ಚಿತ್ರ, ಸುದ್ದಿ : ಹೆಚ್.ಕೆ. ಜಗದೀಶ್

ಗೋಣಿಕೊಪ್ಪಲು, ಏ. ೧೯: ಅಮಾಯಕ ಕಾರ್ಮಿಕನ ಜೀವ ಪಡೆದಿದ್ದ ನರಭಕ್ಷಕ ಹುಲಿಯನ್ನು ಘಟನೆ ನಡೆದ ೨೪ ಗಂಟೆಯೊಳಗೆ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ. ಸೆರೆ ಹಿಡಿದ ಹುಲಿಯು ೧೨ ವರ್ಷ ಪ್ರಾಯದ್ದಾಗಿದ್ದು ಹೆಣ್ಣು ಹುಲಿಯೆಂದು ಗುರುತಿಸಲಾಗಿದೆ. ಅರಣ್ಯ ಇಲಾಖೆಯ ಡಾ. ರಮೇಶ್ ಅವರು ಹುಲಿಯ ಮೇಲೆ ಅರವಳಿಕೆ ಮದ್ದನ್ನು ಪ್ರಯೋಗಿಸಿ ಹುಲಿ ಸೆರೆಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಗುರುವಾರ ಮಧ್ಯಾಹ್ನ ವೇಳೆ ಅಸ್ಸಾಂ ಮೂಲದ ಕಾರ್ಮಿಕ ಮೊಹಿಸುರ್ ರೆಹಮಾನ್ ಎಂಬಾತ ಸ್ಥಳೀಯ ಕಾಫಿ ಬೆಳೆಗಾರರ ಹಸುವನ್ನು ಮೇಯಿಸಲು ನಿಟ್ಟೂರು-ಜಾಗಲೆ ಗ್ರಾಮದ ಭತ್ತದ ಗದ್ದೆಯ ಬಳಿ ತೆರಳಿದ್ದರು. ಈ ವೇಳೆ ಹುಲಿ ಆತನ ಮೇಲೆರಗಿ ಕೊಂದು ಹಾಕಿತ್ತು. ಸಂಜೆ ವೇಳೆಯಲ್ಲಿ ಪ್ರಕರಣ ಬೆಳಕಿಗೆ ಬಂದಿತ್ತು. ಗ್ರಾಮಸ್ಥರು ಘಟನಾ ಸ್ಥಳಕ್ಕೆ ತೆರಳಿ ಹುಲಿಯನ್ನು ಸೆರೆಹಿಡಿಯುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳ ಮೇಲೆ ಒತ್ತಡ ತಂದಿದ್ದರು.

ಕೂಡಲೇ ಕಾರ್ಯಪ್ರವೃತ್ತರಾದ ನಾಗರಹೊಳೆ ವನ್ಯ ಜೀವಿ ವಿಭಾಗದ ನಿರ್ದೇಶಕ ಹರ್ಷಕುಮಾರ್ ಈ ಬಗ್ಗೆ ತಮ್ಮ ಸಹ ಸಿಬ್ಬಂದಿಗಳಿಗೆ ಮಾರ್ಗದರ್ಶನ ನೀಡುವ ಮೂಲಕ ಹುಲಿ ಸಂಚಾರ ಮಾಡಿದ ಪ್ರದೇಶದಲ್ಲಿ ಕ್ಯಾಮರಾಗಳನ್ನು ಅಳವಡಿಸಿ ಅವುಗಳ ಚಲನ ವಲನಗಳ ಬಗ್ಗೆ ನಿಗಾವಹಿಸಿದ್ದರು.

ಮುಂಜಾನೆಯಿAದಲೇ ಹುಲಿ ಸೆರೆಗೆ ಕಾರ್ಯಪ್ರವೃತ್ತರಾದ ತಂಡ ನಿಟ್ಟೂರು ಗ್ರಾಮ

(ಮೊದಲ ಪುಟದಿಂದ) ಮಾಪಂಗಡ ಮುತ್ತಣ್ಣ ಎಂಬುವವರ ಕಾಫಿ ತೋಟದಲ್ಲಿ ಹುಲಿ ತಂಗಿರುವುದನ್ನು ಪತ್ತೆ ಹಚ್ಚಿ ಮಧ್ಯಾಹ್ನದ ವೇಳೆ ಹುಲಿಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಒಂದೆಡೆ ಹುಲಿ ಕಾರ್ಯಾಚರಣೆ ನಡೆಯುತ್ತಿದ್ದರೆ, ಇತ್ತ ಘಟನಾ ಸ್ಥಳದಲ್ಲಿ ಗ್ರಾಮಸ್ಥರು ಹಾಗೂ ರೈತ ಸಂಘದ ಪದಾಧಿಕಾರಿಗಳು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದರು.

