ಮಾನವೀಯತೆ ಮರೆಯಾಗುತ್ತಿದೆ ಎಂಬ ಆತಂಕದ ಮಾತುಗಳು ಹೆಚ್ಚುತ್ತಿರುವ ಈ ದಿನಗಳಲ್ಲಿ ಕೇರಳದ ಯುವಕನೋರ್ವ ಅರಬ್ ದೇಶದ ಗಲ್ಲಿನ ಕುಣಿಕೆಯಿಂದ ಪಾರಾಗಿ ಬಂದ ಘಟನೆ ಮಾನವೀಯತೆ ಇನ್ನೂ ಜೀವಂತವಾಗಿದೆ ಎಂಬ ಸಮಾಧಾನಕ್ಕೆ ಕಾರಣವಾಗಿದೆ
ಗಲ್ಪ್ ದೇಶದಲ್ಲಿ ಇನ್ನೇನು ಗಲ್ಲು ಶಿಕ್ಷೆ ಅನುಭವಿಸಬೇಕಾಗಿದ್ದ ಕೇರಳಿಗನೋರ್ವನನ್ನು ಗಲ್ಲಿನ ಕುಣಿಕೆಯಿಂದ ಭಾರತೀಯರು ಸಹಾಯ ನೀಡಿ ಪಾರು ಮಾಡಿದ ಕಥೆ ಇದಾಗಿದೆ.
ಈತನ ಹೆಸರು ಅಬ್ದುಲ್ ರಹೀಮ್, ಕೇರಳದ ಕೊಯಿಕೋಡ್ ಜಿಲ್ಲೆಯವನು. ಆಟೋ ಚಾಲಕನಾಗಿದ್ದ ರಹೀಮ್ಗೆ ಆರ್ಥಿಕ ಮುಗ್ಗಟ್ಟು ಎದುರಾದಾಗ ಉದ್ಯೋಗ ಹುಡುಕಿ ೧೮ ವರ್ಷಗಳ ಹಿಂದೆ ತನ್ನ ೨೬ನೇ ವಯಸ್ಸಿನಲ್ಲಿ ಸೌದಿ ಅರೇಬಿಯಾಕ್ಕೆ ಸಾಕಷ್ಟು ಕನಸಿನ ಮೂಟೆಯೊಂದಿಗೆ ಕೇರಳದಿಂದ ಹಾರುತ್ತಾನೆ.
ಹೌಸ್ ಡ್ರೆöÊವರ್ ವೀಸಾದಲ್ಲಿ ಸೌದಿಗೆ ತೆರಳಿದ್ದ ಅಬ್ದುಲ್ ರಹೀಂ ಅಲ್ಲಿ ತನ್ನ ಪ್ರಾಯೋಜಕರಾಗಿದ್ದ ಅಬ್ದುಲ್ಲಾ ಅವರ ಮಗನಾದ ಅನಸ್ ಎಂಬಾತನ ಆರೈಕೆಯ ವೃತ್ತಿ ನಿರ್ವಹಿಸಲು ನಿಯೋಜಿತನಾಗುತ್ತಾನೆ.
