ಇಸ್ರೇಲ್ ಮೇಲೆ ಇರಾನ್ ದಾಳಿ

ಜೆರುಸಲೇಂ, ಏ. ೧೪: ನಿರೀಕ್ಷೆಯಂತೆಯೇ ಇಸ್ರೇಲ್ ಮೇಲೆ ಇರಾನ್ ದಾಳಿ ನಡೆಸಿದೆ. ಬ್ಯಾಲಿಸ್ಟಿಕ್ ಕ್ಷಿಪಣಿಗಳು ಹಾಗೂ ಕ್ರೂಸ್ ಕ್ಷಿಪಣಿಗಳು ಸೇರಿದಂತೆ ೨೦೦ಕ್ಕೂ ಹೆಚ್ಚು ಬಗೆಯ ಡ್ರೋನ್ ಹಾಗೂ ಕ್ಷಿಪಣಿಗಳ ದಾಳಿಗಳನ್ನು ನಡೆಸಿದೆ. ಸಿರಿಯಾದ ರಾಜಧಾನಿ ಡಮಾಸ್ಕಸ್‌ನಲ್ಲಿರುವ ತನ್ನ ರಾಯಭಾರ ಕಚೇರಿ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಗೆ ಪ್ರತಿಯಾಗಿ ಇರಾನ್ ಈ ಕ್ರಮ ಕೈಗೊಂಡಿದೆ. ಇಸ್ರೇಲಿ ಮಿಲಿಟರಿಯ ವಕ್ತಾರ, ರಿಯರ್ ಅಡ್. ಡೇನಿಯಲ್ ಹಗರಿ ಮಾತನಾಡಿ, ಇರಾನ್ ಹಲವಾರು ಡ್ರೋನ್‌ಗಳು, ಕ್ರೂಸ್ ಕ್ಷಿಪಣಿಗಳು ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿದ್ದು, ಬಹುಪಾಲು ಕ್ಷಿಪಣಿ ಹಾಗೂ ಡ್ರೋಣ್‌ಗಳನ್ನು ಇಸ್ರೇಲ್‌ನ ಗಡಿಯ ಹೊರಗೆ ತಡೆಹಿಡಿಯಲಾಗಿದೆ ಎಂದು ಹೇಳಿದ್ದಾರೆ. ಡ್ರೋನ್‌ಗಳು ಹಾಗೂ ಕ್ಷಿಪಣಿಗಳನ್ನು ಗಾಳಿಯಲ್ಲಿ ಹೊಡೆದುರುಳಿಸುವಲ್ಲಿ ಅಮೆರಿಕ ಹಾಗೂ ಬ್ರಿಟಿಷ್ ವಾಯುಪಡೆಗಳು ಇಸ್ರೇಲ್‌ಗೆ ಸಹಾಯ ಮಾಡಿವೆ. ಇಸ್ರೇಲ್ ದಕ್ಷಿಣ ಭಾಗದಲ್ಲಿರುವ ಸೇನಾ ನೆಲೆಯಲ್ಲಿ ಸಣ್ಣಪುಟ್ಟ ಹಾನಿಗಳಾಗಿವೆ. ಈ ದಾಳಿಯಿಂದ ಯಾವುದೇ ಸಾವು, ನೋವು ಸಂಭವಿಸಿಲ್ಲ ಎಂದು ತಿಳಿಸಿದ್ದಾರೆ.

