ಕಣಿವೆ, ಏ. ೧೭: ದಿನೇ ದಿನೇ ಹೆಚ್ಚುತ್ತಲೇ ಇರುವ ಬಿಸಿಲ ತಾಪದಿಂದಾಗಿ ಅರಣ್ಯದÀ ಒಳಗೆ ಇರುವ ಬಹುತೇಕ ಕೆರೆ ಕಟ್ಟೆಗಳಲ್ಲಿ ನೀರಿಲ್ಲದೆ ಬತ್ತಿ ಹೋಗಿವೆ.

ಆದರೆ ಇದಕ್ಕೆ ವ್ಯತಿರಿಕ್ತ ಎಂಬAತೆ ಕುಶಾಲನಗರ ತಾಲೂಕಿನ ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿನ್ನೇನಹಳ್ಳಿಯ ಅರಣ್ಯದೊಳಗೆ ಇರುವ ಹಿರಿಕೆರೆಯಲ್ಲಿ ನೀರು ಸಮೃದ್ಧವಾಗಿದ್ದು ವನ್ಯ ಜೀವಿಗಳು ನಿಟ್ಟುಸಿರು ಬಿಡುವಂತಾಗಿದೆ.

ಸುಮಾರು ೧೫ ಎಕರೆಯಷ್ಟು ವಿಶಾಲ ವ್ಯಾಪ್ತಿಯೊಂದಿಗೆ ಹೆಸರಿನಷ್ಟೆ ಹಿರಿದಾಗಿರುವ ಈ ಹಿರಿಕೆರೆ ಕಾಡು ಪ್ರಾಣಿಗಳ ದಾಹವನ್ನು ನೀಗಿಸುವ ಜೊತೆಗೆ ಅರಣ್ಯದಂಚಿನಲ್ಲಿರುವ ಚಿನ್ನೇನಹಳ್ಳಿ ಗಿರಿಜನ ಹಾಡಿಯ ಮಂದಿ ಸಾಕಿರುವ ಜಾನುವಾರುಗಳ ದಾಹವನ್ನೂ ಕೂಡ ನೀಗಿಸುತ್ತಿದೆ.

ಈ ಹಿರಿಕೆರೆ ಅರಣ್ಯ ವ್ಯಾಪ್ತಿಯಲ್ಲಿ ಕಾಡಾನೆಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು ಇವುಗಳ ದಾಹ ನೀಗಿಸುತ್ತಿರುವ ಈ ಕೆರೆ ಅರಣ್ಯದಂಚಿನ ಕೃಷಿಕರು ಅಳವಡಿಸಿರುವ ಕೊಳವೆ ಬಾವಿಗಳ ಅಂತರ್ಜಲ ಮಟ್ಟದ ಸುಸ್ಥಿತಿಗೂ ಪ್ರಮುಖ ಪಾತ್ರ ವಹಿಸಿದೆ ಎಂದರೆ ತಪ್ಪಾಗಲಾರದು. ಅರಣ್ಯದೊಳಗಿನ ಪ್ರಶಾಂತ ವಾತಾವರಣದಲ್ಲಿ ಇರುವ ಈ ಹಿರಿದಾದ ಕೆರೆ, ಆಹಾರಕ್ಕಾಗಿ ಪರಿತಪಿಸಿ ಸಂಕಟಪಡುವ ಕಾಡಾನೆಗಳಿಗೆ ಕೊನೆಯ ಪಕ್ಷ ಕುಡಿಯುವ ನೀರನ್ನು ನೀಡುವ ಮೂಲಕ ಒಂದಷ್ಟು ತೃಪ್ತಿದಾ ಯಕಗೊಳಿಸಿದೆ. ಕಾಡಾನೆಗಳು ಅಲ್ಲದೆ ಇತರ ವನ್ಯ ಪ್ರಾಣಿಗಳು ಹಾಗೂ ಪಕ್ಷಿಗಳ ದಾಹವನ್ನು ನೀಗಿಸುತ್ತಿದೆ ಈ ಹಿರಿ ಕೆರೆ.