ನಾಪೋಕ್ಲು, ಏ. ೧೮: ಸ್ಥಳೀಯ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ಏ. ೧೮ರಿಂದ ೨೧ರವರೆಗೆ ನಡೆಯುವ ೩ನೇ ವರ್ಷದ ಕೊಡವ ಕೌಟುಂಬಿಕ ಬೊಟ್ಟೋಳಂಡ ಕಪ್ ಹಗ್ಗಜಗ್ಗಾಟ ಕೇರ್‌ಬಲಿ ನಮ್ಮೆ ಸ್ಪರ್ಧೆಗೆ ಸಂಭ್ರಮ ಚಾಲನೆ ನೀಡಲಾಯಿತು.

ಬೆಳಿಗ್ಗೆ ೯ ಗಂಟೆಗೆ ಪಟ್ಟಣದ ಶ್ರೀರಾಮ ಮಂದಿರದ ಬಳಿಯಿಂದ ಕೊಡವ ಸಾಂಪ್ರದಾಯಿಕ ಉಡುಗೆ, ತೊಡುಗೆ, ತಳಿಯಕ್ಕಿ ಬೊಳಕ್, ಕೊಂಬು ಕೊಟ್ಟ್ ವಾಲಗದೊಂದಿಗೆ ಮೈದಾನದವರೆಗೆ ಸಾಂಸ್ಕೃತಿಕ ಮೆರವಣಿಗೆ ನಡೆಸಲಾಯಿತು.

ನಂತರ ನಡೆದ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಬೊಟ್ಟೋಳಂಡ ಕುಟುಂಬದ ಪಟ್ಟೆದಾರ ಅಚ್ಚಿಪೂಣಚ್ಚ ನೆರವೇರಿಸಿದರು. ಈ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮುಖ್ಯ ಅತಿಥಿ ಡಿ.ಸಿ.ಸಿ ಬ್ಯಾಕ್ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ, ಕೊಡವ ಕುಟುಂಬಗಳ ನಡುವೆ ಹಾಕಿ, ಕ್ರಿಕೆಟ್, ಹಗ್ಗ ಜಗ್ಗಾಟ ಹಬ್ಬವನ್ನು ಸಂಭ್ರಮದಿAದ ಆಚರಿಸಲಾಗುತ್ತಿದೆ. ಅದಕ್ಕೆ ಮೂಲ ಕಾರಣ ಪಾಂಡAಡ ಕುಟ್ಟಪ್ಪ ಅವರು. ಅವರನ್ನು ನಾವು ಈ ಸಂದರ್ಭದಲ್ಲಿ ಸ್ಮರಿಸಲೇಬೇಕು ಎಂದರು. ಇದರಿಂದ ಕೊಡವ ಕುಟುಂಬಗಳ ಒಗ್ಗೂಡುವಿಕೆ ಸಾಧ್ಯವಾಯಿತು ಎಂದ ಅವರು, ಮುಂದಿನ ದಿನಗಳಲ್ಲಿ ಹಾಕಿ, ಕ್ರಿಕೆಟ್, ಹಗ್ಗ ಹಗ್ಗಾಟದೊಂದಿಗೆ ಇನ್ನಿತರ ಕ್ರೀಡೆಗಳನ್ನು ನಡೆಸಲು ಮುಂದಾಗಬೇಕು ಎಂದು ಸಲಹೆ ನೀಡಿದರು. ಹಗ್ಗ ಜಗ್ಗಾಟ ಶಕ್ತಿ ಪ್ರದರ್ಶನವಾಗಿದೆ.

(ಮೊದಲ ಪುಟದಿಂದ) ಎಲ್ಲಾ ಆಟಗಾರರೂ ಸಮವಾಗಿ ಭಾಗವಹಿಸಿದರೆ ಮಾತ್ರ ಗೆಲುವು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.