ಹೆಚ್.ಡಿ.ಕೆ. ವಿರುದ್ಧ ಸುಮೋಟೊ ಪ್ರಕರಣ ದಾಖಲು

ಬೆಂಗಳೂರು, ಏ. ೧೪: ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳಿಂದಾಗಿ ‘ಹಳ್ಳಿ ಹೆಣ್ಣು ಮಕ್ಕಳು ದಾರಿ ತಪ್ಪಿದ್ದಾರೆ’ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ವಿರುದ್ಧ ರಾಜ್ಯ ಮಹಿಳಾ ಆಯೋಗ ಸ್ವಯಂಪ್ರೇರಿತ ಕೇಸ್ (ಸುಮೋಟೊ) ದಾಖಲಿಸಿಕೊಂಡಿದೆ. ಈ ಹೇಳಿಕೆ ನೀಡುವ ಮೂಲಕ ಹೆಚ್‌ಡಿ ಕುಮಾರಸ್ವಾಮಿ ಅವರು ಮಹಿಳೆಯರ ಘನತೆಗೆ, ಚಾರಿತ್ರ‍್ಯಕ್ಕೆ ಧಕ್ಕೆ ತಂದಿದ್ದಾರೆ. ಈ ಹಿನೆÀ್ನಲೆಯಲ್ಲಿ ಕುಮಾರಸ್ವಾಮಿ ಹೇಳಿಕೆಯನ್ನು ಮಹಿಳಾ ಆಯೋಗ ಗಂಭೀರವಾಗಿ ಪರಿಗಣಿಸಿ ಸುಮೋಟೋ ಪ್ರಕರಣ ದಾಖಲಿಸಿಕೊಂಡಿದ್ದು, ನೋಟೀಸ್ ಜಾರಿ ಮಾಡಲಿದೆ. ತಮ್ಮ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತ ಕುಮಾರಸ್ವಾಮಿ, ನಾನು ಮಹಿಳೆಯರನ್ನು ಅಪಮಾನ ಮಾಡಿಲ್ಲ. ಗ್ಯಾರಂಟಿ ಯೋಜನೆ ಹೆಸರಿನಲ್ಲಿ ಮಹಿಳೆಯರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಹೇಳಿದ್ದೆ ಅಷ್ಟೆ. ನಾನು ಸಿಎಂ ಆಗಿದ್ದಾಗ ಮಹಿಳೆಯರಿಗಾಗಿ ಸಾಕಷ್ಟು ಯೋಜನೆ ತಂದಿದ್ದೇನೆ. ಮಹಿಳೆಯರ ಕೂಗಿಗೆ ಸ್ಪಂದಿಸಿ ರಾಜ್ಯದಲ್ಲಿ ಸಾರಾಯಿ ನಿಷೇಧಿಸಿದ್ದೇನೆ. ಮಹಿಳೆಯರ ಬಗ್ಗೆ ನಾನು ಕೇವಲವಾಗಿ ಮಾತನಾಡುವುದಿಲ್ಲ ಎಂದು ಸ್ಪಷ್ಟನೆ ನೀಡಿದರು. ತುಮಕೂರಿನ ತುರುವೇಕೆರೆಯಲ್ಲಿ ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣ ಪರ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳನ್ನು ಟೀಕಿಸುವ ಭರದಲ್ಲಿ ಹಳ್ಳಿಯ ಹೆಣ್ಣು ಮಕ್ಕಳ ಬಗ್ಗೆ ಲಘುವಾಗಿ ಮಾತನಾಡಿದ್ದರು.

ಬಿಜೆಪಿ ಪ್ರಣಾಳಿಕೆ ಬಿಡುಗಡೆಗೊಳಿಸಿದ ಮೋದಿ

ನವದೆಹಲಿ, ಏ. ೧೪: ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಕೇವಲ ಒಂದು ವಾರ ಬಾಕಿ ಇರುವಾಗ ಭಾರತೀಯ ಜನತಾ ಪಕ್ಷವು ಭಾನುವಾರ ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ 'ಒಂದು ರಾಷ್ಟç ಒಂದು ಸಮೀಕ್ಷೆ', 'ಸಿಎಎ' ಮತ್ತು ಉದ್ಯೋಗಾವಕಾಶಗಳ ಮೇಲೆ ವಿಶೇಷ ಗಮನ ಹರಿಸಿದೆ. ‘ಪಕ್ಷದ ಸಂಕಲ್ಪ ಪತ್ರ' ಅನಾವರಣಗೊಳಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಣಾಳಿಕೆಯಲ್ಲಿ ಪಟ್ಟಿ ಮಾಡಲಾದ ಪ್ರತಿಯೊಂದು ಭರವಸೆಯನ್ನು ಕಾರ್ಯಗತಗೊಳಿಸಲು ಬಿಜೆಪಿ ಕೆಲಸ ಮಾಡುತ್ತದೆ ಎಂದು ಪ್ರತಿಪಾದಿಸಿದರು. ಸರ್ಕಾರದ ಯೋಜನೆಗಳ ಫಲಾನುಭವಿಗಳಾದ ಸಮಾಜದ ಬಡವರು, ಯುವಜನತೆ, ರೈತರು ಮತ್ತು ಮಹಿಳೆಯರು (ಗ್ಯಾನ್) ಎಂಬ ನಾಲ್ಕು ವಿಶಾಲ ಗುಂಪುಗಳ ಪ್ರತಿನಿಧಿಗಳಿಗೆ ಪ್ರಧಾನ ಮಂತ್ರಿಗಳು ಪ್ರಣಾಳಿಕೆಯ ಪ್ರತಿಗಳನ್ನು ಇದೇ ಸಂದರ್ಭದಲ್ಲಿ ಹಸ್ತಾಂತರಿಸಿದರು. ಪಕ್ಷದ ಪ್ರಣಾಳಿಕೆಯು ಎನ್‌ಡಿಎ ಸರ್ಕಾರದ ಸಾಧನೆಗಳ ಸಮಗ್ರ ಅವಲೋಕನವನ್ನು ಪಟ್ಟಿಮಾಡಿದೆ. ಇದು ೨೦೪೭ ರ ವೇಳೆಗೆ ‘ವಿಕಸಿತ ಭಾರತ'ವನ್ನು ನಿರ್ಮಿಸುವ ದೃಷ್ಟಿಕೋನ ಹೊಂದಿದೆ.

