ಗೋಣಿಕೊಪ್ಪಲು, ಏ. ೧೨: ಬಿರುನಾಣಿ ಕೊಡವ ಸಮಾಜ ಹಾಗೂ ಗೋಣಿಕೊಪ್ಪಲುವಿನ ಬಿಬಿಸಿ ತಂಡದ ಸಹಯೋಗದಲ್ಲಿ ಏರ್ಪಡಿಸಲಾಗಿರುವ ೨೦ ದಿನಗಳ ಹಾಕಿ ತರಬೇತಿ ಶಿಬಿರಕ್ಕೆ ಮಾಜಿ ಒಲಂಪಿಯನ್ ಬಾಳೆಯಡ ಕೆ. ಸುಬ್ರಮಣಿ ಚಾಲನೆ ನೀಡಿದರು.
ಸ್ವತಃ ಒಲಂಪಿಯನ್ ಸುಬ್ರಮಣಿ ಪುಟಾಣಿ ಮಕ್ಕಳಿಗೆ ಹಾಕಿ ತರಬೇತಿಯನ್ನು ನೀಡಿದ್ದಲ್ಲದೆ ಹಾಕಿ ಕ್ರೀಡೆಯಲ್ಲಿ ಭಾರತವನ್ನು ಪ್ರತಿನಿಧಿಸಿದ ಸಂದರ್ಭ ಆಟಕ್ಕೆ ಬಳಸಿದ ೪೫ ವರ್ಷದ ಇತಿಹಾಸವಿರುವ ಹಾಕಿ ಸ್ಟಿಕ್ ಹಾಗೂ ಹಾಕಿ ಇಂಡಿಯಾ ಟೀಮ್ನಲ್ಲಿ ಬಳಸಿದ್ದ ೪ ನಂಬರಿನ ನೀಲಿ ಬಣ್ಣದ ಜರ್ಸಿಯನ್ನು ವಿದ್ಯಾರ್ಥಿಗಳಿಗೆ ತೋರಿಸಿ, ಮಕ್ಕಳಲ್ಲಿ ಹೆಚ್ಚಿನ ಆಸಕ್ತಿ ಮೂಡಿಸುವ ಪ್ರಯತ್ನ ಮಾಡಿದರು. ಶಿಬಿರಾರ್ಥಿಗಳು ಮುಂದಿನ ದಿನಗಳಲ್ಲಿ ಹೆಚ್ಚಿನ ಅಭ್ಯಾಸ ಪಡೆಯುವ ಮೂಲಕ ಹಾಕಿ ಕ್ರೀಡೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ಪಡೆಯು ವಂತಾಗಬೇಕು. ಅಲ್ಲದೆ ಹೆಚ್ಚಾಗಿ ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿ ಕೊಳ್ಳಬೇಕು. ಯಾವುದೇ ಭಾಗದಲ್ಲಿ ಹಾಕಿ ತರಬೇತಿಗಳು ನಡೆದಾಗ ತಪ್ಪದೆ ಭಾಗವಹಿಸಿ ಅವಕಾಶವನ್ನು ಹೆಚ್ಚಾಗಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸುಬ್ರಮಣಿ ಕರೆ ನೀಡಿದರು.
ಮೊದಲ ಬಾರಿಗೆ ಹಮ್ಮಿಕೊಂಡಿರುವ ತರಬೇತಿಯಲ್ಲಿ ೩೫ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಹಾಕಿ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಸಲುವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸುಬ್ರಮಣಿ ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಗೋಣಿಕೊಪ್ಪಲುವಿನ ಬಿಬಿಸಿ ತಂಡದ ಕಾರ್ಯದರ್ಶಿ ಚೆಪ್ಪುಡೀರ ಅಪ್ಪಣ್ಣ ಮಾತನಾಡಿ, ಗ್ರಾಮೀಣ ಪ್ರತಿಭೆಗಳು ಕ್ರೀಡೆಯಲ್ಲಿ ಹೆಚ್ಚಿನ ಸಾಧನೆ ಮಾಡಲು ಪೂರಕವಾಗಿ ನುರಿತ ಅನುಭವಿ ಕೋಚ್ಗಳಿಂದ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. ಮುಂದೊAದು ದಿನ ಗ್ರಾಮೀಣ ಮಟ್ಟದ ಪ್ರತಿಭೆಗಳು ಉತ್ತಮ ಸಾಧನೆ ಮಾಡಲು ಅವಕಾಶ ಸಿಕ್ಕಿದಂತಾಗುತ್ತದೆ ಎಂದರು. ಅಕ್ರಮ ಸಕ್ರಮ ಪೊನ್ನಂಪೇಟೆ ತಾಲೂಕು ಸಮಿತಿಯ ಅಧ್ಯಕ್ಷ ಅಣ್ಣಳಮಾಡ ಲಾಲಾ ಅಪ್ಪಣ್ಣ ಮಾತನಾಡಿದರು.
ಬಿರುನಾಣಿ ಕೊಡವ ಸಮಾಜ ಅಧ್ಯಕ್ಷ ಕುಪ್ಪಡೀರ ಮುತ್ತಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಾಕಿ ತರಬೇತಿದಾರರಾದ ಕರ್ತಮಾಡ ಚಂಗಪ್ಪ, ಅರುಣ್, ಸ್ಥಳೀಯರಾದ ಅಣ್ಣಳಮಾಡ ಗಿರೀಶ್, ಕರ್ತಮಾಡ ನಂದ, ಸೇರಿದಂತೆ ಪ್ರಮುಖರು ಹಾಜರಿದ್ದರು. ಕಾರ್ಯಕ್ರಮದಲ್ಲಿ ಸ್ಥಳೀಯರಾದ ಕರ್ತಮಾಡ ಸುಜು ಪೊನ್ನಪ್ಪ ಸ್ವಾಗತಿಸಿ, ವಂದಿಸಿದರು.