ಕೊಡವ ಟಗ್‌ಆಫ್‌ವಾರ್ ಅಕಾಡೆಮಿ ಅಧ್ಯಕ್ಷ ಪೊನ್ನೋಲತಂಡ ಕಿರಣ್ ಪೊನ್ನಪ್ಪ ಮಾತನಾಡಿ, ೨೦೨೨ರಲ್ಲಿ ಕಕ್ಕಬ್ಬೆಯಲ್ಲಿ ಪೊನ್ನೋಲತಂಡ ಕುಟುಂಬಸ್ಥರು ಮೊದಲು ಆರಂಭಿಸಿದ ಕೊಡವ ಕೌಟುಂಬಿಕ ಹಗ್ಗ ಜಗ್ಗಾಟ ಹಬ್ಬದಲ್ಲಿ ೪೩ ತಂಡಗಳು ಮಾತ್ರ ಭಾಗವಹಿಸಿದ್ದವು. ೨೦೨೩ರಲ್ಲಿ ಟಿ. ಶೆಟ್ಟಿಗೇರಿಯಲ್ಲಿ ಚಟ್ಟಂಗಡ ಕುಟುಂಬಸ್ಥರು ಆಯೋಜಿಸಿದ ಹಬ್ಬದಲ್ಲಿ ಪುರುಷರ ಮತ್ತು ಮಹಿಳೆಯರ ತಂಡಗಳು ಸೇರಿ ೧೭೭ ತಂಡಗಳು ಪಾಲ್ಗೊಂಡಿದ್ದವು. ಇದೀಗ ನಾಪೋಕ್ಲುವಿನಲ್ಲಿ ನಡೆಯುತ್ತಿರುವ ಬೊಟ್ಟೋಳಂಡ ಕಪ್ ನಲ್ಲಿ ೮೦ ಮಹಿಳಾ ತಂಡಗಳು ಸೇರಿದಂತೆ ಒಟ್ಟು ೨೩೬ ತಂಡಗಳು ಪಾಲ್ಗೊಳ್ಳುತ್ತಿರುವುದು ಸಂತಸ ತಂದಿದೆ. ಮುಂದಿನ ವರ್ಷದ ಪಂದ್ಯಾವಳಿಯ ನೇತೃತ್ವವನ್ನು ಮೈತಾಡಿ ಗ್ರಾಮದ ಬಾಳೆಕುಟ್ಟಿರ ಕುಟುಂಬಸ್ಥರು ವಹಿಸಲಿದ್ದು ಅರಮೇರಿ ಶಾಲಾ ಮೈದಾನದಲ್ಲಿ ನಡೆಯಲಿದೆ. ಎಲ್ಲರೂ ಈ ಹಬ್ಬಕ್ಕೆ ಸಹಕಾರ ನೀಡಬೇಕು ಎಂದರು.

ಅಖಿಲ ಕೊಡವ ಸಮಾಜದ ಮತ್ತು ಪಾಡಿ ಶ್ರೀ ಇಗ್ಗುತ್ತಪ್ಪ ಭಕ್ತ ಜನ ಸಂಘದ ಅಧ್ಯಕ್ಷ ಪರದಂಡ ಸುಮನ್ ಸುಬ್ರಮಣಿ ಮಾತನಾಡಿ ಹಗ್ಗ ಜಗ್ಗಾಟ ಬಲಾಢ್ಯರ ಕ್ರೀಡೆ. ಕೊಡವರ ತಿನಿಸು, ದೇಹದ ಬಲಾಢ್ಯತೆಗೆ ಇದು ಸೂಕ್ತವಾಗಿದೆ. ಇದನ್ನು ಪೈಪೋಟಿ ಎಂದು ತಿಳಿಯದೆ ಹಬ್ಬದ ರೀತಿಯಲ್ಲಿ ಎಲ್ಲರೂ ಇದರಲ್ಲಿ ಭಾಗವಹಿಸಿ ಸಹಕರಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಚಟ್ಟಂಗಡ ಕುಟುಂಬದ ಕಾರ್ಯದರ್ಶಿ ರವಿ ಸುಬ್ಬಯ್ಯ, ಡಿ.ಸಿ.ಸಿ ಬ್ಯಾಂಕ್ ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ, ಕೆ.ಪಿ.ಎಸ್ ಶಾಲೆಯ ಪ್ರಬಾರ ಪ್ರಾಂಶುಪಾಲೆ ಮೇದುರ ವಿಶಾಲ್ ಕುಶಾಲಪ್ಪ, ಪೊನ್ನೋಲತಂಡ ಅರುಣ್ ತಿಮ್ಮಯ್ಯ, ಬೊಟ್ಟೋಳಂಡ ಮಿಟ್ಟು ಪೂಣಚ್ಚ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೊಟ್ಟೋಳಂಡ ಕುಟುಂಬದ ಪಟ್ಟೆದಾರ ಅಚ್ಚಿ ಪೂಣಚ್ಚ ವಹಿಸಿದ್ದರು.

