ಮಡಿಕೇರಿ, ಏ. ೧೭: ಮಡಿಕೇರಿಗೆ ಆಗಮಿಸಿದ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೊಡಗು ಜಿಲ್ಲೆಯ ಅರೆಭಾಷಿಕ ಗೌಡರು ಹಾಗೂ ಒಕ್ಕಲಿಗರ ನಾಯಕರನ್ನು ಭೇಟಿಯಾಗುವ ಇಂಗಿತ ವ್ಯಕ್ತಪಡಿಸಿದ ಹಿನ್ನೆಲೆ ಕೊಡಗು ಗೌಡ ವಿದ್ಯಾಸಂಘದಲ್ಲಿ ಸಭೆಯನ್ನು ಆಯೋಜಿಸಲಾಗಿತ್ತು. ರಾಜ್ಯದ ಉಪ ಮುಖ್ಯಮಂತ್ರಿಗಳಿಗೆ ಗೌರವ ಸೂಚಿಸಿ ಜನಾಂಗದ ನಾಯಕನಾಗಿ ಈ ಸಭೆಗೆ ಹಾಜರಾಗಿದ್ದೇನೆ ಹೊರತು ಯಾವುದೇ ಪಕ್ಷದ ಅಭಿಮಾನಿಯಾಗಿ ಅಲ್ಲ ಎಂದು ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ ಸ್ಪಷ್ಟಪಡಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು ಉಪ ಮುಖ್ಯಮಂತ್ರಿಗಳು ಆಸೀನರಾಗಿದ್ದ ವೇದಿಕೆಯಲ್ಲಿ ಕೊಡಗು ಗೌಡ ಯುವ ವೇದಿಕೆ ವತಿಯಿಂದ ಗೌಡ ಕ್ರಿಕೆಟ್ ಕಪ್‌ನ ಟ್ರೋಫಿ ಅನಾವರಣ ಸಮಾರಂಭವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತನಗೆ ಆಹ್ವಾನವಿದ್ದ ಕಾರಣ ತಾನು ಹಾಜರಿದ್ದೆ ಎಂದು ತಿಳಿಸಿದ್ದಾರೆ.

ವೇದಿಕೆಯಲ್ಲಿ ತಾನು ಯಾವ ಪಕ್ಷಕ್ಕೂ ಅಥವಾ ಅಭ್ಯರ್ಥಿಗೂ ಮತ ಚಲಾಯಿಸಲು ಕರೆ ನೀಡಿರುವುದಿಲ್ಲ. ಅರೆಭಾಷಿಕ ಜನಾಂಗದ ಮತ ಬಾಂಧವರು ವಿದ್ಯಾವಂತರು ಹಾಗೂ ಮತ ಚಲಾಯಿಸಲು ಪ್ರಬುದ್ಧರು. ಬಿಜೆಪಿ ಪ್ರಧಾನ ಕಾರ್ಯದರ್ಶಿಯೊಬ್ಬರು ಕಪೋಲ ಕಲ್ಪಿತ, ಆಧಾರ ರಹಿತ ಹೇಳಿಕೆ ನೀಡಿರುವುದನ್ನು ನಾನು ಖಂಡಿಸುತ್ತೇನೆ ಎಂದಿದ್ದಾರೆ.

ವೇದಿಕೆಯಲ್ಲಿ ನಾನೊಬ್ಬ ಜನಾಂಗದ ನಾಯಕನಾಗಿ ಮಾತನಾಡಿದ್ದು, ಮತಚಲಾಯಿಸುವುದು ಪ್ರಜೆಗಳ ವೈಯಕ್ತಿಕ ಹಕ್ಕು, ನಾನು ಇದೇ ವ್ಯಕ್ತಿಗೆ ಅಥವಾ ಪಕ್ಷಕ್ಕೆ ಮತ ಚಲಾಯಿಸುವಂತೆ ಹೇಳಿಕೆ ನೀಡಲು ಸಾಧ್ಯವಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿ ವೇದಿಕೆಯಿಂದ ನಿರ್ಗಮಿಸಿರುವುದಾಗಿ ಹೇಳಿದ್ದಾರೆ. ಜನಾಂಗದ ಒಬ್ಬ ಜವಾಬ್ದಾರಿಯುತ ವ್ಯಕ್ತಿಯಾಗಿ ಉಪ ಮುಖ್ಯಮಂತ್ರಿಗಳ ಸಭೆಗೆ ಹಾಜರಾಗಿ ಗೌರವ ಸೂಚಿಸಿದಂತೆಯೇ, ಮಡಿಕೇರಿಯಲ್ಲಿ ಹಿಂದೂ ಜಾಗರಣಾ ವೇದಿಕೆ ಆಯೋಜಿಸಿದ್ದ ಜಗದೀಶ್ ಕಾರಂತರ ಚುನಾವಣಾ ಭಾಷಣದಲ್ಲಿ ಹಿಂದೂ ಜಾಗರಣಾ ವೇದಿಕೆಯ ಕೋರಿಕೆಯ ಮೇರೆಗೆ ತಾನು ಗೌಡ ಸಾಮಾಜದ ಅಧ್ಯಕ್ಷರೊಂದಿಗೆ ಭಾಗವಹಿಸಿ ಜವಾಬ್ದಾರಿಕೆ ಮೆರೆದಿದ್ದೇನೆ ಎಂದು ಸ್ಪಷ್ಟಪಡಿಸಿರುವ ಸೂರ್ತಲೆ ಸೋಮಣ್ಣ ಅವರು, ಚುನಾವಣಾ ಸಂದರ್ಭವನ್ನು ದುರುಪಯೋಗ ಪಡಿಸಿಕೊಂಡು ಆಧಾರ ರಹಿತ ಹೇಳಿಕೆಗಳನ್ನು ನೀಡಿ ಗೊಂದಲ ಸೃಷ್ಟಿಸುವ ಕ್ರಮವನ್ನು ಖಂಡಿಸುವುದಾಗಿ ತಿಳಿಸಿದ್ದಾರೆ.