ಕ್ರಮಕ್ಕೆ ಆಗ್ರಹ

ಘಟನಾ ಸ್ಥಳಕ್ಕೆ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಹಾಗೂ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿ ಸಿಸಿಎಫ್ ಮನೋಜ್‌ಕುಮಾರ್ ತ್ರಿಪಾಠಿ ಆಗಮಿಸುತ್ತಿದ್ದಂತೆಯೆ ನೆರೆದಿದ್ದ ಗ್ರಾಮಸ್ಥರು ಅಧಿಕಾರಿಗಳ ಮೇಲೆ ತಮ್ಮ ಅಸಮಾಧಾನ ಹೊರಹಾಕಿದರು. ಆಗಿಂದಾಗ್ಗೆ ಹುಲಿ ಹಾಗೂ ಕಾಡಾನೆಗಳು ಅಮಾಯಕರ ಮೇಲೆ ದಾಳಿ ನಡೆಸಿ ಕೊಂದು ಹಾಕುತ್ತಿದೆ; ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದರು.?

ಪ್ರತಿಭಟನಾಕಾರರ ಮಾತನ್ನು ಆಲಿಸಿದ ಸಿಸಿಎಫ್ ಮನೋಜ್ ಕುಮಾರ್ ತ್ರಿಪಾಠಿ, ಅರಣ್ಯ ವ್ಯಾಪ್ತಿಯಿಂದ ಹುಲಿಗಳು ಕೆಲವೊಂದು ಸಂದರ್ಭದಲ್ಲಿ ನಾಡಿನತ್ತ ಆಗಮಿಸುತ್ತವೆ. ಈ ವೇಳೆ ದುರ್ಘಟನೆ ನಡೆದಿರುವುದು ನೋವು ತಂದಿದೆ. ಮಾನವನಿಗೆ ತೊಂದರೆ ನೀಡುವ ಹುಲಿ ಹಾಗೂ ಕಾಡಾನೆಯನ್ನು ಸೆರೆ ಹಿಡಿಯುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಕ್ರಮಕೈಗೊಳ್ಳಲಿದೆ. ಹುಲಿ ದಾಳಿಯಿಂದ ಮೃತಪಟ್ಟ ವ್ಯಕ್ತಿಗೆ ನಾಗರಹೊಳೆ ಟೈಗರ್ ಕನ್ಸರ್‌ವೇಷನ್ ಫೌಂಡೇಶನ್ ವತಿಯಿಂದ ರೂ. ೧೫ ಲಕ್ಷ ಪರಿಹಾರವನ್ನು ಒದಗಿಸಲಾಗುತ್ತದೆ ಎಂದು ಸ್ಥಳದಲ್ಲಿದ್ದ ಮೃತಪಟ್ಟ ವ್ಯಕ್ತಿ ಮೊಹಿಸುರ್ ರೆಹಮಾನ್ ಅವರ ಪತ್ನಿ ಹಮೀದರವರಿಗೆ ಪರಿಹಾರ ಚೆಕ್ ವಿತರಿಸಿದರು. ನಿರಂತರ ಹುಲಿ ಹಾಗೂ ಕಾಡಾನೆ ದಾಳಿಯಿಂದ ಅಮಾಯಕ ಜೀವಗಳು ಬಲಿಯಾಗುತ್ತಿವೆ.

ಈ ಬಗ್ಗೆ ಅರಣ್ಯ ಇಲಾಖೆ ಶಾಶ್ವತ ಪರಿಹಾರ ಕಂಡು ಹಿಡಿಯಬೇಕು. ರೈತರ, ಕಾಫಿ ಬೆಳೆಗಾರರ ತೋಟದಲ್ಲಿ ಹುಲಿ ಹಾಗೂ ಕಾಡಾನೆ ಹಾವಳಿ ನಿಲ್ಲಬೇಕು, ಜಾನುವಾರುಗಳ ಮೇಲೆ ಆಗಿಂದಾಗೆ ದಾಳಿ ನಡೆಸುವ ಹುಲಿಗಳನ್ನು ಸೆರೆ ಹಿಡಿಯಬೇಕೆಂದು ರೈತ ಸಂಘದ ಕೊಡಗು ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಒತ್ತಾಯಿಸಿದರು. ಪ್ರತಿಭಟನೆ ವೇಳೆ ರೈತ ಸಂಘದ ಜಿಲ್ಲಾ ಮುಖಂಡರುಗಳಾದ ಪುಚ್ಚಿಮಾಡ ಸುಭಾಶ್, ಚೆಟ್ರುಮಾಡ ಸುಜಯ್ ಬೋಪಯ್ಯ, ಮೇಚಂಡ ಕಿಶ ಮಾಚಯ್ಯ, ತಾಣಚ್ಚಿರ ಲೆಹರ್ ಬಿದ್ದಪ್ಪ ಸೇರಿದಂತೆ ನಿಟ್ಟೂರು ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷ ಚೆಕ್ಕೆರ ಸೂರ್ಯ ಅಯ್ಯಪ್ಪ, ಸೇರಿದಂತೆ ಮಲಚೀರ ವಿಠಲ, ಅಡ್ಡೆಂಗಡ ನವೀನ್ ಮೇಚಂಡ ವಾಸು ಹಾಗೂ ಗ್ರಾಮಸ್ಥರು ಹಾಜರಿದ್ದರು.

