ಮಡಿಕೇರಿ, ಏ. ೧೨: ಗೌಡ ಸಮುದಾಯದವರು ಸಂಘಟನೆಯೊAದಿಗೆ ಸಂಸ್ಕೃತಿ, ಆಚಾರ-ವಿಚಾರಗಳನ್ನು ಬೆಳೆಸುವದರೊಂದಿಗೆ ಮುಂದಿನ ಪೀಳಿಗೆಗೆ ಪರಿಚಯಿಸಿಕೊಡಬೇಕೆಂದು ಶಕ್ತಿ ದಿನಪತ್ರಿಕೆ ಉಪ ಸಂಪಾದಕ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಕುಡೆಕಲ್ ಸಂತೋಷ್ ಕರೆ ನೀಡಿದರು.

ಯುಗಾದಿ ಹಬ್ಬದ ಪ್ರಯುಕ್ತ ಮರಗೋಡುವಿನ ಕಾನಡ್ಕ ಕುಟುಂಬಸ್ಥರು ನಡೆಸಿಕೊಂಡು ಬರುತ್ತಿರುವ ಹತ್ತನೇ ವರ್ಷದ ಯುಗಾದಿ ಕ್ರೀಡಾ ಸಂಭ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ಕ್ರೀಡೆ ಎಲ್ಲರನ್ನೂ ಒಗ್ಗೂಡಿಸುವದಲ್ಲದೆ, ಸಂಘಟನೆಗೂ ಸಹಕಾರಿಯಾಗಲಿದೆ. ಎಲ್ಲ ಕಡೆಗಳಲ್ಲೂ ಈ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವದರ ಮೂಲಕ ಸಂಘಟನೆಯೊAದಿಗೆ ಸಂಸ್ಕೃತಿಯನ್ನೂ ಬೆಳೆಸಬೇಕು. ಅರೆಭಾಷಿಕ ಸಮುದಾಯದ ಸಂಸ್ಕೃತಿ, ಪದ್ಧತಿಯನ್ನು ಪೋಷಕರು ತಿಳಿದುಕೊಂಡು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ಆಗಬೇಕು. ಜೀವನದಲ್ಲಿ ನೋವು-ನಲಿವನ್ನು ಸಮಾನಾಗಿ ಸ್ವೀಕರಿಸಬೇಕೆಂದು ಹೇಳಿದರು. ಕುಟುಂಬಸ್ಥರೆಲ್ಲ ಸೇರಿಕೊಂಡು ಈ ರೀತಿಯಾಗಿ ಸಾರ್ವಜನಿಕವಾಗಿ ಕಾರ್ಯಕ್ರಮ ಆಯೋಜನೆ ಮಾಡಿಕೊಂಡು ಬರುತ್ತಿರುವದು ಶ್ಲಾಘನೀಯವೆಂದು ಹೇಳಿದರು.

ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಊರಿನ ಹಿರಿಯರಾದ, ನಿವೃತ್ತ ಶಿಕ್ಷಕ ಕೆಂಜನ ಕೆಂಚಪ್ಪ; ಇಂತಹ ಕಾರ್ಯಕ್ರಮಗಳನ್ನು ನಡೆಸುವದರಿಂದ ಹಬ್ಬಕ್ಕೆ ಇನ್ನಷ್ಟು ಮೆರುಗು ನೀಡಿದಂತಾಗುತ್ತದೆ. ಕುಟುಂಬದಲ್ಲಿ ಒಗ್ಗಟ್ಟು, ಸಹಬಾಳ್ವೆ ನಡೆಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು. ಹಿರಿಯರಾದ ಕಾನಡ್ಕ ನಂಜಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾನಡ್ಕ ಉಲ್ಲಾಸ ಉಪಸ್ಥಿತರಿದ್ದರು. ಅತ್ಯಾಡಿ ಪ್ರೀತು ಪ್ರಾರ್ಥಿಸಿದರೆ, ಕಾನಡ್ಕ ಹನೀಶ್ ನಿರೂಪಿಸಿ, ಕಾನಡ್ಕ ಚರಣ್ ವಂದಿಸಿದರು.

ಆಟೋಟ ಸ್ಪರ್ಧೆ

ಬಳಿಕ ಪುಟಾಣಿ ಮಕ್ಕಳಿಂದ ಹಿಡಿದು ಹಿರಿಯರವರೆಗೆ ವಿವಿಧ ವಿಭಾಗಗಳಲ್ಲಿ ಆಟೋಟ ಸ್ಪರ್ಧೆಗಳನ್ನು ನಡೆಸಲಾಯಿತು. ದಂಪತಿಯರಿಗೆ ವಿಶೇಷವಾಗಿ ಕೃಷ್ಣ ರುಕ್ಮಿಣಿ, ರಾಮ ಸೀತೆ ಓಟ, ಬಾಲ್ ಬ್ಯಾಲೆನ್ಸ್, ಯುವಕರಿಗೆ ಹನುಮಂತನ ಓಟ, ಹಗ್ಗ ಜಗ್ಗಾಟ ಸೇರಿದಂತೆ ವಿವಿಧ ಕ್ರಿಡಾ ಸ್ಪರ್ಧೆಗಳು ನಡೆದವು.

ಸಮಾರೋಪ

ಸಂಜೆ ನಡೆದ ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮೇ.ಡಾ. ಕುಶ್ವಂತ್ ಕೋಳಿಬೈಲು ಮಾತನಾಡಿ; ನಮ್ಮ ಸಂಸ್ಕೃತಿ, ಆಚಾರ ವಿಚಾರಗಳನ್ನು ಮಕ್ಕಳಿಗೆ ಹಿರಿಯರು ಹೇಳಿಕೊಡಬೇಕು. ಇಂತಹ ಕಾರ್ಯಕ್ರಮಗಳನ್ನು ಏರ್ಪಡಿಸುವದರಿಂದ ದೂರದ ಊರುಗಳಲ್ಲಿ ನೆಲೆಸಿರುವವರೆಲ್ಲರೂ ಒಟ್ಟು ಸೇರಿ ಆಟೋಟಗಳಲ್ಲಿ ಭಾಗವಹಿಸಿ, ಸಂಭ್ರಮಿಸಲು ಅವಕಾಶ ದೊರೆತಂತಾಗುತ್ತದೆ ಎಂದು ಹೇಳಿದರು.

ಅತಿಥಿಗಳಾಗಿ ಆಗಮಿಸಿದ್ದ ಮರಗೋಡು ಗ್ರಾ.ಪಂ.ಸದಸ್ಯ ಪರಿಚನ ಸತೀಶ್, ಬೆಳೆಗಾರ ಮುಕ್ಕಾಟೀರ ಲೋಹಿತ್, ಕಾನಡ್ಕ ಉತ್ತಪ್ಪ, ಹಿರಿಯರಾದ ಕಾನಡ್ಕ ಚಂಗಪ್ಪ ಅವರುಗಳು ವಿಜೇತರಿಗೆ ಬಹುಮಾನ ವಿತರಿಸಿದರು. ಕಾನಡ್ಕ ಪ್ರಸಾದ್ ಸ್ವಾಗತಿಸಿದರೆ, ಹನೀಶ್ ನಿರೂಪಿಸಿ ವಂದಿಸಿದರು.