ಮಡಿಕೇರಿ, ಏ. ೧೪: ಮೈಸೂರು, ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದ ಕಾವು ದಿನೇದಿನೇ ಏರುತ್ತಿದೆ. ಬಿಜೆಪಿ ಅಭ್ಯರ್ಥಿ ಯದುವೀರ್ ಶ್ರೀಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷö್ಮಣ್ ಗೌಡ ಅವರು ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ರಾಜ್ಯದ ಇತರ ಎಲ್ಲಾ ಲೋಕಸಭಾ ಕ್ಷೇತ್ರಗಳಿಗೆ ಹೋಲಿಸಿದರೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಅಬ್ಬರದ ಮಾತು, ವೈಯಕ್ತಿಕ ಆರೋಪಗಳು, ಅಭ್ಯರ್ಥಿಗಳ ನಡುವೆ ವಾಕ್ಸಮರ ಗಳು ಕಾಣುತ್ತಿಲ್ಲ. ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಅವರು ರಾಜಕೀಯಕ್ಕೆ ಹೊಸ ಮುಖ. ಆದರೆ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷö್ಮಣ್ ಗೌಡ ರಾಜಕೀಯದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡವರು.

ಕಾAಗ್ರೆಸ್ ವಕ್ತಾರರಾಗಿ ಸುದ್ದಿಗೋಷ್ಠಿಯ ಮುಖಾಂತರ ಸದಾ ಸುದ್ದಿಯಲ್ಲಿರುವ ನಾಯಕ. ಅದಲ್ಲದೇ ಎಂ. ಲಕ್ಷö್ಮಣ್ ಗೌಡ ಅವರನ್ನು "ಮಾತಿನ ಮಲ್ಲ ಎಂದರೆ ತಪ್ಪಾಗಲಾರದು. ಇದೀಗ ಮಾತಿನ ಮಲ್ಲ ಎಂ.ಲಕ್ಷö್ಮಣ್ ಗೌಡ ಚುನಾವಣಾ ಪ್ರಚಾರದಲ್ಲಿ ತನ್ನ ಅಬ್ಬರದ ಮಾತಿಗೆ ಕಡಿವಾಣ ಹಾಕಿದ್ದಾರೆ. ಕಾಂಗ್ರೆಸ್ ಮುಖಂಡರ ಬಾಯಿಯಿಂದ ಯದುವೀರ್ ಒಡೆಯರ್ ವಿರುದ್ಧ ಒಂದು ಮಾತು ಬಿದ್ದರೂ ಕೂಡ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಹೊಡೆತ ಬೀಳುವುದು ಗ್ಯಾರಂಟಿ.

ಕಳೆದ ಲೋಕಸಭಾ ಚುನಾವಣೆಯ ಮಂಡ್ಯದಲ್ಲಿ ಪಕ್ಷೇತರರಾಗಿ ಕಣಕ್ಕಿಳಿದಿದ್ದ ಸುಮಲತಾ ಅಂಬರೀಶ್ ವಿರುದ್ಧ ಎಚ್.ಡಿ ರೇವಣ್ಣ ನೀಡಿದ ಒಂದು ಹೇಳಿಕೆ ಇಡೀ ಚುನಾವಣೆಯ ಮೇಲೆ ದೊಡ್ಡ ಹೊಡೆತ ಬಿದ್ದು, ಸುಮಲತಾ ಅವರಿಗೆ ಭಾವನಾತ್ಮಕವಾಗಿ ಪರಿವರ್ತನೆಗೊಂಡು ದೊಡ್ಡ ಸಂಖ್ಯೆಯಲ್ಲಿ ಮತದಾರರು ಕೈ ಹಿಡಿದಿದ್ದರು.

ಯದುವೀರ್ ಒಡೆಯರ್ ಅವರು ಬಿಜೆಪಿ ಅಭ್ಯರ್ಥಿಯಾಗಿ ಘೋಷಣೆಯಾಗುತ್ತಿದ್ದಂತೆ ಸಿ.ಎಂ ಸಿದ್ದರಾಮಯ್ಯ ಅವರು ಕಾಂಗ್ರೆಸ್ ನಾಯಕರಿಗೆ ಯದುವೀರ್ ಒಡೆಯರ್ ಅವರ ಬಗ್ಗೆ ಹೇಳಿಕೆಗಳು, ವಿರುದ್ಧವಾಗಿ ಮಾತನಾಡಬಾರದೆಂದು ಕಟಕ್ ಸೂಚನೆ ನೀಡಿದ್ದರು. ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷö್ಮಣ್ ಗೌಡ ಅವರಿಗೂ ಕೂಡ ಸಿ.ಎಂ ಸಿದ್ದರಾಮಯ್ಯ, ಯದುವೀರ್ ವಿರುದ್ಧ ಮಾತನಾಡದಂತೆ ಎಚ್ಚರಿಕೆಯಿಂದ ಪ್ರಚಾರ ನಡೆಸಬೇಕೆಂದು ಸೂಚನೆ ಕೊಟ್ಟಿದ್ದಾರೆ.