ಅನಸ್ ವಿಶೇಷ ಚೇತನ ಬಾಲಕ. ಈತನ ತಲೆಭಾಗದಿಂದ ಕೆಳಬದಿಯಲ್ಲಿ ಸ್ವಾಧೀನ ಇರುವುದಿಲ್ಲ. ಹೀಗಾಗಿ ಈತನನ್ನು ಸದಾ ಜಾಗ್ರತೆಯಾಗಿ ಆರೈಕೆ ಮಾಡಬೇಕಾಗಿರುತ್ತದೆ, ಈ ಕೆಲಸಕ್ಕೆ ಕೇರಳದಿಂದ ತೆರಳಿದ್ದ ಅಬ್ದುಲ್ ರಹೀಂ ನಿಯೋಜಿತನಾಗಿರುತ್ತಾನೆ. ಉಪಕರಣದ ಮೂಲಕವೇ ಅನಸ್ಗೆ ನೀರು, ಆಹಾರವನ್ನು ನೀಡಬೇಕಾಗುತ್ತಿತ್ತು, ವಯೋಸಹಜ ಕಾರಣದಿಂದ ಅನಸ್ ಆಗಿಂದಾಗ್ಗೆ ಕೆರಳುತ್ತಿದ್ದ, ಕೋಪಗೊಂಡ ಸಂದರ್ಭ ಅನಸ್ನನ್ನು ನೋಡಿಕೊಳ್ಳುವುದೇ ಅಬ್ದುಲ್ ರಹೀಂಗೆ ಬಹಳ ದೊಡ್ಡ ಸವಾಲಾಗುತ್ತಿತ್ತು. ಇದು ಬಹಳ ಕಷ್ಟದ ಕೆಲಸ ಎಂದು ರಹೀಂ ಕೇರಳದಲ್ಲಿನ ತನ್ನ ಮನೆಯವರಿಗೆ ಮೊಬೈಲ್ ಕರೆ ಮಾಡಿದಾಗಲೆಲ್ಲಾ ತಿಳಿಸುತ್ತಿದ್ದ, ಎಷ್ಟೇ ಕಷ್ಟವಾದರೂ ಹೊಟ್ಟೆ ಪಾಡಿನ ಸವಾಲಾಗಿದ್ದರಿಂದಾಗಿ ಅನಸ್ನನ್ನು ನೋಡಿಕೊಳ್ಳುವ ಚಾಕರಿ ಮಾಡದೇ ವಿಧಿಯಿರಲಿಲ್ಲ.
ಮನೆಯಿಂದ ಹೊರಹೋಗಬೇಕು ಎಂದು ಅನಸ್ ಇಚ್ಚಿಸಿದಾಗಲೆಲ್ಲಾ ರಹೀಂ ಗಾಲಿಕುರ್ಚಿಯಲ್ಲಿ ಮಾರುಕಟ್ಟೆ, ಉದ್ಯಾನ ಎಂದೆಲ್ಲಾ ಕರೆದುಕೊಂಡು ಹೋಗುತ್ತಿದ್ದ. ಅಬ್ದುಲ್ ರಹೀಂ ಕೆಲಸಕ್ಕೆ ಸೇರಿ ೨೬ ದಿನಗಳಾಗಿದ್ದವು. ಅನಸ್ನನ್ನು ಕರೆದುಕೊಂಡು ರಹೀಂ ಮಾರ್ಕೆಟಿಗೆಂದು ಮನೆ ಬಿಟ್ಟಿದ್ದ.
ದಾರಿ ಮಧ್ಯೆ ಸುಬೈದಿಯಾ ಎಂಬ ಸ್ಥಳದಲ್ಲಿ ಸಿಗ್ನಲ್ ಲೈಟ್ ಬಂದಾಗ ಕಾರ್ ನಿಲ್ಲಿಸಿದ್ದ ರಹೀಂ, ಹಸಿರು ಲೈಟ್ಗಾಗಿ ಕಾಯುತ್ತಿದ್ದ. ಈ ವೇಳೆಗೆ ಕಾರ್ನ ಹಿಂಬದಿ ಸೀಟ್ನಲ್ಲಿದ್ದ ಅನಸ್ ಏಕಾಏಕಿ ಗಲಾಟೆ ಪ್ರಾರಂಭಿಸಿದ, ಕಾರ್ ಮುಂದೋಡಿಸು ಎಂದು ಕೂಗತೊಡಗಿದ, ಸಿಗ್ನಲ್ ದಾಟುವಂತಿಲ್ಲ ಎಂದು ರಹೀಂ ಹೇಳಿದರೂ ಕೇಳದ ಅನಸ್ ಹಿಂಬದಿಯಿAದಲೇ ರಹೀಂಗೆ ಹೊಡೆಯಲಾರಂಭಿಸಿದ್ದ, ರಹೀಂಗೆ ಉಗುಳಿದ, ಬೊಬ್ಬಿಡತೊಡಗಿದ, ಎಷ್ಟೇ ಸಮಾಧಾನ ಮಾಡಿದರೂ ಅನಸ್ ಕೇಳಲಿಲ್ಲ. ಮತ್ತೆ ಮುಂದಕ್ಕೆ ಹೋದಾಗ ಅಲ್ಲೂ ಮತ್ತೊಂದು ಸಿಗ್ನಲ್ನಲ್ಲಿ ಕಾರ್ ನಿಲ್ಲಿಸಬೇಕಾದ ಪರಿಸ್ಥಿತಿಯಲ್ಲಿ ಅನಸ್ ಮತ್ತೆ ಗಲಾಟೆ ಪ್ರಾರಂಭಿಸಿ ಉಗುಳತೊಡಗಿದ್ದ. ಅನಸ್ನನ್ನು ಸಮಾಧಾನಪಡಿಸುವ ಸಂದರ್ಭ ರಹೀಂನ ಕೈ ಅನಸ್ನ ಕುತ್ತಿಗೆಗೆ ಅಳವಡಿಸಿದ್ದ ಉಪಕರಣಕ್ಕೆ ಆಕಸ್ಮಿಕವಾಗಿ ತಾಗಿತ್ತು. ಮತ್ತೆ ಕಾರ್ ಮುಂದಕ್ಕೆ ಸಂಚರಿಸಿದ ಸಂದರ್ಭ ಕೆಲಹೊತ್ತಿನಲ್ಲಿ ರಹೀಂ ಇದ್ಯಾಕೆ ಅನಸ್ ತೆಪ್ಪಗಿದ್ದಾನೆ ಎಂದು ಹಿಂಬದಿ ಗಮನಿಸಿದಾಗ ಅನಸ್ ಪ್ರಜ್ಞಾಹೀನನಾಗಿದ್ದ, ಇದೇನಾಯಿತು ಎಂದು ಗಾಬರಿಗೊಂಡ ರಹೀಂ ಮತ್ತಷ್ಟು ಗಮನಿಸಿದಾಗ ಉಪಕರಣಕ್ಕೆ ಈತನ ಕೈ ತಾಗಿದ್ದರಿಂದಾಗಿ ಗಾಳಿ ದೊರಕದೇ ಅನಸ್ ಪ್ರಜ್ಞಾಹೀನನಾಗಿದ್ದ ಎಂದು ತಿಳಿಯಿತು. ಮಾತ್ರವಲ್ಲ, ಈ ವೇಳೆಗಾಗಲೇ ಉಸಿರಾಡಲಾಗದೇ ಅನಸ್ ಕೊನೆಉಸಿರು ಎಳೆದುಬಿಟ್ಟಿದ್ದ.
ತನ್ನ ನಿರ್ವಹಣೆಯಲ್ಲಿದ್ದ ಮಗು ಸಾವನ್ನಪ್ಪಿದ್ದು ಗೊತ್ತಾಗಿ ಅಬ್ದುಲ್ ರಹೀಂ ಗಾಬರಿಯಾದ. ಕೂಡಲೇ ತನ್ನ ಸಹೋದರಳಿಯ ಅದೇ ಊರಿನಲ್ಲಿದ್ದ ಮಹಮ್ಮದ್ ನಝೀಂಗೆ ಕರೆ ಮಾಡಿ ವಿಷಯ ತಿಳಿಸಿದ. ಆತ ಕೂಡಲೇ ಸ್ಥಳಕ್ಕೆ ಬಂದು ರಹೀಂಗೆ ನೆರವಾದ, ಇವರೀರ್ವರು ಗಾಬರಿಯಿಂದ ಕಥೆಯೊಂದನ್ನು ಹೆಣೆದರು.
