲ ಮೈಗೆ ಹಚ್ಚಿಕೊಂಡಿರುವ ಬಂಡ್‌ಕಳಿ, ಭತ್ತದ ಹುಲ್ಲನ್ನು ಮೈಗೆ ಸುತ್ತಿಕೊಂಡಿರುವ ಪಿಲ್ಲ್ಭೂತ, ಜೋಯಿಚೂಳೆ ಗಮನ ಸೆಳೆಯುತ್ತವೆ. ಸಾಂಪ್ರದಾಯಿಕ ದೋಳಿನ ಹಾಡಿನೊಂದಿಗೆ ಚಿಕ್ಕವ್ವ ಜೋಗಿ ಊರಿನ ಮನೆ ಮನೆಗಳಿಗೆ ತೆರಳಿದ ನಂತರ ವಿವಿಧ ವೇಷದಾರಿಗಳು ಧನ ದಾನ್ಯಗಳನ್ನು ಬೇಡಿ ಪಡೆಯುತ್ತಾ ದೇವ ನೆಲೆಯಲ್ಲಿ ಅರ್ಪಿಸಿ ಹರಕೆಯನ್ನು ತೀರಿಸುವುದು ಈ ಬೋಡ್ ನಮ್ಮೆ ಎನಿಸಿಕೊಂಡಿದೆ. ಕೆಲವೆಡೆ ಬೋಡ್ ಹಬ್ಬದಂದೇ ಶೃಂಗರಿಸಿದ ಬಿದಿರಿನ ಕುದುರೆಯೊಂದಿಗಿನ ವಿಶೇಷ ಆಚರಣೆ ನಡೆದರೆ ಮತ್ತೆ ಕೆಲವೆಡೆ ಒಂದು ದಿನದ ಮುಂಚಿತವಾಗಿ ಬಿದಿರ ಕುದುರೆಯ ಆಚರಣೆ ನಡೆಯಲಿದೆ.

ಈಗಾಗಲೇ ಕುತ್ತ್ನಾಡ್, ಕುಟ್ಟಂದಿ, ಬಿ. ಶೆಟ್ಟಿಗೇರಿ, ಚೀನಿವಾಡದಲ್ಲಿ ಬೋಡ್ ನಮ್ಮೆ ಮುಕ್ತಾಯಗೊಂಡಿದೆ. ಮುಂದಿನ ತಿಂಗಳಲ್ಲಿ ಬರುವ ಬೋಂದತ್ ಬೋಡ್, ನಾಂಗಾಲ ಬೋಡ್, ಹಳ್ಳಿಗಟ್ಟ್ ಬೋಡ್ ಇನ್ನು ಹಲವೆಡೆ ಬೋಡ್ ನಮ್ಮೆಯ ಧಾರ್ಮಿಕ ಆಚರಣೆಗೆ ತಯಾರಿ ನಡೆಯುತ್ತಿದೆ. ಕೆಲವೆಡೆ ಎರಡು ವರ್ಷಕೊಮ್ಮೆ ನಡೆದರೆ ಮತ್ತೆ ಕೆ¯ವೆಡೆ ಮೂರು ವರ್ಷಕೊಮ್ಮೆ ಬೋಡ್ ನಮ್ಮೆ ನಡೆಯಲಿದೆ.

ಅತ್ಯಾಕರ್ಷಣೀಯ ಚೆಂಬೆಬೆಳ್ಳೂರ್ ಬೋಡ್

ದೊಡ್ಡದಾದ ಊರಿನ ವ್ಯಾಪ್ತಿ ಹೊಂದಿರುವ ಹೆಚ್ಚಿನ ಜನಾಕರ್ಷಣೆಯ ಚೆಂಬೆಬೆಳ್ಳೂರು ಬೋಡ್ ನಮ್ಮೆ ಆಚರಣೆಯೇ ಮತ್ತೊಂದು ವಿಶೇಷ. ಊರಿನವರು ಮೊದಲು ಊರಿನ ಅಂಬಲದಲ್ಲಿ ಸೇರಿ ಚೀರುಳ್ಳಿ ಅಂಬಲಕ್ಕೆ ಬಂದು ತೆರೆಕಟ್ಟಿ ದೇವರ ಮೊಗದೊಂದಿಗೆ ದೇವರ ನೆಲೆಗೆ ತರುವ ಮೂಲಕ ಹಬ್ಬದ ಆಚರಣೆ ಪ್ರಾರಂಭವಾಗುವುದು. ತಾ.೧೪ ರಂದು ಹಬ್ಬಕಟ್ಟು ಹಾಕಲಾಯಿತು. ತಾ. ೨೧ರಂದು ಪಟ್ಟಣಿ, ತಾ. ೨೨ರಂದು ಕುದುರೆ, ತಾ. ೨೩ರಂದು ಬೋಡ್ ನಮ್ಮೆ, ತಾ.೨೪ಕ್ಕೆ ಚೂಳೆನಮ್ಮೆ ನಡೆಯಲಿದೆ. ಊರಿನವರಲ್ಲದೆ ಸಾವಿರಾರು ಭಕ್ತರು ಬೋಡ್ ನಮ್ಮೆಗೆ ಪ್ರತೀವರ್ಷ ಸಾಕ್ಷಿಯಾಗುವರು.