ಈ ಸಂದರ್ಭದಲ್ಲಿ ಅಕಾಡೆಮಿ ಧ್ವಜ, ಪೊನ್ನೋಲತಂಡ, ಚಟ್ಟಂಗಡ, ಬೊಟ್ಟೋಳಂಡ ಕುಟುಂಬಸ್ಥರ ಪ್ರತ್ಯೇಕ ಧ್ವಜಾರೋಹಣ ನೆರವೇರಿಸಲಾಯಿತು. ಇದರೊಂದಿಗೆ ಪಾರಿತೋಷಕ ಉದ್ಘಾಟನೆ, ಮೈದಾನ ಉದ್ಘಾಟನೆಯನ್ನು ಅತಿಥಿಗಳು ನೆರವೇರಿಸಿದರು.

ಬೊಟ್ಟೋಳಂಡ ಅಶಿತಾ ಬೋಪಣ್ಣ ಪ್ರಾರ್ಥನೆ, ಬೊಟ್ಟೊಳಂಡ ಕುಟುಂಬದ ಹಗ್ಗ ಜಗ್ಗಾಟ ಸಮಿತಿ ಅಧ್ಯಕ್ಷ ಗಣೇಶ್ ಗಣಪತಿ ಸ್ವಾಗತ. ಮಾಳೇಟಿರ ಶ್ರೀನಿವಾಸ್ ಮತ್ತು ಬಾಳೆಯಡ ದಿವ್ಯಾ ಮಂದಪ್ಪ ನಿರೂಪಿಸಿ, ಬೊಟ್ಟೋಳಂಡ ಭವಾನಿ ಜಗದೀಶ್ ವಂದಿಸಿದರು.

ನAತರ ನಾಪೋಕ್ಲು ಮತ್ತು ಅಮ್ಮತಿ ಕೊಡವ ಸಮಾಜದ ಪುರುಷರ ತಂಡದ ನಡುವೆ ಪ್ರದರ್ಶನ ಪಂದ್ಯ ಮತ್ತು ನಾಪೋಕ್ಲು ಮತ್ತು ಮಡಿಕೇರಿ ಕೊಡವ ಸಮಾಜದ ಮಹಿಳಾ ತಂಡಗಳ ನಡುವೆ ಪ್ರದರ್ಶನ ಪಂದ್ಯ ನಡೆಯಿತು. ಪುರುಷರ ಪಂದ್ಯದಲ್ಲಿ ಅಮ್ಮತಿ ಕೊಡವ ಸಮಾಜವನ್ನು ಸೋಲಿಸಿದರೆ, ಮಹಿಳೆಯರ ಪಂದ್ಯದಲ್ಲಿ ನಾಪೋಕ್ಲು ಕೊಡವ ಸಮಾಜ ತಂಡ ಮಡಿಕೇರಿ ಕೊಡವ ಸಮಾಜ ತಂಡವನ್ನು ಸೋಲಿಸಿತು. ಸ್ವಾಗತ ನೃತ್ಯ, ಬೊಳಕಾಟ್, ಉಮ್ಮತಾಟ್ ಪ್ರದರ್ಶನ ಏರ್ಪಡಿಸಲಾಗಿತ್ತು. -ಪಿ.ವಿ. ಪ್ರಭಾಕರ್