ಅನಸ್ ರಹೀಂ ಮತ್ತು ನಝೀಂ ಕಾರ್ನಲ್ಲಿ ತೆರಳುತ್ತಿದ್ದ ಸಂದರ್ಭ ದರೋಡೆಕೋರರು ಬಂದರೆAದು ಈ ಸಂದರ್ಭ ಆದ ಗಲಾಟೆಯಲ್ಲಿ ಉಪಕರಣಕ್ಕೆ ಅಳವಡಿಸಿದ್ದ ಗಾಳಿ ಸೂಸುವ ಯಂತ್ರ ಹಾನಿಯಾಗಿ ಅನಸ್ ಸಾವನ್ನಪ್ಪಿದ ಎಂದೂ, ದರೋಡೆಕೋರರು ತಮ್ಮಿಬ್ಬರನ್ನು ಕಾರ್ನಲ್ಲಿ ಕಟ್ಟಿ ಪರಾರಿಯಾದರೆಂದು ಕಥೆ ಕಟ್ಟಲಾಯಿತು, ಇವರ ದೂರಿನ ಮೇರೆ ಸ್ಥಳಕ್ಕಾಗಮಿಸಿದ ಪೊಲೀಸರಿಗೂ ಇದೇ ಕಥೆ ಹೇಳಲಾಯಿತು.
ಆದರೆ ಸೌದಿ ಪೊಲೀಸರು ಈ ಕಾಗಕ್ಕ ಗುಬ್ಬಕ್ಕನ ಕಥೆಯನ್ನು ನಂಬಲಿಲ್ಲ, ದರೋಡೆಕೋರರು ಬಂದಿದ್ದಾರೆ ಎಂಬುದಕ್ಕೆ ಸಾಕ್ಷಾಧಾರವೇ ದೊರಕಲಿಲ್ಲ. ಇದೇ ವೇಳೆಗೆ ಅನಸ್ನ ಪೋಷಕರು ಪೊಲೀಸರಿಗೆ ದೂರು ನೀಡಿ ಅಬ್ದುಲ್ ರಹೀಂನ ನಿರ್ಲಕ್ಷö್ಯದಿಂದಲೇ ತಮ್ಮ ಮಗು ಸಾವನ್ನಪ್ಪಿದ್ದು ರಹೀಂಗೆ ಗಲ್ಲುಶಿಕ್ಷೆಯಾಗಲೇಬೇಕೆಂದು ಒತ್ತಾಯಿಸಿದರು.
ಹೇಳಿಕೇಳಿ, ಸೌದಿಯಲ್ಲಿ ಕಾನೂನು ಪ್ರಬಲವಾಗಿದ್ದು ಮಗುವಿನ ಹತ್ಯೆಯ ಆರೋಪಕ್ಕೆ ರಹೀಂ ಗುರಿಯಾದ. ಸಹಾಯಕ್ಕೆ ಬಂದಿದ್ದ ನಝೀಂ ಮಾತ್ರ ಜಾಮೀನಿನ ಮೇಲೆ ಬಿಡುಗಡೆಯಾದ.
ವಿಚಾರಣೆ ನ್ಯಾಯಾಲಯದ ಹಂತಕ್ಕೆ ಬಂದಾಗ ಅನಸ್ನ ಪೋಷಕರು ಗಲ್ಲುಶಿಕ್ಷೆಗೆ ಪಟ್ಟು ಹಿಡಿದರು. ರಾಜೀ ತೀರ್ಮಾನದ ಸಂದರ್ಭ ತಮಗೆ ಆರೋಪಿಯಿಂದ ೩೪ ಕೋಟಿ ರೂಪಾಯಿ ಕೊಡಿಸುವಂತೆ ಪಟ್ಟು ಹಿಡಿದರು. ೩೪ ಕೋಟಿ ಹಣ ನೀಡಲು ಸಾಧ್ಯವಾಗದೇ ಹೋದಲ್ಲಿ ಗಲ್ಲು ಶಿಕ್ಷೆ ವಿಧಿಸುವಂತೆಯೂ ನ್ಯಾಯಾಲಯಕ್ಕೆ ಕೋರಿದರು. ಈ ಕೋರಿಕೆಯನ್ನು ಸೌದಿ ನ್ಯಾಯಾಲಯ ಒಪ್ಪಿತ್ತು.
