ಮಡಿಕೇರಿ, ಏ. ೧೬: ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ವತಿಯಿಂದ ಇತ್ತೀಚೆಗೆ ಟಾಟಾ ಕಾಫಿ ಲಿಮಿಟೆಡ್ ಸಂಸ್ಥೆಯ ನೂತನವಾಗಿ ನೇಮಕಗೊಂಡ ವ್ಯವಸ್ಥಾಪಕ ನಿರ್ದೇಶಕ ಪಿ.ಎ. ಮಂದಣ್ಣ ಅವರನ್ನು ಮಡಿಕೇರಿಯಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭ ಮಾತನಾಡಿದ ಸಿಪಿಎ ಅಧ್ಯಕ್ಷ ನಂದಾ ಬೆಳ್ಳಿಯಪ್ಪ, ೨೦ ವರ್ಷಗಳ ನಂತರ ಸ್ಥಳೀಯ ವ್ಯಕ್ತಿಯೊಬ್ಬರು ಈ ಪ್ರತಿಷ್ಠಿತ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿರುವುದು ಬೆಳೆಗಾರರಿಗೆ ಸಂತೋಷ ತಂದಿದೆ ಎಂದರು. ಪ್ರಸಕ್ತ ಪರಿಸ್ಥಿತಿಯಲ್ಲಿ ಕಾಫಿ ಬೆಳೆಗಾರರು ಎದುರಿಸುತ್ತಿರುವ ಕೆಲವು ಕ್ಲಿಷ್ಟಕರ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು. ಅವುಗಳಲ್ಲಿ ಮುಖ್ಯವಾದವುಗಳೆಂದರೆ ಕಾಳುಮೆಣಸು ಮತ್ತು ಅಡಿಕೆ ಮೇಲೆ ರಾಜ್ಯ ಸರಕಾರ ಮರು ಪ್ರಾರಂಭಿಸಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸೆಸ್ಸ್ (ಎಪಿಎಂಸಿ ಸೆಸ್ಸ್), ಸರ್ಫೇಸಿ (SಂಖಈAಇSI)ಯ ಅಡಿಯಲ್ಲಿ ಬೆಳೆಗಾರರ ಅಡಮಾನದ ಆಸ್ತಿಯನ್ನು ಮಾರಾಟ ಮಾಡಲು ಬ್ಯಾಂಕುಗಳಿಗೆ ಅಧಿಕಾರ ನೀಡಿರುವುದು ಮತ್ತು ಹವಮಾನ ವೈಪರೀತ್ಯದಿಂದಾಗಿ ಬರ ಪರಿಸ್ಥಿತಿ ಉಂಟಾಗಿ ಹಗಲಿನ ತಾಪಮಾನವು ಅತಿರೇಖಕ್ಕೆ ತಲುಪಿದ್ದು ನೀರಿನ ಅಭಾವ ಉಂಟಾಗಿದೆ ಮತ್ತು ಇದರಿಂದಾಗಿ ಕಾಫಿ ಗಿಡಗಳು ಮತ್ತು ಕಾಳುಮೆಣಸಿನ ಬಳ್ಳಿಗಳಿಗೆ ವ್ಯಾಪಕ ಹಾನಿಯುಂಟಾಗಿದ್ದು ಮುಂದಿನ ವರ್ಷದಲ್ಲಿ ಬೆಳೆ ಪ್ರಮಾಣ ಕುಂಠಿತಗೊಳ್ಳುವ ಆತಂಕವಿದೆ. ಈ ಎಲ್ಲಾ ಸಮಸ್ಯೆಗಳನ್ನು ಸ್ಥಳೀಯ ಶಾಸಕರ ಮುಖಾಂತರ ಪರಿಹಾರಕ್ಕಾಗಿ ಸರಕಾರದ ಗಮನಕ್ಕೆ ತರಲಾಗುವುದು ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಟಾಟಾ ಕಾಫಿ ಸಂಸ್ಥೆಯ ನೂತನ ವ್ಯವಸ್ಥಾಪಕ ನಿರ್ದೇಶಕ ಪಿ.ಎ.ಮಂದಣ್ಣ ಅವರು ತಮ್ಮ ಸಂಸ್ಥೆಯು ಜಿಲ್ಲೆಯಲ್ಲಿಯೇ ಒಂದು ಮಾದರಿ ಸಂಸ್ಥೆಯಾಗಿದ್ದು, ಸಿಪಿಎಯೊಂದಿಗೆ ನಿಕಟ ಸಂಪರ್ಕದಲ್ಲಿ ಕೆಲಸ ಮಾಡುತ್ತದೆ. ಸಂಘದ ಜನಪರ ಕಾರ್ಯಗಳಿಗೆ ತಮ್ಮ ಸಹಕಾರ ಮತ್ತು ಸಹಾಯದ ಭರವಸೆ ನೀಡಿದರು. ಹವಾಮಾನ ಬದಲಾವಣೆ ಮತ್ತು ಮಾನವ ಪ್ರಾಣಿ ಸಂಘರ್ಷವು ಬೆಳೆಗಾರರನ್ನು ಕಾಡುತ್ತಿರುವ ಗಂಭೀರ ಸಮಸ್ಯೆಗಳಾಗಿದ್ದು, ಸರ್ಕಾರವು ಆದ್ಯತೆಯ ಮೇಲೆ ಪರಿಹರಿಸಬೇಕಿದೆ ಎಂದು ಅವರು ಉಲ್ಲೇಖಿಸಿದರು.
ಈ ಸಂದರ್ಭದಲ್ಲಿ ಹಿರಿಯ ಬೆಳೆಗಾರರು ಹಾಗೂ ಕಾಫಿ ಮಂಡಳಿಯ ಮಾಜಿ ಉಪಾಧ್ಯಕ್ಷ ಬೋಸ್ ಮಂದಣ್ಣ, ಶ್ರೀಮಂಗಲ ಸಣ್ಣ ಬೆಳೆಗಾರರ ಸಂಘದ ಅಧ್ಯಕ್ಷರಾದ ಕೈಬುಲಿರ ಹರೀಶ್ ಅಪ್ಪಯ್ಯ, ಸಿಪಿಎಯ ಉಪಾಧ್ಯಕ್ಷ ಎ.ಎ. ಚಂಗಪ್ಪ, ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಶನ್ ಮಾಜಿ ಅಧ್ಯಕ್ಷ ಡಾ.ಎಂ.ಎA. ಚೆಂಗಪ್ಪ, ಸಿಪಿಎಯ ಮಾಜಿ ಅಧ್ಯಕ್ಷ ಪಿ.ಎಸ್. ಸುಬ್ರಮಣಿ, ಹಿರಿಯ ಬೆಳೆಗಾರರು ಮತ್ತು ಕೃಷಿ ಉತ್ಪನ್ನಗಳ ರಫ್ತುದಾರ ಟಿ.ಎಂ. ಪೂವಯ್ಯ, ಹಿರಿಯ ಬೆಳೆಗಾರರು ಮತ್ತು ಕೈಗಾರಿಕೋದ್ಯಮಿ ಪೀಟು ಕಾರಿಯಪ್ಪ, ಎಲ್ಕ್ ಹಿಲ್ ತೋಟದ ವ್ಯವಸ್ಥಾಪಕ ಪಿ.ಎಂ. ಪವನ್ ಮೊಣ್ಣಪ್ಪ, ಬೆಳೆಗಾರರು ಮತ್ತು ಆಗ್ರೋ ಕೆಮಿಸ್ಟ್ ಡಾ. ಕೊಳ್ಳಿಮಾಡ ಸೋಮಣ್ಣ ಇನ್ನಿತರರು ಹಾಜರಿದ್ದರು.