(ವರದಿ : ವಾಸು ಆಚಾರ್ಯ)

ಸಿದ್ದಾಪುರ, ಏ. ೧೯: ಲೋಕಸಭಾ ಚುನಾವಣೆ ಹಿನ್ನೆಲೆ ಗುರುವಾರ ರಾತ್ರಿ ವಾಲ್ನೂರು ಭಾಗದಲ್ಲಿ ಮನೆಮನೆ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಸಂದರ್ಭ ಅಪಘಾತದಲ್ಲಿ ಸಾವನ್ನಪ್ಪಿದ ಬಿಜೆಪಿ ಕಾರ್ಯಕರ್ತ ರಾಮಪ್ಪ ಸಾವಿನ ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆ ನಡೆಸಬೇಕು ಹಾಗೂ ಮೃತ ವ್ಯಕ್ತಿ ಕುಟುಂಬಕ್ಕೆ ರೂ. ೨೫ ಲಕ್ಷ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿ ಜಿಲ್ಲಾ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಗ್ರಹಿಸಿದರು.

ತಾ. ೧೮ ರಂದು ರಾತ್ರಿ ೮ ಗಂಟೆ ಸುಮಾರಿಗೆ ರಾಮಪ್ಪ ಸೇರಿದಂತೆ ಕೆಲವರು ಮನೆಮನೆ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಈ ವೇಳೆ ಹಿಂಬದಿಯಿAದ ಬಂದ ಮಾರುತಿ ಎಸ್ಟಿಂ ಕಾರು ಗುದ್ದಿಕೊಂಡು ನಿಲ್ಲಿಸದೆ ಹೋಗಿದೆ. ಇದರಿಂದ ರಾಮಪ್ಪ ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದರು. ಜೊತೆಗೆ ಚಂದ್ರರಾಜು, ರತೀಶ್ ಎಂಬವರು ಗಾಯಗೊಂಡು ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರು ಹಿಂಬಾಲಿಸಿ ಕಾರು ಚಾಲಕ ಅರ್ಷದ್‌ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಘಟನೆ ನಡೆದ ಬಳಿಕ ಪ್ರಕರಣ ಉದ್ವಿಗ್ನತೆಗೆ ಕಾರಣವಾಯಿತು. ಅಪಘಾತದ ಹಿಂದೆ ಅನುಮಾನ ವ್ಯಕ್ತಪಡಿಸಿದ ಬಿಜೆಪಿ ಕಾರ್ಯಕರ್ತರು ಉನ್ನತ ತನಿಖೆಗೆ ಆಗ್ರಹಿಸಿದರು. ಶುಕ್ರವಾರ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸುವ ಮೂಲಕ ಪರಿಹಾರಕ್ಕೆ ಒತ್ತಾಯಿಸಿದರು. ಇದರಿಂದ ಸಿದ್ದಾಪುರ ಪಟ್ಟಣದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು.

ರೂ. ೨೫ ಲಕ್ಷ ಪರಿಹಾರಕ್ಕೆ ಒತ್ತಾಯ

ಮೃತ ರಾಮಪ್ಪ ಕುಟುಂಬಕ್ಕೆ ರಾಜ್ಯ ಸರಕಾರದಿಂದ ರೂ. ೨೫ ಲಕ್ಷ ಪರಿಹಾರ ನೀಡಬೇಕು ಹಾಗೂ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿ ಕಾರ್ಯಕರ್ತರು ಸಿದ್ದಾಪುರ ಆಸ್ಪತ್ರೆ ಸಮೀಪ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ತನ್ನ ಎಲ್ಲಾ ಪ್ರಚಾರ ಕಾರ್ಯವನ್ನು

(ಮೊದಲ ಪುಟದಿಂದ) ಸ್ಥಗಿತಗೊಳಿಸಿ ಪ್ರತಿಭಟನೆಗೆ ಬೆಂಬಲಿಸಿದರು.