ಕುಂದತ್ ಬೊಟ್ಟ್ಲ್ ನೇಂದ ಕುದ್‌ರೆ

ಪಾರಣ ಮಾನಿಲ್ ಅಳ್‌ಂಜ ಕುದ್‌ರೆ

ಪುರಾತನ ನಾಲ್ನುಡಿಯಂತೆ ಅಕ್ಟೋಬರ್ ಸಂಕ್ರಮಣದAದು ಕುಂದ ಬೆಟ್ಟದಲ್ಲಿ ಮೊದಲ ಬೋಡ್ ನಮ್ಮೆ ನಡೆದರೆ ಪಾರಾಣ ಬೋಡ್ ನಮ್ಮೆಯಲ್ಲಿ ಹಸಿಬಿದಿನಿಂದ ತಯಾರಿಸಿದ ಕೃತಕ ಕುದುರೆ ಹಾಗೂ ಆನೆಯನ್ನು ಸಂಹಾರ ಮಾಡಲಾಗುವುದು. ಪ್ರತೀ ವರ್ಷದಂತೆ ಇದೇ ಮೇ ತಿಂಗಳ ಕೊನೆಯಲ್ಲಿ ಹಾಗೂ ಜೂನ್ ತಿಂಗಳ ಮೊದಲ ದಿನವೇ ಹಲವು ಉತ್ಸವದ ಆಚರಣೆಯೊಂದಿಗೆ ಬೋಡ್ ನಮ್ಮೆ ನಡೆದು ಕೊಡಗಿನ ಕೊನೆಯ ಬೋಡ್ ನಮ್ಮೆಯಾಗಲಿದೆ.

ಪಾರಣ ಬೋಡ್...

ಪೊದಕೇರಿ, ಕಂಡAಗಾಲ, ರುದ್ರಗುಪ್ಪೆ ಹಾಗೂ ಪೆಗ್ಗರಿಮಾಡು ಸೇರುವ ಪುರಾಣ ಪ್ರಸಿದ್ಧ ಬೇರಳಿನಾಡ್ ಪಾರಾಣ ಬೋಡ್ ವಿಶೇಷವಾಗಿದೆ. ವಿಶೇಷ ವೇಷದಾರಿಗಳು ಕೆಸರೆರಚಾಟ, ಆಕರ್ಷಣೀಯ ಕೃತಕ ಕುದುರೆ ಹಾಗೂ ಆನೆಯ ಆಕೃತಿಯೊಂದಿಗೆ ಪಾರಣಮಾನಿಯಲ್ಲಿ ಹೆಜ್ಜೆ ಹಾಕಿ ಕುಣಿಯುವುದೇ ಇಲ್ಲಿನ ವಿಶೇಷ ಆಕರ್ಷಣೆಯಾಗಿದೆ.