ಎಲ್ಲಿಯ ಆಟೋ ಡ್ರೈವರ್, ಎಲ್ಲಿಯ ೩೪ ಕೋಟಿ ರೂಪಾಯಿ? ಕೇವಲ ೧೨ ಸಾವಿರ ರೂ. ಮಾಸಿಕ ವೇತನಕ್ಕೆ ಸೌದಿ ಸೇರಿದ್ದ ರಹೀಂಗೆ ಪ್ರಥಮ ತಿಂಗಳ ವೇತನ ಕೂಡ ದೊರಕಿರಲಿಲ್ಲ. ಹೀಗಿರುವಾಗ ೩೪ ಕೋಟಿ ಹಣ ನೀಡಲಾಗದೇ ೧೮ ವರ್ಷಗಳಿಂದ ಹೊರಪ್ರಪಂಚವನ್ನೇ ಕಾಣದೇ ಅಬ್ದುಲ್ ರಹೀಂ ಸೌದಿಯ ಸೆರೆಮನೆಯಲ್ಲಿ ಕತ್ತಲೆ ಕೂಪದಲ್ಲಿಯೇ ಕಾಲ ಕಳೆಯಬೇಕಾಯಿತು.
ಏಪ್ರಿಲ್ ೨೬ ಈ ದಿನದೊಳಕ್ಕೆ ೩೪ ಕೋಟಿ ಸಂದಾಯವಾಗದೇ ಹೋದಲ್ಲಿ ಮಗುವಿನ ಹತ್ಯೆ ಆರೋಪದ ಮೇರೆಗೆ ಅಬ್ದುಲ್ ರಹೀಂ ಗಲ್ಲುಶಿಕ್ಷೆಗೆ ತಲೆಯೊಡ್ಡಬೇಕಾಗಿತ್ತು.
ಇನ್ನೇನು ೨೦ ದಿನಗಳಿವೆ ಎನ್ನುವಾಗ ದೇವರೇ ಕಳುಹಿಸಿದಂತೆ ಕೆಲವರು ರಹೀಂ ಜೀವ ಉಳಿಸುವ ಪ್ರಕ್ರಿಯೆಗೆ ಮುಂದಾದರು. ಕ್ರೌಡ್ ಫಂಡಿAಗ್ ಮೂಲಕ ರಹೀಂ ಬಜಾವೋ ಎಂಬ ಅಭಿಯಾನ ಪ್ರಾರಂಭವಾಯಿತು, ಕೇರಳದ ಚಿನ್ನೋದ್ಯಮಿ ಬೋಬಿ ಎಂಬವರು ೧ ಕೋಟಿ ಹಣವನ್ನು ನೀಡಿದ್ದಲ್ಲದೇ ತನ್ನ ಸಂಪರ್ಕದಲ್ಲಿ ಹಣ ಸಂಗ್ರಹಿಸುವ ಕಾರ್ಯಕ್ಕೆ ಮುಂದಾದರು.
ಆಗ ನಡೆದದ್ದೇ ಪವಾಡ, ೧೦-೧೨ ದಿನಗಳು ಕಳೆಯುವಷ್ಟರಲ್ಲಿಯೇ ೩೪ ಕೋಟಿ ರುಪಾಯಿ ಸಂಗ್ರಹವಾಗಿಯೇ ಬಿಟ್ಟಿತು ಹಣ ನೀಡಿದ ದಾನಿಗಳು ರಹೀಂ ಮುಸ್ಲಿಂ ಎಂಬ ಭಾವನೆ ಇಲ್ಲದಂತೆ ಭಾರತೀಯನ ಜೀವ ರಕ್ಷಣೆ ಮುಖ್ಯ ಎಂದು ಕೈಲಾದ ಹಣ ನೀಡತೊಡಗಿದರು. ನಿಗದಿತ ಖಾತೆಗೆ ವಿಶ್ವವ್ಯಾಪಿಯಿಂದ ಹಣ ಸಂದಾಯವಾಗತೊಡಗಿತು, ರಹೀಂ ಜೀವ ಉಳಿಸುವುದೇ ಎಲ್ಲರ ಆದ್ಯತೆಯಾಗಿತ್ತು.