ಗುರುವಾರ ಸಂಜೆ ವೇಳೆ ಘಟನೆ ನಡೆದಿತ್ತು. ಈ ವೇಳೆ ರೈತ ಮುಖಂಡರು ಮರಣೋತ್ತರ ಪರೀಕ್ಷೆಗೆ ಒಪ್ಪಿಗೆ ಸೂಚಿಸಿರಲಿಲ್ಲ. ಮುಂಜಾನೆವರೆಗೂ ರೈತರು ಪ್ರತಿಭಟನೆ ನಡೆಸಿದ್ದರು. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ ನಂತರ ಸಮಸ್ಯೆ ಮನದಟ್ಟು ಮಾಡಿದರು. ನಂತರ ಮರಣೋತ್ತರ ಪರೀಕ್ಷೆಗೆ ಅವಕಾಶ ನೀಡಲಾಯಿತು. ಅಧಿಕಾರಿಗಳು ಹಾಗೂ ರೈತರ ಮಧ್ಯೆ ವಾಗ್ಯುದ್ದ ನಡೆದಿತ್ತು. ಸ್ಥಳದಲ್ಲಿದ್ದ ಡಿವೈಎಸ್ಪಿ ಮೋಹನ್ ಕುಮಾರ್ ರೈತರನ್ನು ಮನವೊಲಿಸುವ ಪ್ರಯತ್ನ ನಡೆಸಿದರು. ಅಂತಿಮವಾಗಿ ಶಾಸಕ ಪೊನ್ನಣ್ಣ ಆಗಮಿಸಿದ ತರುವಾಯ ಪ್ರತಿಭಟನೆ ಹಿಂಪಡೆಯುವ ಮೂಲಕ ಹೋರಾಟವನ್ನು ಹಿಂಪಡೆಯ ಲಾಯಿತು. ಮರಣೊತ್ತರ ಪರೀಕ್ಷೆ ನಡೆಸಿದ ನಂತರ ಮೃತ ದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸ ಲಾಯಿತು. ಮೃತರು ಪತ್ನಿ ಹಾಗೂ ೪ ಮಕ್ಕಳನ್ನು ಆಗಲಿದ್ದಾರೆ.

ಅರಣ್ಯ ಇಲಾಖೆಯ ವೀರಾಜಪೇಟೆ ಡಿಎಫ್‌ಒ ಜಗನ್ನಾಥ್, ತಿತಿಮತಿ ಎಸಿಎಫ್ ಗೋಪಾಲ್, ವೀರಾಜಪೇಟೆ ಎಸಿಎಫ್ ನೆಹರು, ನಾಗರಹೊಳೆ ಎಸಿಎಫ್ ಅನುಷ, ರಾಜಶೇಖರ್ ಆರ್‌ಎಫ್‌ಒ ಕಲ್ಲಳ್ಳ, ಉಮಾಶಂಕರ್, ಡಿಆರ್‌ಎಫ್‌ಒ ತಿತಿಮತಿ, ದಿವಾಕರ್ ಡಿಆರ್‌ಎಫ್‌ಒ ಪೊನ್ನಂಪೇಟೆ ಡಾ. ರಮೇಶ್, ಶಾರ್ಪ್ ಶೂಟರ್ ರಂಜನ್ ಆರ್‌ಎಫ್‌ಓ ಶಂಕರ್, ದಿವಾಕರ್ ಆರ್‌ಎಫ್‌ಒ ಗಂಗಾಧರ್ ಸೇರಿದಂತೆ ನಾಗರಹೊಳೆ ವನ್ಯಜೀವಿ ವಿಭಾಗದ ಹಿರಿಯ ಅಧಿಕಾರಿಗಳು, ಸಿಬ್ಬಂದಿಗಳು ಸ್ಥಳದಲ್ಲಿ ಹಾಜರಿದ್ದರು. ಸೆರೆಯಾದ ಹುಲಿಯನ್ನು ಮೈಸೂರು ಬಳಿಯ ಚಾಮುಂಡಿ ವನ್ಯಜೀವಿ ಸಂರಕ್ಷಣೆ ಹಾಗೂ ಪುನರ್‌ವಸತಿ ಕೇಂದ್ರ ಕೂರ್ಗಳ್ಳಿಗೆ ರವಾನಿಸಲಾಯಿತು.