ಕುಶಾಲನಗರ, ಏ. ೧೪: ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಮತ್ತೆ ಮನೆಗೆ ನುಗ್ಗಿ ಕಳ್ಳತನ ಮಾಡಿರುವ ಪ್ರಕರಣ ವರದಿಯಾಗಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ಸ್ವತ್ತುಗಳನ್ನು ಕಳ್ಳರು ದೋಚಿ ಪರಾರಿಯಾಗಿದ್ದಾರೆ. ಇತ್ತೀಚಿಗಷ್ಟೆ ಒಂದೇ ದಿನ ಮೂರು ಮನೆಗಳಲ್ಲಿ ಕಳ್ಳತನ ನಡೆದಿತ್ತು. ಆ ಘಟನೆ ಮಾಸುವ ಮುನ್ನವೇ ಸರಣಿ ಕಳ್ಳತನ ನಡೆಸುವ ಮೂಲಕ ಚೋರರು ಕೈಚಳಕ ತೋರಿದ್ದಾರೆ.
ಪಟ್ಟಣದ ಗೊಂದಿಬಸವನಹಳ್ಳಿ ರಸ್ತೆ ವ್ಯಾಪ್ತಿಯ ಬಡಾವಣೆಗಳಲ್ಲಿ ಶನಿವಾರ ಶಿಕ್ಷಕ ಧನರಾಜ್ ಎಂಬವರ ಮನೆಯಿಂದ ಯಾರೂ ಇಲ್ಲದ ಸಂದರ್ಭ ಬಾಗಿಲು ಮುರಿದು ಚಿನ್ನಾಭರಣ, ನಗದು, ಬೆಳ್ಳಿ ಸೇರಿದಂತೆ ಸುಮಾರು ೭ ಲಕ್ಷದ ೫೦ ಸಾವಿರ ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಆರ್.ಆರ್. ಬಡಾವಣೆ ನಿವಾಸಿ ಚಂದ್ರಶೇಖರ್ ಎಂಬವರ ಮನೆಯಿಂದ ಸುಮಾರು ೪೦ ಸಾವಿರ ರೂಪಾಯಿ ಮೌಲ್ಯದ ವಸ್ತುಗಳನ್ನು ಕಳವು ಮಾಡಲಾಗಿದೆ. ಸ್ಥಳಕ್ಕೆ ಕುಶಾಲನಗರ ಪಟ್ಟಣ ಠಾಣೆಯ ಪೊಲೀಸ್ ಅಧಿಕಾರಿ, ಸಿಬ್ಬಂದಿ ಭೇಟಿ ನೀಡಿದ್ದು, ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಆಗಮಿಸಿ ಚೋರರ ಪತ್ತೆಗಾಗಿ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.