ನಾಡ್ ತಕ್ಕ, ಮುಖ್ಯಸ್ಥರು, ಊರಿನವರು ರುದ್ರಗುಪ್ಪೆಯ ಜೋಡು ಭಗವತಿ ದೇವಾಲಯದಲ್ಲಿ ಸೇರಿ ಅಂಬಲದಲ್ಲಿ ದೋಳ್ ತೆಗೆದು ಪಾರಂಪರಿಕ ಪಾರಣ ನಮ್ಮೆಯ ಹಾಡನ್ನು ಹಾಡುವ ಮೂಲಕ ಹಬ್ಬಕಟ್ಟು ಹಾಕುವರು. ಇದನ್ನು ನಮ್ಮೆ ಕುರಿಪೋ ಎನ್ನುವರು. ಹಬ್ಬ ಕಟ್ಟು ಬಿದ್ದ ದಿನದಿಂದ ಊರಿನ ಕಂಡAಗಾಲ, ಪೊದಕೇರಿ, ಮರೋಡಿ, ಬಾಡಗ ಗ್ರಾಮದ ಅಂಬಲದಲ್ಲಿ ಆಯಾಯ ಊರಿನವರು ಪಾರಂಪರಿಕ ದೋಳ್ ಹಾಡನ್ನು ಹಾಡುವರು. ಅಂಬಲದಲ್ಲಿ ಸೇರಿದ ಊರಿನವರು ದೇವಾಲಯಕ್ಕೆ ತೆರಳಲು ಆಯ್ಕೆ ಮಾಡಿದ ವ್ಯಕ್ತಿಗಳು ದೇವರ ಭಂಡಾರ, ಫಲ ತಾಂಬೂಲವನ್ನು ತರುತ್ತಾರೆ. ಪಟ್ಟ, ಮಾರಾಯ, ಮುಕ್ಕಾಟಿ ಊರಿನವರು ಅಲ್ಲಿ ಸೇರಿ ದೇವತಾ ಕಾರ್ಯವನ್ನು ಕೈಗೊಳ್ಳುತ್ತಾರೆ.

ಕರ್ಮರಟ್ಟಪ್ಪ ಈಶ್ವರನ ನೆಲೆಯಲ್ಲಿ ಪೂಜೆ ಸಲ್ಲಿಸಿ ಅರ್ಚಕರು ಪಾರಾಣೆ ಉತ್ಸವದ ಹಾಡನ್ನು ಹಾಡಿ ಹಬ್ಬವನ್ನು ನಾಡಿಗೆ ಕರೆತರುತ್ತಾರೆನ್ನುತ್ತಾರೆ. ಅಂದು ಸಂಜೆ ಉತ್ಸವದ ಕಟ್ಟುಪಾಡಿನಂತೆ ಚಿಕ್ಕಮ್ಮ ಜೋಗಿ, ಬೈರಮ್ಮ ಜೋಗಿ, ಹೊಟ್ಟೆಯಮಾರಾ, ಕೊಡಂಗಿ ದಾಸ, ವಡ್ಡ, ಚೂಳೆ, ಪಾಲೆಕರಂಬವೆAಬ ದೇವರ ೭ ವೇಷಧಾರಿಗಳು ತಕ್ಕರ ಮನೆಯಿಂದ ಹೊರಟು ನಾಡಿನ ಐನ್‌ಮನೆಗೂ, ಊರಿನ ಮನೆ ಮನೆಗೂ ವೇಷಧಾರಿಗಳು ತಂಡೋಪತAಡವಾಗಿ ತೆರಳಿ ಪಾರಂಪರಿಕ ಹಾಡಿಗೆ ಹೆಜ್ಜೆ ಹಾಕಿ ಕುಣಿದು ಉತ್ಸವದ ಕೊನೆಯಲ್ಲಿ ತಕ್ಕರ ಮನೆಯಲ್ಲಿ ವೇಷ ಕಳಚುವರು.

ಇಲ್ಲಿನ ವಿಶೇಷತೆ ಎಂಬAತೆ ದಕ್ಷಿಣ ಕೊಡಗಿನಲ್ಲಿ ಕಂಡು ಬರುವ ಬೋಡು ನಮ್ಮೆಯಲ್ಲಿ ಬೆತ್ತದÀ ಕೃತಕ ಕುದುರೆಯನ್ನು ಬಳಸಿದರೆ, ಬಾಡಗ ಅಂಬಲದ ಪಕ್ಕದಲ್ಲಿರುವ ಕುದುರೆ ಪುಂಡವೆAಬ ಬಿದಿರಮೆಳೆಯಿಂದ ಆಯಾಯ ಊರಿನವರು ತಲಾ ೧ರಂತೆ ೫ ಬಿದಿರನ್ನು ಮಾತ್ರ ಕಡಿದು ತಂದು ಕೃತಕ ಆನೆ ಹಾಗೂ ಕುದುರೆಯನ್ನು ತಯಾರಿಸುವರು. ಬಾಡಗ, ಕಂಡAಗಾಲದಿAದ ಶೃಂಗರಿಸಿದ ೩ ಬಿದಿರ ಕುದುರೆ ಮರೋಡಿರ ಪಾರಣಮಾನಿ (ಗದ್ದೆ)ಗೆ ಬಂದು ಅಲಂಕರಿತ ಕೃತಕ ಕುದುರೆ- ಆನೆಯನ್ನು ವಿಶೇಷ ವೇಷದಾರಿಗಳು ತಕ್ಕರ ಮನೆಯಲ್ಲಿ ದೋಳು ಕೊಟ್ಟಿಗೆ ಹೆಜ್ಜೆ ಹಾಕಿ ಕುಣಿವರು.