ಜಿಲ್ಲಾಧಿಕಾರಿ ಸ್ಥಳಕ್ಕಾಗಮಿಸಿ ಪರಿಹಾರ ಘೋಷಣೆ ಮಾಡಬೇಕೆಂದು ಪಟ್ಟು ಹಿಡಿದರು. ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಪ್ರತಿಭಟನಾಕಾರರು ರಸ್ತೆ ತಡೆ ನಡೆಸಿದರು. ಸರಕಾರದ ವಿರುದ್ಧ ಘೋಷಣೆ ಕೂಗಿದರು. ‘ರಾಮಪ್ಪ ಅಮರ್ ರಹೇ’ ಎಂಬ ಘೋಷಣೆಗಳು ಮೊಳಗಿದವು. ಜಿಲ್ಲಾಧಿಕಾರಿ ಆಗಮಿಸಿ ಪರಿಹಾರ ಘೋಷಣೆ ಮಾಡುವ ತನಕ ಮೃತದೇಹವನ್ನು ಕೊಂಡೊಯ್ಯುವುದಿಲ್ಲ ಎಂದು ಪ್ರತಿಭಟನಾನಿರತರು ಎಚ್ಚರಿಸಿದರು.

ನಂತರ ಉಪವಿಭಾಗಾಧಿಕಾರಿ ವಿನಾಯಕ್ ನರ್ವಾಡೆ ಆಗಮಿಸಿದರು. ಇದಕ್ಕೂ ಒಪ್ಪದ ಕಾರ್ಯಕರ್ತರು ಜಿಲ್ಲಾಧಿಕಾರಿ ಆಗಮಿಸಲೇ ಬೇಕೆಂದು ಆಗ್ರಹಿಸಿದರು. ಮಧ್ಯಪ್ರವೇಶಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಜಿಲ್ಲಾಧಿಕಾರಿ ಚುನಾವಣೆ ಸಂಬAಧದ ಸಭೆಯಲ್ಲಿದ್ದು, ಬರುವುದಾಗಿ ತಿಳಿಸಿದರು. ಉಪವಿಭಾಗಾಧಿಕಾರಿ ಪರಿಹಾರ ಸಂಬAಧ ಪ್ರಸ್ತಾವನೆಯನ್ನು ಸರಕಾರಕ್ಕೆ ಕಳುಹಿಸಲಿದ್ದಾರೆ ಎಂದು ಮನವೊಲಿಸುವ ಪ್ರಯತ್ನ ಮಾಡಿದರೂ ಪ್ರತಿಭಟನೆಯನ್ನು ಕೈಬಿಡಲಿಲ್ಲ.

ಬಿಜೆಪಿ ರಾಷ್ಟಿçÃಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಆಗಮಿಸಿ ಘಟನೆಯನ್ನು ಖಂಡಿಸಿದರು. ಸೂಕ್ತ ನ್ಯಾಯ ದೊರೆಯದಿದ್ದಲ್ಲಿ ರಾಜ್ಯ ವ್ಯಾಪಿ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ವಿಧಾನ ಪರಿಷತ್ತು ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ, ಮಾಜಿ ಶಾಸಕರುಗಳಾದ ಕೆ.ಜಿ. ಬೋಪಯ್ಯ, ಮಂಡೇಪAಡ ಅಪ್ಪಚ್ಚು ರಂಜನ್, ಮಾಜಿ ಎಂಎಲ್‌ಸಿ ಎಂ.ಪಿ. ಸುನಿಲ್ ಸುಬ್ರಮಣಿ, ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿಕಾಳಪ್ಪ, ಬಿಜೆಪಿಯ ಲೋಕಸಭಾ ಚುನಾವಣಾ ಅಭ್ಯರ್ಥಿ ಯದುವೀರ್ ಒಡೆಯರ್, ವೀರಾಜಪೇಟೆ ಮಂಡಲ ಅಧ್ಯಕ್ಷ ಸುವಿನ್ ಗಣಪತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಕೆ. ಲೋಕೇಶ್, ನೆಲ್ಲೀರ ಚಲನ್, ಹಿಂದುಳಿದ ಮೋರ್ಚಾದ ಜಿಲ್ಲಾಧ್ಯಕ್ಷ ಅಪ್ರು ರವೀಂದ್ರ, ಮಂಡಲ ಕಾರ್ಯದರ್ಶಿ ಅಜಿತ್ ಕರುಂಬಯ್ಯ, ಭಜರಂಗದಳ ಪ್ರಮುಖರಾ ರಘು ಸಕಲೇಶಪುರ ಸೇರಿದಂತೆ ಬಿಜೆಪಿ ಹಾಗೂ ಹಿಂದೂಪರ ಕಾರ್ಯಕರ್ತರು ಭಾಗವಹಿಸಿದ್ದರು.

