ಮಡಿಕೇರಿ, ಏ. ೧೫: ಇತ್ತೀಚೆಗೆ ನಡೆದ ಕೇರಳ-ಕರ್ನಾಟಕ ಗಡಿನಾಡು ಕನ್ನಡ ಸಾಂಸ್ಕೃತಿಕ ಉತ್ಸವದಲ್ಲಿ ಕೊಡಗಿನ ಮೂವರು ಕವನ ವಾಚಿಸಿದರು.

ಕನ್ನಡ ಭವನ ಮತ್ತು ಗ್ರಂಥಾಲಯ, ಕನ್ನಡ ಭವನ ಪ್ರಕಾಶನ ಸಂಸ್ಥೆ ಹಾಗೂ ಕೋಲಾರದ ಸ್ವರ್ಣಭೂಮಿ ಫೌಂಡೇಶನ್ ಜಂಟಿಯಾಗಿ ಆಯೋಜಿಸಿದ್ದ ಉತ್ಸವದಲ್ಲಿ ಶಕ್ತಿ ಸಲಹಾ ಸಂಪಾದಕ ಬಿ.ಜಿ. ಅನಂತಶಯನ, ಕೊಡವ ಸಿನಿಮಾ ನಟಿ, ನಿರ್ದೇಶಕಿ ಈರಮಂಡ ಹರಿಣಿ ವಿಜಯ್, ಕಲ್ಲುಗುಂಡಿಯ ಲೇಖಕಿ, ಸಾಹಿತಿ ಸಂಗೀತ ರವಿರಾಜ್, ಕವನ ಪ್ರಸ್ತುತ ಪಡಿಸಿದರು. ಬಳಿಕ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಮಾರಂಭದಲ್ಲಿ ಆಶೀರ್ವಚನ ನೀಡಿದ ಎಡನೀರು ಮಠಾಧೀಶ ಶ್ರೀ ಸಚ್ಛಿದಾನಂದ ಭಾರತಿ ಕನ್ನಡ ಭಾಷೆ, ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಪ್ರತಿ ಕನ್ನಡಿಗನೂ ಬದ್ಧನಾಗಿರಬೇಕು ಎಂದರು. ಕಲ್ಕೂರ ಪ್ರತಿಷ್ಠಾನದ ಪ್ರದೀಪ್‌ಕುಮಾರ್ ಕಲ್ಕೂರ ಕಾರ್ಯಕ್ರಮ ಉದ್ಘಾಟಿಸಿದರು. ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರವಿ ನಾಯ್ಕಾಪು ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಶರಣಪ್ಪ ಗಬ್ಬೂರು ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಕಾಸರಗೋಡು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಸುಬ್ಬಯ್ಯಕಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು. ಈ ಸಂದರ್ಭ ವಿವಿಧ ಕ್ಷೇತ್ರಗಳ ಸಾಧಕರುಗಳನ್ನು ಸನ್ಮಾನಿಸಲಾಯಿತು.

ಅಪೂರ್ವ ಕಾರಂತ್ ಪುತ್ತೂರು ಕಾರ್ಯಕ್ರಮ ನಿರೂಪಿಸಿದರು. ವಿಶಾಲಾಕ್ಷ ಪತ್ರಕಳ ವಂದಿಸಿದರು. ಈ ಸಂದರ್ಭ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ರಾಜ್ಯ ಮಟ್ಟದ ಕವಿಗೋಷ್ಠಿ ನಡೆಯಿತು. ರಾಜ್ಯದ ವಿವಿಧೆಡೆಗಳಿಂದ ಕವಿಗಳು ಭಾಗವಹಿಸಿದ್ದರು.

-ಈರಮಂಡ ವಿಜಯ್