ಕುಶಾಲನಗರ, ಏ.೧೨: ಕುಶಾಲನಗರ ತಾಲೂಕಿನ ಗುಡ್ಡೆಹೊಸೂರು ಗ್ರಾಮದಲ್ಲಿ ಜಾನುವಾರುಗಳಲ್ಲಿ ಮಾರಣಾಂತಿಕ ಚರ್ಮ ಗಂಟು ರೋಗ ಕಾಣಿಸಿಕೊಳ್ಳುತ್ತಿದೆ ಎಂದು ರೈತರು ದೂರಿದ್ದಾರೆ. ಬೊಳ್ಳೂರು ಗ್ರಾಮದ ಪುಲಿಯಂಡ ರಾಮ್ ಎಂಬವರಿಗೆ ಸೇರಿದ ೫ ಹಸುಗಳು ಮೃತಪಟ್ಟಿದ್ದು, ಚರ್ಮ ಗಂಟು ರೋಗದ ಶಂಕೆ ವ್ಯಕ್ತವಾಗಿದೆ.

ಈ ಕಾಯಿಲೆಗೆ ಚಿಕಿತ್ಸೆ ಕೊಡಿಸಲು ರೈತರು ಪರದಾಡುವಂತಾಗಿದೆ. ಪಶು ಸಂಗೋಪನಾ ಇಲಾಖೆ ರೈತರ ಪಾಲಿಗೆ ಇದ್ದು ಇಲ್ಲದಂತೆ ಕಂಡು ಬಂದಿದೆ ಎಂದು ರೈತರು ಆರೋಪ ವ್ಯಕ್ತಪಡಿಸಿದ್ದಾರೆ.

ರೋಗಗ್ರಸ್ತ ಜಾನುವಾರುಗಳಿಂದ ನೊಣ, ಸೊಳ್ಳೆ, ಉಣ್ಣಿಗಳ ಮೂಲಕ ಆರೋಗ್ಯಕರ ಜಾನುವಾರುಗಳಿಗೆ ಸೋಂಕು ಹರಡುತ್ತಿದ್ದು, ನಿಯಂತ್ರಣ ಕಷ್ಟ ಸಾಧ್ಯವಾಗಿದೆ ಎನ್ನುವುದು ರೈತರ ಅಳಲಾಗಿದೆ.

ಸೋಂಕಿತ ದನ ಕರುಗಳಲ್ಲಿ ಜ್ವರ, ಶರೀರದಲ್ಲಿ ಸಿಡುಬಿನಂಥ ಗುಳ್ಳೆಗಳು, ಗಂಟುಗಳು ಕಂಡುಬರುತ್ತಿವೆ. ಹಲವು ದಿನಗಳವರೆಗೆ ಗಾಯ ವಾಸಿಯಾಗದೆ, ಜಾನುವಾರುಗಳ ದೇಹದ ಹಲವು ಭಾಗಗಳಿಗೆ ಸೋಂಕು ವ್ಯಾಪಿಸಿ ದೇಹ ಕುಂದುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಸೋಂಕಿತ ದನಗಳಲ್ಲಿ ಹಾಲಿನ ಉತ್ಪಾದನೆ ಕಡಿಮೆಯಾಗುತ್ತಿದೆ. ಜಾನುವಾರುಗಳನ್ನೇ ನಂಬಿ ಜೀವನ ಸಾಗಿಸುತ್ತಿದ್ದ ಹೈನುಗಾರರ ಬದುಕು ತೀರಾ ಬಡವಾಗಿದೆ. ಹಸುಗಳಿಗೆ ಸೂಕ್ತ ಚಿಕಿತ್ಸೆ ದೊರೆಯದೆ ರೋಗ ಉಲ್ಬಣಗೊಂಡು ಮೃತಪಟ್ಟಿವೆ. ಇದರಿಂದ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ. ಎಂದು ಈ ಭಾಗದ ರೈತರು ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ.

ಹಸುಗಳಿಗೆ ರೋಗ ಕಾಣಿಸಿಕೊಂಡ ಕೂಡಲೇ ಕುಶಾಲನಗರ ಪಶುಸಂಗೋಪನಾ ಇಲಾಖೆ ವೈದ್ಯರಿಗೆ ಮಾಹಿತಿ ನೀಡಿದ್ದಾರೆ. ಆದರೆ ವೈದ್ಯರು ಸೂಕ್ತ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ತೋರಿದ ಹಿನ್ನೆಲೆಯಲ್ಲಿ ಹಸುಗಳು ಮೃತಪಟ್ಟಿವೆ ಎಂದು ಆರೋಪ ವ್ಯಕ್ತಪಡಿಸಿದ್ದಾರೆ. ಕೂಡಲೇ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಈ ಭಾಗದ ರೈತರು ಒತ್ತಾಯಿಸಿದ್ದಾರೆ.