ಬಿಗುವಿನ ವಾತಾವರಣ - ಪೊಲೀಸ್ ಸರ್ಪಗಾವಲು

ಪ್ರತಿಭಟನೆಯಿಂದ ಸಿದ್ದಾಪುರ ಬೂದಿ ಮುಚ್ಚಿದ ಕೆಂಡದAತಾಗಿತ್ತು. ಪಟ್ಟಣ ಪೊಲೀಸ್ ಸರ್ಪಗಾವಲಿನಲ್ಲಿ ಸುತ್ತುವರೆದಿತ್ತು. ಮುಂಜಾಗ್ರತ ಕ್ರಮವಾಗಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಸಿದ್ದಾಪುರ, ವಾಲ್ನೂರು-ತ್ಯಾಗತ್ತೂರು, ಅರೆಕಾಡು, ನೆಲ್ಲಿಹುದಿಕೇರಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ತಾ. ೧೯ ರ ರಾತ್ರಿ ೧೦ ಗಂಟೆಯ ತನಕ ನಿಷೇಧಾಜ್ಞೆಗೆ ಆದೇಶಿಸಿದರು.

ಪ್ರತಿಭಟನೆ ಸಂದರ್ಭ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ವಾಗ್ವಾದ ಉಂಟಾಗಿ ಕೆಲಕಾಲ ಗೊಂದಲ ಏರ್ಪಟ್ಟಿತ್ತು. ಕೆ.ಎಸ್.ಆರ್.ಪಿ. ಹಾಗೂ ಡಿ.ಎ.ಆರ್. ತುಕಡಿಗಳು ನಿಯೋಜನೆಗೊಂಡಿದ್ದವು. ಮೈಸೂರು-ಹಾಸನ ಭಾಗದಿಂದಲೂ ಪೊಲೀಸ್ ತಂಡ ಆಗಮಿಸಿತ್ತು. ಪ್ರತಿಭಟನೆಯಿಂದ ವಾಹನ ಸಂಚಾರದಲ್ಲಿಯೂ ಸಮಸ್ಯೆಯಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿದ್ದು ಬಂದೋಬಸ್ತ್ ವ್ಯವಸ್ಥೆ ಮೇಲೆ ನಿಗಾವಹಿಸಿದ್ದರು.

ಇದರೊಂದಿಗೆ ವೀರಾಜಪೇಟೆ ತಹಶೀಲ್ದಾರ್ ಹೆಚ್.ಎನ್. ರಾಮಚಂದ್ರ, ಕಂದಾಯ ಪರಿವೀಕ್ಷಕ ಸಂತೋಷ್, ಅನಿಲ್ ಕುಮಾರ್, ಗ್ರಾಮ ಆಡಳಿತಾಧಿಕಾರಿ ಸಚಿನ್, ಓಮಪ್ಪ ಬಡಕಾರ್ ಇನ್ನಿತರರು ಸ್ಥಳದಲ್ಲಿದ್ದರು.

ಅಂತಿಮ ದರ್ಶನಕ್ಕೆ ಜನಸಾಗಾರ

ರಾಮಪ್ಪ ಅಂತಿಮ ದರ್ಶನಕ್ಕೆ ಜನಸಾಗರವೇ ಹರಿದು ಬಂದಿತ್ತು. ಜಿಲ್ಲೆಯ ವಿವಿಧೆಡೆಗಳಿಂದ ತಂಡೋಪ ತಂಡವಾಗಿ ಜನ ಆಗಮಿಸಿದ್ದರು. ಎಲ್ಲರಿಗೆ ಚಿರಪರಿಚಿತರಾಗಿದ್ದ ರಾಮಪ್ಪ ಸಾವಿನಿಂದ ಸಿದ್ದಾಪುರ ಭಾಗ ಶೋಕಸಾಗಾರದಲ್ಲಿ ಮುಳುಗಿತ್ತು. ಹಲವು ಗಣ್ಯರು ಆಗಮಿಸಿ ಕಂಬನಿ ಮಿಡಿದರು.

ಜಿಲ್ಲಾಧಿಕಾರಿ ಸ್ಥಳಕ್ಕಾಗಮಿಸಿ ಸೂಕ್ತ ಭರವಸೆ ನೀಡಿದ ಹಿನ್ನೆಲೆ ಪ್ರತಿಭಟನೆ ಅಂತ್ಯಗೊಳಿಸಿ ಮೃತದೇಹವನ್ನು ವಾಲ್ನೂರು ಸ್ವಗೃಹಕ್ಕೆ ಕೊಂಡೊಯ್ದು ಅಂತಿಮ ವಿಧಿವಿಧಾನ ನೆರವೇರಿಸಲಾಯಿತು.