ಮಡಿಕೇರಿ, ಏ. ೧೯ : ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ ೧೦ ವರ್ಷಗಳ ಅವಧಿಯಲ್ಲಿ ಭಾರತೀಯ ಸೇನೆಗೆ ಬಲ ಬಂದಿದ್ದು, ಶಕ್ತಿಯುತವಾಗಿ ಬೆಳೆದಿದೆ ಎಂದು ಭಾರತೀಯ ಜನತಾ ಪಕ್ಷದ ಪೂರ್ವ ಸೈನಿಕ ಪ್ರಕೋಷ್ಠ ಅಭಿಮತ ವ್ಯಕ್ತಪಡಿಸಿದೆ.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಸಂಚಾಲಕ ನಿವೃತ್ತ ಮೇಜರ್ ಓಡಿಯಂಡ ಎಸ್. ಚಿಂಗಪ್ಪ , ಕೊಡಗು ಜಿಲ್ಲೆಯಲ್ಲಿ ಸುಮಾರು ೧೦ ರಿಂದ ೧೫ ಸಾವಿರ ಮಾಜಿ ಸೈನಿಕರು ಹಾಗೂ ಅವರ ಅವಲಂಬಿತರಿದ್ದಾರೆ. ಎಲ್ಲಾ ಸೈನಿಕರಿಗೆ ಹಾಗೂ ಮಾಜಿ ಸೈನಿಕರಿಗೆ ಕೇಂದ್ರ ಹಾಗೂ ರಾಜ್ಯ ಸರಕಾರದ ಯೋಜನೆ ತಲುಪಿಸುವ ಸಲುವಾಗಿ ೨೦೧೬-೧೭ ರಲ್ಲಿ ಸೈನಿಕ ಪ್ರಕೋಷ್ಠ ಆರಂಭಿಸಲಾಯಿತು. ಜಿಲ್ಲೆಯಲ್ಲಿ ಪ್ರಕೋಷ್ಠ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಈ ಹಿಂದೆ ಭಾರತೀಯ ಸೇನೆಗೆ ಅಗತ್ಯ ಸೌಲಭ್ಯಗಳು ದೊರೆಯುತ್ತಿರಲಿಲ್ಲ. ಮೋದಿ ಅವರು ಪ್ರಧಾನಿಯಾದ ಬಳಿಕ ಸೇನೆಗೆ ಹೆಚ್ಚಿನ ಶಕ್ತಿ ಬಂದಿದೆ. ಒಂದು ಶ್ರೇಣಿ, ಒಂದು ಹುದ್ದೆ ಮೂಲಕ ಸಶಕ್ತೀಕರಣ ಮಾಡಿ ನಿವೃತ್ತಿ ಬಳಿಕ ಸೈನಿಕರಲ್ಲಿ ಆರ್ಥಿಕ ಬಲ ಬರುತ್ತಿದೆ. ಮೊದಲು ನಿವೃತ್ತಿಯಾದ ಬಳಿಕ ಸೂಕ್ತ ಹಣ ದೊರೆಯದೆ ಅತಂತ್ರತೆಯಲ್ಲಿ ಸಿಲುಕುತ್ತಿದ್ದರು. ಭಾರತೀಯ ಸೇನೆಯಲ್ಲಿ ಹುದ್ದೆಗಳನ್ನು ಭರ್ತಿ ಮಾಡಿ ಬಲಪಡಿಸುವ ಕೆಲಸವಾಗುತ್ತಿದೆ. ಅಗ್ನಿವೀರರ ಮೂಲಕ ೪೦ ಸಾವಿರ ಸೈನಿಕರನ್ನು ಸೇರ್ಪಡೆ ಮಾಡಲಾಗಿದೆ, ಮಾಜಿ ಸೈನಿಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಹಾಯಧನ, ಭೂಮಂಜೂರಾತಿ, ಜಮ್ಮು-ಕಾಶ್ಮೀರದಲ್ಲಿ ಅರ್ಟಿಕಲ್ ೩೭೦ ರದ್ದುಗೊಳಿಸಿ ಶಾಂತಿ ನೆಲೆಸುವಂತೆ ಕೇಂದ್ರ ಸರಕಾರ ಮಾಡಿದೆ. ಭಾರತೀಯ ಸೇನೆಯನ್ನು ಬಲಪಡಿಸಲು ಬಿಜೆಪಿ ಸರಕಾರ ಉತ್ತೇಜನ ನೀಡುತ್ತಿದ್ದು, ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಬಿಜೆಪಿಯನ್ನು ಬೆಂಬಲಿಸಬೇಕೆAದು ಕರೆ ನೀಡಿದ ಅವರು, ಮೋದಿ ಅವರು ಮುಂದಿನ ೫ ವರ್ಷ ಪ್ರಧಾನಿಯಾಗಿ ಮುಂದುವರೆಯಬೇಕೆAದು ತಿಳಿಸಿದರು.
ಅಗ್ನಿವೀರ ಯೋಜನೆಯನ್ನು ರಾಜಕೀಯ ಉದ್ದೇಶಕ್ಕೆ ವಿರೋಧಿಸುತ್ತಿರುವುದು ಸರಿಯಲ್ಲ. ಇದರಿಂದ ಯುವಜನಾಂಗಕ್ಕೆ ಕೇವಲ ಆರ್ಥಿಕವಲ್ಲದೆ, ಸಮಾಜದಲ್ಲಿ ಬೆಳವಣಿಗೆ ಸಾಧಿಸಲು ಪೂರಕವಾಗಲಿದೆ ಎಂದರು.
ಗೋಷ್ಠಿಯಲ್ಲಿ ಜಿಲ್ಲಾ ಸಹಸಂಚಾಲಕ ಸುಬೇದಾರ್ ಮೇಜರ್ (ನಿ) ಪಟ್ರಪಂಡ ಕರುಂಬಯ್ಯ, ರಾಜ್ಯ ಸದಸ್ಯ ಕುಟ್ಟಂಡ ನಂದಾ ಮಾದಪ್ಪ, ಜಿಲ್ಲಾ ಸದಸ್ಯ ಸುಬೇದಾರ್ ಮೇಜರ್ (ನಿ) ಅಗ್ರಿಮನೆ ವಾಸಪ್ಪ, ಮಡಿಕೇರಿ ನಗರ ಸಂಚಾಲಕ ಸುಬೇದಾರ್ ಮೇಜರ್ (ನಿ) ನಾಟೋಳಂಡ ಸೋಮಯ್ಯ, ಮಡಿಕೇರಿ ಮಂಡಲ ಸಂಚಾಲಕ ಚೋಂದಿರ ಕಾರ್ಯಪ್ಪ ಹಾಜರಿದ್ದರು