ಜೋಡು ಭಗವತಿಯ ಕೊಡೆ, ಕಡತಲೆ ಆಯಾಯ ಊರಿನ ಆನೆ, ಕುದುರೆ ಮರೋಡಿ ಅಂಬಲದಲ್ಲಿ ಒಟ್ಟು ಸೇರಿ ದೇವರನ್ನು ಪ್ರಾರ್ಥಿಸುತ್ತಾ ಪ್ರದಕ್ಷಿಣೆ ಹಾಕಿ ಕುದುರೆ ಆನೆಗಳು ಓಡುವ ಮೂಲಕ ಶಕ್ತಿ ಪ್ರದರ್ಶಿಸುವುದು, ವೇಷದಾರಿಗಳು ಊರಿನವರೆಲ್ಲ ಸೇರಿ ಕುಣಿದು ಸಂಭ್ರಮಿಸುವರು. ಅರ್ಚಕರು ದೇವರ ಭಸ್ಮವನ್ನು ಎಲ್ಲೆಡೆ ಎಸೆಯುವ ಮೂಲಕ ಕಂಡAಗಾಲದ ಕುದುರೆ ಬೇರೆಡೆ ಸಂಹರಿಸಿದರೆ ಇತರೆ ಆನೆ ಕುದುರೆಯ ಪ್ರತಿಕೃತಿಯನ್ನು ಪಾರಣಮಾನಿ (ಗದ್ದೆ)ಯಲ್ಲಿ ಸಂಹರಿಸುವ ಮೂಲಕ ಉತ್ಸವಕ್ಕೆ ವರ್ಣರಂಜಿತ ತೆರೆ ಬೀಳಲಿದೆ.

ಹೆಬ್ಬಾಲೆ ದೇವರಪುರ ಬೋಡ್..

ಕಾಡಿನಲ್ಲಿ ಸಿಗುವ ಸೊಪ್ಪು, ಹರಿದ ಹಳೆಯ ಬಟ್ಟೆ, ಗೋಣಿಚೀಲ, ಕೈಗೆ ಸಿಗುವ ವಿವಿಧ ವಸ್ತುಗಳಿಂದ ವಿವಿಧ ವೇಷತೊಟ್ಟು ಒಣಗಿದ ಸೋರೆಕಾಯಿ ಬರುಡೆ ಪ್ಲಾಸ್ಟಿಕ್ ಡಬ್ಬ ಹಾಗೂ ಟಿನ್ನುಗಳನ್ನು ತಾಳ ಮದ್ದಳೆ ಮಾಡಿಕೊಂಡು ಬಡಿಯುತ್ತಾ ಹೆಜ್ಜೆ ಹಾಕಿ ಕುಣಿಯುತ್ತಾ ಕೆಟ್ಟಪದಗÀಳಿಂದ ಬೈಯುತ್ತಾ ಬಿಕ್ಷಾಟನೆಯ ಮೂಲಕ ಧನಧಾನ್ಯಗಳನ್ನು ಸಂಗ್ರಹಿಸಿ ದೇವಾಲಯಕ್ಕೆ ಅರ್ಪಿಸುವ ವಿಶಿಷ್ಟ ರೀತಿಯ ಆಚರಣೆ ಕುಂಡೆ ಹಬ್ಬವೆಂದು ಪ್ರಚಲಿತಗೊಂಡರೂ ಮೂಲವಾಗಿಯೇ ಇದು ಹೆಬ್ಬಾಲೆ ದೇವರಪುರ ಬೋಡ್. ಪುರಾತನ ಕಾಲದಿಂದಲೂ ಮೇ ತಿಂಗಳ ಕೊನೆಯವಾರದಂದು ನಡೆಯುವ ಈ ಸಂಪ್ರದಾಯಿಕ ಆಚರಣೆಯನ್ನು ಸ್ಥಳೀಯ ಸಣ್ಣುವಂಡ ಕುಟುಂಬದ ಮುಂದಾಳತ್ವದಲ್ಲಿ ಹಾಗೂ ಕಳ್ಳಿಚಂಡ, ಮನೆಪಂಡ, ಚೆಕ್ಕೆರ, ಅಜ್ಜಿನಿಕಂಡ, ಕಂಜಿತAಡ ಹಾಗೂ ಮೂಲ ಬುಡಕಟ್ಟು ಅಥವಾ ಆದಿವಾಸಿ ಜೇನುಕುರುಬ, ಎರವ, ಕುರುಬ ಜನಾಂಗದ ಜೊತೆ ಪಿರಿಯಾಪಟ್ಟಣ, ಮುತ್ತೂರು, ಹೆಚ್‌ಡಿ ಕೋಟೆ ಭಾಗದ ಗಿರಿಜನರು ಈ ಉತ್ಸವದಲ್ಲಿ ಭಾಗವಹಿಸುವರು.