ಭಾರತೀಯ ನಾವಿಕರಿದ್ದ ಹಡಗು ವಶಕ್ಕೆ

ಟೆಹ್ರಾನ್, ಏ. ೧೪: ಇರಾನ್ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನತೆಯ ನಡುವೆ ೧೭ ಭಾರತೀಯ ನಾವಿಕರಿದ್ದ ಇಸ್ರೇಲಿನ ಒಂದು ಕಂಟೈನರ್ ಹಡಗನ್ನು ಇರಾನ್ ಮಿಲಿಟರಿ ವಶಕ್ಕೆ ಪಡೆದುಕೊಂಡಿರುವುದಾಗಿ ವರದಿಯಾಗಿದೆ. ಭಾರತೀಯ ನಾಗರಿಕರು ಇರಾನ್ ಮತ್ತು ಇಸ್ರೇಲ್‌ಗೆ ಪ್ರಯಾಣಿಸದಂತೆ ಭಾರತೀಯ ವಿದೇಶಾಂಗ ಇಲಾಖೆ ಸೂಚಿಸಿದ ಒಂದು ದಿನದ ನಂತರ ಈ ಘಟನೆ ನಡೆದಿದೆ. ೧೭ ಭಾರತೀಯ ನಾವಿಕರಿದ್ದ ಇರಾನ್‌ನ ‘ಎಂಎಸ್‌ಸಿ ಏರೀಸ್' (ಮೆಡಿಟರೇನಿಯನ್ ಶಿಪ್ಪಿಂಗ್ ಕಂಪನಿ) ಸರಕು ಸಾಗಣೆ ಹಡಗನ್ನು ಇರಾನ್ ನಿಯಂತ್ರಣಕ್ಕೆ ತೆಗೆದುಕೊಂಡಿದೆ ಎಂದು ತಿಳಿದುಬಂದಿದೆ. ಟೆಹ್ರಾನ್ ಮತ್ತು ದೆಹಲಿಯಲ್ಲಿರುವ ರಾಯಭಾರಿಗಳ ಮೂಲಕ ಭಾರತೀಯ ನಾಗರಿಕರ ಶೀಘ್ರ ಬಿಡುಗಡೆ ಖಚಿತಪಡಿಸಿಕೊಳ್ಳಲು ಭಾರತ ಇರಾನ್ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಕೊಳವೆ ಬಾವಿಗೆ ಬಿದ್ದಿದ್ದ ಬಾಲಕ ಸಾವು

