ಕುಶಾಲನಗರ, ಏ. ೧೨: ಬಿರು ಬಿಸಿಲಿನ ನಡುವೆ ಕೊಡಗು ಜಿಲ್ಲೆಯಲ್ಲಿ ಮೂಲ ಕಾವೇರಿಯಿಂದ ಬಹುತೇಕ ಕಡೆ ನದಿಯಲ್ಲಿ ಹರಿಯುವ ನೀರು ಸ್ಥಗಿತಗೊಂಡಿದ್ದ ದೃಶ್ಯ ಕಂಡು ಎದುರಾಗಿದ್ದರೆ, ಕುಶಾಲನಗರ ಸಮೀಪದ ಕೂಡು ಮಂಗಳೂರು ವ್ಯಾಪ್ತಿಯ ನದಿಯಲ್ಲಿ ಮಾತ್ರ ಯಥೇಚ್ಛವಾಗಿ ನೀರಿನ ಸಂಗ್ರಹ ಇರುವುದು ನೋಡುಗರಲ್ಲಿ ಅಚ್ಚರಿ ಮೂಡಿಸಿದೆ.

ಪ್ರವಾಸಿ ಕೇಂದ್ರ ದುಬಾರೆ, ಕಾವೇರಿ ನಿಸರ್ಗಧಾಮ ಹಾಗೂ ಕುಶಾಲನಗರ ಪಟ್ಟಣ ವ್ಯಾಪ್ತಿ ಸೇರಿದಂತೆ ಹಲವೆಡೆ ಕಾವೇರಿ ನದಿಯಲ್ಲಿ ನೀರಿನ ಹರಿವು ಸ್ಥಗಿತಗೊಂಡು ತಿಂಗಳು ಕಳೆದಿದ್ದು ನದಿ ತಟದ ಜನತೆ ನೀರಿನ ಹಾಹಾಕಾರ ಎದುರಿಸುತ್ತಿದ್ದಾರೆ. ಆದರೆ ಸಮೀಪದ ಕೂಡ್ಲೂರು, ಕೂಡುಮಂಗಳೂರು ಕೈಗಾರಿಕಾ ಬಡಾವಣೆ ವ್ಯಾಪ್ತಿಯ ನದಿಯಲ್ಲಿ ನೀರಿನ ಸಂಗ್ರಹ ಸುಮಾರು ಎರಡು ಕಿ.ಮಿ. ವ್ಯಾಪ್ತಿಯಷ್ಟು ಉದ್ದಕ್ಕೂ ಬಹುತೇಕ ತುಂಬಿ ನಿಧಾನವಾಗಿ ಹರಿಯುತ್ತಿರುವ ದೃಶ್ಯ ಕಾಣಬಹುದು. ಈ ವ್ಯಾಪ್ತಿಯಲ್ಲಿ ವರ್ಷದ ಎಲ್ಲಾ ದಿನಗಳಲ್ಲಿ ನೀರಿನ ಸಂಗ್ರಹ ಇರುವುದಾಗಿ ಸ್ಥಳೀಯ ಮಹಿಳೆ ಕಸ್ತೂರಿ ಎಂಬವರು ‘ಶಕ್ತಿ’ಯೊಂದಿಗೆ ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು ಈ ಭಾಗದಲ್ಲಿ ಇದುವರೆಗೆ ನೀರಿನ ಕೊರತೆ ಉಂಟಾಗಿಲ್ಲ ಎಂದು ತಿಳಿಸಿದ್ದಾರೆ.

ಈ ವ್ಯಾಪ್ತಿಯ ನದಿಯಲ್ಲಿ ಸುಮಾರು ದೂರದ ತನಕ ಹಲವು ಅಡಿಗಳಷ್ಟು ಆಳಕ್ಕೆ ನೀರು ನಿಂತಿರುವ ದೃಶ್ಯ ಸ್ಥಳಕ್ಕೆ ತೆರಳಿದ ಸಂದರ್ಭ ಶಕ್ತಿಗೆ ಕಂಡು ಬಂತು. ನದಿಯ ನೀರು ಹಾಗೂ ತಟ ಬಹುತೇಕ ಸ್ವಚ್ಛವಾಗಿರುವುದು ಕೂಡ ಗಮನ ಸೆಳೆಯಿತು. ಈ ಭಾಗದಲ್ಲಿ ನದಿಯಲ್ಲಿ ಅಲ್ಪ ಪ್ರಮಾಣದಲ್ಲಿ ನೀರಿನ ಹರಿವು ಕೂಡ ಗೋಚರಿಸಿದೆ.

ಕುಶಾಲನಗರ ಸಮೀಪದ ದುಬಾರೆ ಸಾಕಾನೆ ಶಿಬಿರ ಸೇರಿದಂತೆ ಕಾವೇರಿ ನದಿಯಲ್ಲಿ ಬಹುತೇಕ ವ್ಯಾಪ್ತಿಯಲ್ಲಿ ಕಳೆದ ಒಂದು ತಿಂಗಳಿನಿAದ ನದಿ ಸಂಪೂರ್ಣ ನೀರು ಬತ್ತಿ ಹೋಗಿದ್ದು ಕಲ್ಲು ಬಂಡೆಗಳ ದೃಶ್ಯ ಕಾಣಬಹುದು.

ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಕೂಡ ಉದ್ದಕ್ಕೂ ನದಿ ಸಂಪೂರ್ಣ ಬತ್ತಿ ಹೋಗಿ ಕೆಲವೆಡೆ ನೀರು ಪಾಚಿ ಕಟ್ಟಿ ನಿಂತಿರುವ ದೃಶ್ಯ ಎದುರಾಗಿದೆ.

ಆದರೆ ಕುಶಾಲನಗರ ಕೆಳಭಾಗದ ನದಿ ಪಾತ್ರದಲ್ಲಿ ನೀರಿನ ಸಂಗ್ರಹ ಹಾಗೂ ಹರಿವು ಮಾತ್ರ ಜನರಿಗೆ ಅಪರೂಪದ ದೃಶ್ಯವಾಗಿದ್ದು, ನದಿ ತಟದ ಉದ್ದಕ್ಕೂ ಎರಡು ಭಾಗಗಳಲ್ಲಿ ಬೆಳೆದು ನಿಂತಿರುವ ಬಿದಿರು ಮತ್ತಿತರ ಮರಗಳು ಹಚ್ಚಹಸಿರಾಗಿರುವ ದೃಶ್ಯ ಎಲ್ಲರ ಮನಸೂರೆ ಗೊಳ್ಳುತ್ತಿದೆ.