ಶ್ರೀಮಂಗಲ, ಏ. ೧೩: ಚುನಾವಣೆ ಪೂರ್ವ ನೀಡಿದ್ದ ಗ್ಯಾರಂಟಿಗಳನ್ನು ಜಾರಿಗೆ ತರಲು ನಮ್ಮ ಸರಕಾರಕ್ಕೆ ಸಾಧ್ಯವಾಗದಿದ್ದರೆ, ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೆ, ಸುಳ್ಳು ಹೇಳಿಕೊಂಡು ಜನರಿಗೆ ಮುಖ ತೋರಿಸಲು ಸಾಧ್ಯವಿರಲಿಲ್ಲ.

ಆದರೆ ಕೇಂದ್ರ ಚುನಾವಣಾ ಸಂದರ್ಭ ರೂ. ೧೫ ಲಕ್ಷ ಜನರ ಖಾತೆಗೆ ಹಾಕುವ ಭರವಸೆ ನೀಡಿ, ಇದೀಗ ಕೇಂದ್ರ ಸಚಿವರೊಬ್ಬರು ಅದು ಚುನಾವಣೆ ಜುಮ್ಲಾ ಎಂದು ಹೇಳಿಕೆ ನೀಡಿದ್ದಾರೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವೀರಾಜಪೇಟೆ ಕ್ಷೇತ್ರ ಶಾಸಕ ಎ.ಎಸ್. ಪೊನ್ನಣ್ಣ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಬಿರುನಾಣಿಯಲ್ಲಿ ಬುಧವಾರ ಸಂಜೆ ನಡೆದ ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿ ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಮ್ಮ ಸರಕಾರ ೫ ಗ್ಯಾರಂಟಿ ಅಲ್ಲದೆ ೧೦ ತಿಂಗಳಲ್ಲಿ ಕಾನೂನು ತಿದ್ದುಪಡಿ, ಜನರಿಗೆ ತಲುಪಿಸುವ ಯೋಜನೆ ಸೇರಿ ೧೬೨ ಪ್ರಣಾಳಿಕೆಯ ಆಶ್ವಾಸನೆಯನ್ನು ಈಡೇರಿಸಿದೆ ಎಂದರು. ೨೦೧೪ ರಲ್ಲಿ ಕಾಂಗ್ರೆಸ್‌ನ ಮನಮೋಹನ್ ಸಿಂಗ್ ಸರಕಾರ ಅಧಿಕಾರದಿಂದ ಇಳಿದಾಗ ದೇಶದ ಆಂತರಿಕ ಮತ್ತು ಬಾಹ್ಯ ಸಾಲ ಸೇರಿ ರೂ. ೫೫ ಲಕ್ಷ ಕೋಟಿ ಇತ್ತು. ಇಂದು ರೂ. ೧೭೮ ಲಕ್ಷ ಕೋಟಿ ಸಾಲ ಇದೆ. ಪ್ರತಿ ನಾಗರಿಕನ ಮೇಲೆ ಸುಮಾರು ರೂ. ೯೦ ಸಾವಿರ ಸಾಲ ಇದೆ. ಸ್ವಾತಂತ್ರö್ಯ ಬಂದು ೬೦ ವರ್ಷ ಅಂದರೆ ೨೦೧೪ ರವರೆಗೆ ರೂ. ೫೫ ಲಕ್ಷ ಕೋಟಿ ಸಾಲ ಇತ್ತು. ೨೦೧೪ ರಿಂದ ೨೦೨೪ ರವರೆಗೆ ೧೦ ವರ್ಷ ಅವಧಿಯಲ್ಲಿ ಕೇಂದ್ರ ಬಿಜೆಪಿ ಸರಕಾರ ೩ ಪಟ್ಟು ಸಾಲ ಮಾಡಿದೆ. ಸಾಲ ಮಾಡಿ ಏನು ಮಾಡಿದ್ದಾರೆ ಎನ್ನುವ ಪ್ರಶ್ನೆ ಪ್ರಜಾಪ್ರಭುತ್ವದಲ್ಲಿ ಕೇಳಬೇಕಾಗಿದೆ.

ಕೊಡಗು ಜಿಲ್ಲೆಯಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯ ನಡೆಸಲು ಕಾಂಗ್ರೆಸ್‌ನ ಕೊಡಗು-ಮೈಸೂರು ಕ್ಷೇತ್ರ ಲೋಕಸಭಾ ಅಭ್ಯರ್ಥಿ ಲಕ್ಷö್ಮಣ್ ಅವರಿಗೆ ಹೆಚ್ಚು ಮತ ನೀಡಲು ಕಾರ್ಯಕರ್ತರು ಶ್ರಮಿಸಬೇಕೆಂದು ಕರೆ ನೀಡಿದರು.

ಬಿರುನಾಣಿ ವಲಯ ಕಾಂಗ್ರೆಸ್ ಅಧ್ಯಕ್ಷ ಕುಪ್ಪಣಮಾಡ ಪ್ರೀತಮ್ ಅಧ್ಯಕ್ಷತೆ ವಹಿಸಿದ್ದರು. ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ಪೊನ್ನಂಪೇಟೆ ತಾಲೂಕು ಬಗರ್ ಹುಕುಂ ಸಕ್ರಮೀಕರಣ ಅಧ್ಯಕ್ಷ ಅಣ್ಣಳಮಾಡ ಲಾಲಾ ಅಪ್ಪಣ್ಣ, ಬಿರುನಾಣಿ ಗ್ರಾ.ಪಂ. ಮಾಜಿ ಅಧ್ಯಕ್ಷ ಬುಟ್ಟಿಯಂಡ ತಂಬಿ ನಾಣಯ್ಯ, ತಾ.ಪಂ. ಮಾಜಿ ಸದಸ್ಯ ಬೊಳ್ಳೆರ ಅಪ್ಪುಟ ಪೊನ್ನಪ್ಪ ಹಾಜರಿದ್ದರು.