ಮೈಸೂರು ರಾಜವಂಶಸ್ಥರ ಬಗ್ಗೆ ಮೈಸೂರು ಭಾಗದಲ್ಲಿ ಜನರಿಗೆ ಅಪಾರ ಗೌರವವಿದೆ. ಒಂದು ವೇಳೆ ಕಾಂಗ್ರೆಸ್ ಮುಖಂಡರು ಮತ್ತು ಕಾಂಗ್ರೆಸ್ ಅಭ್ಯರ್ಥಿ, ಯದುವೀರ್ ಒಡೆಯರ್ ಬಗ್ಗೆ ವಿರೋಧಿ ಹೇಳಿಕೆ ನೀಡಿದರೆ ಕಾಂಗ್ರೆಸ್ ಪಕ್ಷಕ್ಕೆ ನೂರಕ್ಕೆ ನೂರು ದೊಡ್ಡ ಹೊಡೆತ ಬೀಳುತ್ತವೆ. ಕಾಂಗ್ರೆಸ್ ನಾಯಕರಿಂದ ಯದುವೀರ್ ಒಡೆಯರ್ ಅವರ ಬಗ್ಗೆ ವಿರೋಧ ಹೇಳಿಕೆಗಾಗಿ ರಾಜಕೀಯವಾಗಿ ಒಂದೆಡೆ ಬಿಜೆಪಿ ಕಾಯುತ್ತಿದೆ. ಯದುವೀರ್ ಒಡೆಯರ್ ವಿರುದ್ಧ ಕಾಂಗ್ರೆಸ್ ಪಕ್ಷದವರು ಹೇಳಿಕೆಕೊಟ್ಟರೆ ಭಾವನಾತ್ಮಕವಾಗಿ ಬಿಜೆಪಿಗೆ ಸುಲಭವಾಗಿ ಮತಗಳನ್ನು ತಂದುಕೊಡುವುದು ಗ್ಯಾರಂಟಿ. ಈ ಎಲ್ಲಾ ವಿಷಯಗಳ ಬಗ್ಗೆ ಅರಿವಿರುವ ಸಿಎಂ ಸಿದ್ದರಾಮಯ್ಯ ಅವರು ಯದುವೀರ್ ವಿರುದ್ಧ ಹೇಳಿಕೆ ನೀಡದಂತೆ ಎಚ್ಚರಿಕೆಯಿಂದಿರಲು ಸೂಚನೆ ಕೊಟ್ಟಿದ್ದಾರೆ. ಕಾಂಗ್ರೆಸ್ ಪ್ರಚಾರದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ, ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಪ್ರಚಾರ ನಡೆಸುತ್ತಿದೆ.

ದೇಶದಲ್ಲಿ ಕಾಂಗ್ರೆಸ್ ಘೋಷಣೆ ಮಾಡಿರುವ ಗ್ಯಾರಂಟಿಗಳನ್ನು ಪ್ರಚಾರಪಡಿಸಿ ಕಾಂಗ್ರೆಸ್ ಮತಬೇಟೆಗೆ ಇಳಿದಿದ್ದಾರೆ. ಯದುವೀರ್ ಒಡೆಯರ್ ಗೆದ್ದರೆ ಜನಸಾಮಾನ್ಯರ ಕೈಗೆ ಸಿಗುವುದಿಲ್ಲ ಎಂದು ಆರೋಗ್ಯಕರ ಪ್ರಚಾರದಲ್ಲಿ ಕಾಂಗ್ರೆಸ್ ತೊಡಗಿಕೊಂಡಿವೆ.

"ಹಾವು ಸಾಯಬಾರದು ಕೋಲು ಮುರಿಯಬಾರದು" ಎಂಬ ಗಾದೆ ಮಾತಿನಂತೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಚಾರದಲ್ಲಿ ಬಿಸಿಯಾಗಿದ್ದಾರೆ.

ಯದುವೀರ್ ಒಡೆಯರ್ ಬಿಜೆಪಿ ಅಭ್ಯರ್ಥಿಯಾಗಿರುವುದರಿಂದ ಕಾಂಗ್ರೆಸ್ ಇಕ್ಕಟ್ಟಿಗೆ ಸಿಲುಕಿದೆ ಎಂದರೆ ತಪ್ಪಾಗಲಾರದು.

