ಮಡಿಕೇರಿ, ಏ. ೧೮: ಕ್ರೀಡೆ, ವ್ಯಾಯಾಮದ ಮೂಲಕ ದೈಹಿಕ ವಾಗಿ, ಮಾನಸಿಕವಾಗಿ ಸದೃಢರಾಗುವದರೊಂದಿಗೆ ಪರಿಸರ ರಕ್ಷಣೆ ಕೂಡ ಎಲ್ಲರ ಹೊಣೆಯಾಗಿರಬೇಕು ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ತ್ರಿಪಾಠಿ ಮಕ್ಕಳಿಗೆ ಕರೆ ನೀಡಿದರು.

ವಾಂಡರ‍್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ದಿ.ಸಿ.ವಿ.ಶಂಕರ್ ಸ್ವಾಮಿ ಸ್ಮರಣಾರ್ಥ ಜಿಲ್ಲಾ ಕ್ರಿಡಾಂಗಣದಲ್ಲಿ ನಡೆಯುತ್ತಿರುವ ೩೦ನೇ ವರ್ಷದ ಉಚಿತ ಬೇಸಿಗೆ ಶಿಬಿರಕ್ಕೆ ಆಗಮಿಸಿ ಶಿಬಿರಾರ್ಥಿ ಗಳಿಗೆ ಹಿತವಚನ ನುಡಿದರು. ಇದೀಗ ವಾತಾವರಣದಲ್ಲಿ ಬದಲಾವಣೆಯಾಗಿದ್ದು, ಕಾಲ ಕಾಲಕ್ಕೆ ಮಳೆಯಾಗುತ್ತಿಲ್ಲ, ಪರಿಸರಕ್ಕೆ ಹಾನಿ ಮಾಡಿರುವದರಿಂದಾಗಿ ಈ ರೀತಿ ಆಗುತ್ತಿದೆ. ಹಾಗಾಗಿ ಮಕ್ಕಳು ಈಗಿನಿಂದಲೇ ಪರಿಸರದ ಬಗ್ಗೆ ಕಾಳಜಿ ವಹಿಸಬೇಕೆಂದು ಹೇಳಿದರು. ಶಿಬಿರದಲ್ಲಿ ಕಲಿಸಿಕೊಟ್ಟಿದ್ದನ್ನು ಶಿಬಿರದ ಬಳಿಕವೂ ಮನೆಯಲ್ಲಿ ಮುಂದುವರಿಸಬೇಕು. ಅಭ್ಯಾಸ ಮಾಡುವದರಿಂದ ಸೋಮಾರಿತನ ಹೋಗುವದ ಲ್ಲದೆ, ಏಕಾಗ್ರತೆ ಹೆಚ್ಚಾಗುತ್ತದೆ. ರಾತ್ರಿ ಊಟ ಆದ ಬಳಿಕ ಟಿವಿ, ಇಂಟರ್‌ನೆಟ್ ನೋಡದೆ ವಿಶ್ರಾಂತಿ ಪಡೆಯಬೇಕೆಂದು ಕಿವಿಮಾತು ಹೇಳಿದರು. ಈ ಸಂದರ್ಭ ಶಿಬಿರದ ಸಂಚಾಲಕ ಬಾಬು ಸೋಮಯ್ಯ, ವಾಂಡರ‍್ಸ್ ಕಾರ್ಯದರ್ಶಿ ಪಾರ್ಥ ಚಂಗಪ್ಪ, ದೈಹಿಕ ಶಿಕ್ಷಣ ಶಿಕ್ಷಕ ಎಸ್.ಟಿ.ವೆಂಕಟೇಶ್, ತರಬೇತುದಾರರಿದ್ದರು.