ಕೂಡಿಗೆ, ಏ. ೧೯: ಸುಡುಬಿಸಿಲಿನ ತಾಪಮಾನಕ್ಕೆ ಕಾವೇರಿ ನದಿಯು ಬತ್ತಿರುವ ಹಿನ್ನೆಲೆಯಲ್ಲಿ ಕಾವೇರಿ ನಿಸರ್ಗಧಾಮದ ಮುಂಭಾಗದಲ್ಲಿರುವ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಸಮೀಪದಲ್ಲಿ ನೀರಿನಲ್ಲಿರುವ ಮಹಶೀರ್ ಮೀನು, ಗೆಂಡೆ ಮೀನು ಸೇರಿದಂತೆ ಇತರ ಉಪ ಜಾತಿಯ ಮೀನು ಮತ್ತು ಅದರ ಮರಿಗಳಿಗೆ ನೀರಿನ ಸಮತೋಲನ ಸರಿಯಾದ ಮಟ್ಟದಲ್ಲಿ ಸಿಕ್ಕದ ಕಾರಣದಿಂದಾಗಿ ಕೆಲ ಮೀನುಗಳು ಸಾಯುತ್ತಿರುವ ದೃಶ್ಯ ಕಂಡುಬರುತ್ತಿರುವುದನ್ನು ಗಮನಿಸಿದ ಅರಣ್ಯ ಇಲಾಖೆ, ಮತ್ತು ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ಮೀನುಗಳನ್ನು ಹಿಡಿದು ಹಾರಂಗಿ ಅಣೆಕಟ್ಟೆಯ ಮುಂಭಾಗದ ನದಿಗೆ ಬಿಡುವ ಕಾರ್ಯದಲ್ಲಿ ತೊಡಗಿದ್ದಾರೆ.

ದಿನ ಕಳೆದಂತೆ ಸುಡುಬಿಸಿಲಿನ ತಾಪಮಾನಕ್ಕೆ ನದಿಯ ನೀರಿನ ಮಟ್ಟ ತೀರಾ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಾವೇರಿ ನಿಸರ್ಗಧಾಮದ ಸೇತುವೆ ಸಮೀಪದ ನದಿಯಲ್ಲಿರುವ ಸಾವಿರಾರು ಮೀನುಗಳ ರಕ್ಷಣೆ ಮಾಡುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯ ಸಹಕಾರದೊಂದಿಗೆ ಹಾರಂಗಿ ಮೀನುಗಾರಿಕೆಯ ಅಧಿಕಾರಿ ವರ್ಗದವರು ನದಿಯಿಂದ ಮೀನು ಹಿಡಿದು ಹಾರಂಗಿ ನದಿಗೆ ಬಿಡುವ ಕಾರ್ಯದಲ್ಲಿ ತೊಡಗಿದ್ದಾರೆ.

ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಸಚಿನ್, ಉಪವಲಯ ಅರಣ್ಯ ಅಧಿಕಾರಿ ರಾಕೇಶ್ ಸೇರಿದಂತೆ ಸಿಬ್ಬಂದಿ ವರ್ಗದವರು ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.