ಮಧ್ಯಪ್ರದೇಶ, ಏ. ೧೪: ಜಿಲ್ಲೆಯ ಮಣಿಕಾ ಗ್ರಾಮದಲ್ಲಿ ಎರಡು ದಿನಗಳ ಹಿಂದೆ ತೆರೆದ ಕೊಳವೆಬಾವಿಯಲ್ಲಿ ಬಿದ್ದಿದ್ದ ೬ ವರ್ಷದ ಬಾಲಕ ಮೃತಪಟ್ಟಿದ್ದಾನೆ. ಬಾಲಕ ಶುಕ್ರವಾರ ಆಟವಾಡುತ್ತಿದ್ದ ವೇಳೆ, ಮಧ್ಯಾಹ್ನ ೩ರ ಸುಮಾರಿಗೆ ಕೊಳವೆ ಬಾವಿಯೊಳಗೆ ಬಿದ್ದಿದ್ದ. ೪೦ ಅಡಿ ಆಳದಲ್ಲಿ ಸಿಕ್ಕಿಹಾಕಿಕೊಂಡಿದ್ದ ಬಾಲಕನ ರಕ್ಷಣೆಗೆ ವಿವಿಧ ಸಂಸ್ಥೆಗಳು ನಡೆಸಿದ ಪ್ರಯತ್ನಗಳು ಕೈಗೂಡಲಿಲ್ಲ. ಸತತ ೪೦ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ ಬಳಿಕ, ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ ಸಿಬ್ಬಂದಿ ಬಾಲಕನನ್ನು ತಲುಪಿದ್ದರು. ಆ ಹೊತ್ತಿಗೆ, ಬಾಲಕ ಯಾವುದೇ ಪ್ರತಿಕ್ರಿಯೆ ತೋರಲಿಲ್ಲ. ಕೊಳವೆಬಾವಿ ಬಹಳ ಕಿರಿದಾಗಿದ್ದ ಕಾರಣ ಬಾಲಕನನ್ನು ರಕ್ಷಿಸಲು ಸಾಧ್ಯವಾಗಲಿಲ್ಲ ಎಂದು ಜಿಲ್ಲಾಧಿಕಾರಿ ಪ್ರತಿಭಾ ಪಾಲ್ ಹೇಳಿದ್ದಾರೆ. ಸ್ಥಳೀಯ ಆಡಳಿತದ ಜೊತೆಗೆ ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್ ಸಿಬ್ಬಂದಿ ರಕ್ಷಣಾ ಕಾರ್ಯಕ್ಕೆ ಕೈಜೋಡಿಸಿದ್ದರು. ೭೦ ಅಡಿ ಆಳದವರೆಗೆ ಆಮ್ಲಜನಕ ಪೂರೈಕೆಗೆ ವ್ಯವಸ್ಥೆ ಮಾಡಲಾಗಿತ್ತು. ಕೊಳವೆಬಾವಿಗೆ ಸಮಾನಾಂತರವಾಗಿ ಅಗೆಯುವ ಮೂಲಕ ಬಾಲಕನ ರಕ್ಷಣೆಗೆ ಪ್ರಯತ್ನಿಸಲಾಗಿತ್ತು.

ದಾಳಿ ಸಮರ್ಥಿಸಿಕೊಂಡ ಹಮಾಸ್

ಗಾಜಾ, ಏ. ೧೪: ಇಸ್ರೇಲ್ ಮೇಲೆ ಇರಾನ್ ಆರಂಭಿಸಿರುವ ದಾಳಿಯನ್ನು ‘ಸ್ವಾಭಾವಿಕ ಹಕ್ಕು' ಎಂದು ಪ್ಯಾಲೆಸ್ತೀನಿಯನ್ ಇಸ್ಲಾಮಿಸ್ಟ್ ಗುಂಪು ಹಮಾಸ್ ಸಮರ್ಥಿಸಿಕೊಂಡಿದೆ. ಗಾಜಾದಲ್ಲಿ ಆರು ತಿಂಗಳಿಗೂ ಹೆಚ್ಚು ಕಾಲದಿಂದ ಹಮಾಸ್ ಗುಂಪು ಇಸ್ರೇಲ್‌ನೊಂದಿಗೆ ಯುದ್ಧದಲ್ಲಿ ತೊಡಗಿದೆ. ಸಿರಿಯಾದ ರಾಜಧಾನಿ ಡಮಾಸ್ಕಸ್‌ನಲ್ಲಿನ ಇರಾನ್ ರಾಯಭಾರ ಕಚೇರಿ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಇರಾನ್‌ನ ರೆವಲ್ಯೂಷನರಿ ಗಾರ್ಡ್ನ ಇಬ್ಬರು ಬ್ರಿಗೇಡಿಯರ್ ಜನರಲ್ ಸೇರಿ ಹಲವು ಸೇನಾಧಿಕಾರಿಗಳು ಹತರಾಗಿದ್ದರು. ಇದಕ್ಕೆ ಪ್ರತಿಯಾಗಿ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ನಡೆಸಿದ ಸೇನಾ ಕಾರ್ಯಾಚರಣೆಯನ್ನು ನಾವು ಸ್ವಾಭಾವಿಕ ಹಕ್ಕು ಎಂದೇ ಪರಿಗಣಿಸುತ್ತೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಏಪ್ರಿಲ್ ೧ರಂದು ಡಮಾಸ್ಕಸ್‌ನಲ್ಲಿನ ಇರಾನ್ ರಾಯಭಾರ ಕಚೇರಿ ಮೇಲೆ ಶಂಕಿತ ಇಸ್ರೇಲ್ ವೈಮಾನಿಕ ದಾಳಿಯ ಬಳಿಕ ಇರಾನ್ ಪ್ರತೀಕಾರದ ಮಾತುಗಳನ್ನಾಡಿತ್ತು. ಇದರ ಬೆನ್ನಲ್ಲೇ ಇರಾನ್ ಕಡೆಯಿಂದ ಶನಿವಾರ ತಡರಾತ್ರಿ ದಾಳಿಗಳು ನಡೆದಿವೆ.