ಹಬ್ಬಕ್ಕೆ ಮುಂಚಿತವಾಗಿ ನಡೆಯುವ ಮಾಯಮುಡಿ ಬೋಡ್‌ನಮ್ಮೆಯಲ್ಲಿ ಅನುವಾದ ಪಡೆದು ತಕ್ಕ ಮುಖ್ಯಸ್ಥರು ಊರಿನವರು, ದೇವರ ಹಬ್ಬದ ಕಟ್ಟು ಬೀಳವರು. ಪಟ್ಟಣಿಯಂದು ಊರಿನವರು ದೇವಾಲಯದಲ್ಲಿ ಸೇರಿ ಅಂಬಲಕ್ಕೆ ತೆÀರಳಿ ದೇವರ ಬಟ್ಟೆ ಬರೆ ಕಡತಲೆಗಳನೆಲ್ಲ ತಂದು ಶುದ್ಧಗೊಳಿಸಿ ವಿವಿಧ ಪೂಜಾ ಕೈಂಕರ್ಯ ನಡೆಸುವರು.

ದೊಡ್ಡ ಹಬ್ಬದ ಮಧ್ಯಾಹ್ನ ತಕ್ಕ ಮುಖ್ಯಸ್ಥರು, ಊರಿನವರ ಸಮ್ಮುಖದಲ್ಲಿ ದೇವರ ಮೊಗ ತಂದು ಶುದ್ಧಗೊಳಿಸಿ ಅಲಂಕರಿಸಿ ಪೂಜೆ ಸಲ್ಲಿಸಿ ಪಣಿಕನಿಗೆ ಕಟ್ಟುವ ಮೂಲಕ ಅಯ್ಯಪ್ಪ ಹಾಗೂ ಭದ್ರಕಾಳಿಗೆ ವಿಶೇಷ ಪೂಜಾ ಕೈಂಕರ್ಯ ನೆರವೇರುವುದು. ಮೈಗೆ ಆವಾಹನವಾದ ದೇವರೊಂದಿಗೆ ಕೃತಕ ಕುದುರೆ ದೇವಾಲಯದ ನೆಲೆಗೆ ಕುದುರೆ ನೃತ್ಯ ನಡೆಯುವುದು.

ಪೊನ್ನಂಪೇಟೆ ತಾಲೂಕಿನ ದೇವರಪುರ ಗ್ರಾಮದಲ್ಲಿ ಊರಿನ ತಕ್ಕ ಮುಖ್ಯಸ್ಥರ ಸಮ್ಮುಖದಲ್ಲಿ ವಿವಿಧ ಸಂಪ್ರದಾಯಗಳೊAದಿಗೆ ನಡೆಯುವ ಅಯ್ಯಪ್ಪ-ಭದ್ರಕಾಳಿ ದೇವರ ಬೇಡು ಹಬ್ಬ.

ವಿವಿಧೆಡೆಗಳಿಂದ ಆಗಮಿಸುವ ಸಾವಿರಕ್ಕೂ ಹೆಚ್ಚು ಗಿರಿಜನರು ವಿಭಿನ್ನ ವೇಷಭೂಷಣದೊಂದಿಗೆ ಕೈಯಲ್ಲಿ ಬುರುಡೆ ಹಿಡಿದು ದೇವಾಲಯದಲ್ಲಿ ಬಾಯಲ್ಲಿ ಬೈಗುಳದ ಕುಂಡೆ ಹಾಡು ಹಾಡುತ್ತಾ ವಿಭಿನ್ನವಾಗಿ ಕುಣಿದು ಸಂಜೆಯಾಗುತ್ತಲೇ ಹಬ್ಬಕ್ಕೆ ತೆರೆ ಎಳೆಯಲಾಗುವುದು.

- ಪುತ್ತರಿರ ಕರುಣ್ ಕಾಳಯ್ಯ, ಚೆಟ್ಟಳ್ಳಿ