ಮಡಿಕೇರಿ,ಏ.೧೨: ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವದರಿಂದ ಉತ್ತಮ ಜೀವನ ಸಾಗಿಸಲು ಸಾಧ್ಯವಾಗಲಿದೆ ಎಂದು ಎರಡು ಬಾರಿ ಒಲಂಪಿಕ್ಸ್ನಲ್ಲಿ ಭಾಗವಹಿಸಿದ, ಖೇಲೋ ಇಂಡಿಯಾ ನಿರ್ದೇಶಕ ಡಾ.ಎ.ಬಿ. ಸುಬ್ಬಯ್ಯ ಕರೆಕೊಟ್ಟರು. ವಾಂಡರ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ದಿ. ಶಂಕರ್ ಸ್ವಾಮಿ ಸ್ಮರಣಾರ್ಥ ಜ.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿರುವ ೩೦ನೇ ವರ್ಷದ ಉಚಿತ ಬೇಸಿಗೆ ಶಿಬಿರಕ್ಕಾಗಮಿಸಿ ಮಕ್ಕಳಿಗೆ ಹಿತವಚನ ನುಡಿದರು. ಮಕ್ಕಳು ಸಣ್ಣದರಿಂದಲೇ ಬಿಡುವಿದ್ದಾಗಲೆಲ್ಲ ಮೈದಾನಕ್ಕೆ ಆಗಮಿಸಿ ಯಾವದಾದರೊಂದು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು. ಇದು ಶಿಸ್ತು ಕಲಿಸುತ್ತದೆಯಲ್ಲದೆ, ದೇಹ ಸಧೃಡವಾಗಿಸುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಾಗುವದರೊಂದಿಗೆ ಉತ್ತಮ ಜೀವನ ಸಾಗಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು. ಜೀವನದಲ್ಲಿ ಶಿಸ್ತು, ಸಮರ್ಪಣಾ ಭಾವ ಇರಬೇಕು, ಇದು ಶಿಕ್ಷಣ, ಉದ್ಯೋಗ, ಜೀವನಕ್ಕೆ ಸಹಕಾರಿ, ಯಾವದೇ ಕ್ಷೇತ್ರದಲ್ಲಾಗಲೀ ಪರಿಶ್ರಮ ಅತಿ ಮುಖ್ಯ. ಇಂತಹ ಶಿಬಿರಗಳು ಜೀವನಕ್ಕೆ ಸ್ಪೂರ್ತಿಯಾಗಬೇಕು ಎಂದು ಹೇಳಿದರಲ್ಲದೆ, ಬಾಲ್ಯದಲ್ಲಿ ಇದೇ ಮೈದಾನದಲ್ಲಿ ಆಟವಾಡಿದ ನೆನಪನ್ನು ಮೆಲುಕು ಹಾಕಿದರಲ್ಲದೆ, ದಿ. ಶಂಕರ್ ಸ್ವಾಮಿ ಅವರು ನೀಡುತ್ತಿದ್ದ ಪ್ರೋತ್ಸಾಹವನ್ನು ಶಿಬಿರಾರ್ಥಿಗಳಿಗೆ ತಿಳಿಸಿಕೊಟ್ಟರು.
ಈ ಸಂದರ್ಭದಲ್ಲಿ ಹಿರಿಯ ಆಟಗಾರ ಚುಮ್ಮಿ ದೇವಯ್ಯ, ಶಿಬಿರದ ಸಂಚಾಲಕ ಬಾಬು ಸೋಮಯ್ಯ, ತರಬೇತುದಾರರಾದ ಶಾಂ ಪೂಣಚ್ಚ, ಗಣೇಶ್, ಹರೇಂದ್ರ, ಕುಡೆಕಲ್ ಸಂತೋಷ್ ಇದ್ದರು.