ಯದುವೀರ್ ಮಾತಿನಲ್ಲಿ ಅಬ್ಬರವಿಲ್ಲ, ಮೋದಿ ಮತ್ತೊಮ್ಮೆ ಪ್ರಧಾನಿ ಮಾಡಲು ಮತಯಾಚನೆ!

ರಾಜಕೀಯಕ್ಕೆ ಹೊಸಮುಖವಾಗಿರುವ ಯದುವೀರ್ ಒಡೆಯರ್ ಅವರು ಚುನಾವಣಾ ಪ್ರಚಾರದಲ್ಲಿ ಅಬ್ಬರದ ಮಾತುಗಳನ್ನಾಡದೆ ‘ಕೂಲ್’ ಆಗಿ ಕ್ಷೇತ್ರದ ಅಭಿವೃದ್ಧಿ, ವಿಕಸಿತ ಭಾರತ, ಮತ್ತೊಮ್ಮೆ ಮೋದಿ ಪ್ರಧಾನಿ ಮಾಡಲು ಮತನೀಡುವಂತೆ ಚುನಾವಣಾ ಪ್ರಚಾರದಲ್ಲಿ ಭಾಗವಹಿಸುತ್ತಿದ್ದಾರೆ. ಬೇರೆ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳಿಗೆ ಹೋಲಿಸಿದರೆ ಚುನಾವಣಾ ಪ್ರಚಾರದಲ್ಲಿ ಯದುವೀರ್ ಎಲ್ಲರಿಗಿಂತಲೂ ಭಿನ್ನವಾಗಿ ಕಾಣುತ್ತಾರೆ. ಏಕೆಂದರೆ ಬಿಜೆಪಿ ಅಭ್ಯರ್ಥಿಗಳು ಅತೀ ಹೆಚ್ಚಾಗಿ ಮೋದಿ, ಹಿಂದೂ-ಮುಸ್ಲಿಮ್, ದೇಶ, ಪಾಕಿಸ್ತಾನ, ಭಾವನಾತ್ಮಕ ವಿಷಯಗಳು ಮತ್ತು ಕಾಂಗ್ರೆಸ್ ವಿರುದ್ಧ ಆರೋಪಗಳನ್ನು ಮಾಡಿ ಮತಬುಟ್ಟಿಗೆ ಕೈ ಹಾಕುವುದು ಮಾಮೂಲಿ ಚುನಾವಣಾ ಪ್ರಚಾರ.

ಆದರೆ ಯದುವೀರ್ ಅವರಲ್ಲಿ ಈ ಅಬ್ಬರದ ಪ್ರಚಾರದ ಮಾತುಗಳಿಲ್ಲ. ಧರ್ಮಾಧಾರಿತವಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡರೆ ರಾಜಮನೆತನಕ್ಕಿರುವ ಗೌರವ ಕೂಡ ಜನರಿಂದ ದೂರವಾಗುತ್ತದೆ. ಜಾತ್ಯತೀತವಾಗಿ, ಎಲ್ಲಾ ಧರ್ಮದವರು ಮೈಸೂರು ರಾಜವಂಶಸ್ಥರ ಮೇಲೆ ಅಪಾರ ಗೌರವ ವಿಶ್ವಾಸವನ್ನು ಇಟ್ಟಿದ್ದಾರೆ.

ಮೈಸೂರು ರಾಜವಂಶಸ್ಥರು ಮೈಸೂರು ಸಂಸ್ಥಾನಕ್ಕೆ ನೀಡಿರುವ ಕೊಡುಗೆಗಳು ಇಂದಿಗೂ ಹಚ್ಚ ಹಸಿರಾಗಿಯೇ ಉಳಿದಿವೆ. ಅಭಿವೃದ್ಧಿಯನ್ನು ಮುಂದಿಟ್ಟುಕೊAಡು, ವೈಯಕ್ತಿಕ ಟೀಕೆಗಳು, ಆರೋಪಗಳು, ಪ್ರತ್ಯಾರೋಪಗಳಿಲ್ಲದ ಚುನಾವಣಾ ಪ್ರಚಾರ ಒಳ್ಳೆಯ ಬೆಳವಣಿಗೆ. ಒಂದು ವೇಳೆ ಬಿಜೆಪಿಯಿಂದ ಹಾಲಿ ಸಂಸದ ಕಣಕ್ಕಿಳಿದಿದ್ದರೆ ಕ್ಷೇತ್ರದಲ್ಲಿ ಎಂ.ಲಕ್ಷö್ಮಣ್ ಮತ್ತು ಪ್ರತಾಪ್ ಸಿಂಹ ನಡುವೆ ಮಾತಿನ ಯುದ್ಧವೇ ನಡೆಯುತ್ತಿತ್ತು.

-ಕೆ.ಎಂ. ಇಸ್ಮಾಯಿಲ್ ಕಂಡಕರೆ