ನಿಗದಿತ ಅವಧಿಯೊಳಕ್ಕೆ ೩೪ ಕೋಟಿ ರೂಪಾಯಿ ಸಂಗ್ರಹವಾಗಿದ್ದರೂ ಮತ್ತಷ್ಟು ಹಣ ಖಾತೆಗೆ ಬರತೊಡಗಿದಾಗ ಇನ್ನು ಸಾಕು, ಯಾರೂ ಹಣ ಕಳುಹಿಸಬೇಡಿ ಎಂಬ ಸಂದೇಶವೂ ರವಾನೆಯಾಯಿತು. ಕೇರಳದ ಇತಿಹಾಸದಲ್ಲಿಯೇ ಇಷ್ಟೊಂದು ಬೃಹತ್ ಮೊತ್ತದ ಹಣ ವ್ಯಕ್ತಿಯೋರ್ವನ ಜೀವರಕ್ಷಣೆಗಾಗಿ ಸಂಗ್ರಹವಾಗಿ ದಾಖಲೆ ಸೃಷ್ಟಿಸಿತು.
ವಿಶೇಷ ಎಂದರೆ ಮುಸ್ಲಿಂ ಸಮುದಾಯದವರು ಮಾತ್ರವಲ್ಲ, ಕೇರಳದ ಹಿಂದೂಗಳು, ಕ್ರೈಸ್ತರು ಕೂಡ ಸಾವಿರ, ಲಕ್ಷ ಎಂದು ರಹೀಂ ಉಳಿವಿಗಾಗಿ ಹಣ ನೀಡಿದ್ದಾರೆ. ಇಲ್ಲಿ ರಹೀಂನ ಧರ್ಮ ಮುಖ್ಯವಾಗದೇ ಭಾರತೀಯ ಬದುಕಿ ಬರಬೇಕು ಎಂಬ ಭಾವನೆಯೇ ಮುಖ್ಯವಾಯಿತು.
ಇದೀಗ ೩೪ ಕೋಟಿ ರೂಪಾಯಿ ಮೃತ ಅನಸ್ನ ಪೋಷಕರಿಗೆ ಸಂದಾಯವಾಗಿದೆ. ಏಪ್ರಿಲ್ ೨೬ ರಂದು ಗಲ್ಲುಶಿಕ್ಷೆಗೆ ಗುರಿಯಾಗಬೇಕಾಗಿದ್ದ ಅಬ್ದುಲ್ ರಹೀಂ ಇನ್ನೇನು ಜೈಲಿನಿಂದ ೧೮ ವರ್ಷಗಳ ಬಳಿಕ ಬಿಡುಗಡೆಯಾಗಿ ತವರೂರ ವಿಮಾನ ಹತ್ತಲಿದ್ದಾನೆ.
ಮಾನವೀಯತೆ ಜೀವಂತವಾಗಿದೆ ಎಂಬುದಕ್ಕೆ ಇತ್ತೀಚಿನ ಉದಾಹರಣೆ ಇದಾಗಿದ್ದರೆ, ಕೊಡುವ ಮನಸ್ಸುಗಳು ಹೆಚ್ಚಾದಾಗ ಯಾರ ಜೀವವನ್ನೂ ಉಳಿಸಲು ಸಾಧ್ಯ ಎಂಬ ಪಾಠವನ್ನೂ ಈ ಘಟನೆ ಕಲಿಸಿದೆ
ಅಮ್ಮ ನಿನ್ನನ್ನು ನಾನು ಸಾಕುತ್ತೇನೆ ಎಂದು ಭರವಸೆ ನೀಡಿ ಸೌದಿಗೆ ಹಾರಿದ್ದ ಮಗ ಗಲ್ಲುಕುಣಿಕೆಯಿಂದ ಪಾರಾಗಿ ಮತ್ತೆ ೧೮ ವರ್ಷಗಳ ನಂತರ ಮನೆಗೆ ಬರುತ್ತಿರುವಾಗ ಮಗನ ಮುಖ ನೋಡುವ ಕ್ಷಣಕ್ಕಾಗಿ ಕೇರಳದ ಕೋಯಿಕೊಡ್ನಲ್ಲಿ ಮಾತೃಹೃದಯ ಕಾಯುತ್ತಿದೆ.
- ಅನಿಲ್ ಎಚ್.ಟಿ