ಸಿದ್ದಾಪುರ, ಏ. ೧೩: ಆಚಾರ, ವಿಚಾರ, ಸಂಸ್ಕೃತಿ, ಪರಂಪರೆಯನ್ನು ಉಳಿಸಿ-ಬೆಳೆಸುವುದರ ಮೂಲಕ ಧಾರ್ಮಿಕ ಚಿಂತನೆಗಳನ್ನು ಮೈಗೂಡಿಸಿ ಕೊಂಡು ಮುನ್ನಡೆಯಬೇಕೆಂದು ಮಾಜಿ ಶಾಸಕ ಕೆ.ಜಿ. ಬೋಪಯ್ಯ ಸಲಹೆ ನೀಡಿದರು.
ಸಿದ್ದಾಪುರ ಸ್ವರ್ಣ ಮಾಲ ಕಲ್ಯಾಣ ಮಂಟಪ ಸಭಾಂಗಣದಲ್ಲಿ ನಡೆದ ಕೊಡಗು ಜಿಲ್ಲಾ ಕಾವೇರಿ ತಮಿಳು ಸಂಘದ ೯ನೇ ವಾರ್ಷಿಕೋತ್ಸವ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ಜಿಲ್ಲೆಯಲ್ಲಿ ನೆಲೆಸಿರುವ ತಮಿಳು ಬಾಂಧವರು ತಮ್ಮದೇ ಆದ ಜೀವನಶೈಲಿಯಲ್ಲಿ ಬದುಕು ಸಾಗಿಸುತ್ತಿದ್ದಾರೆ. ಉತ್ತಮ ಒಡನಾಟ ಹೊಂದಿರುವ ಸಮುದಾಯ ಸಂಘಟನೆಯ ಮೂಲಕ ಒಗ್ಗಟ್ಟಾಗಿ ಮುನ್ನಡೆಯುತ್ತಿರುವುದು ಶ್ಲಾಘನೀಯ. ಕಳೆದ ೯ ವರ್ಷಗಳಿಂದ ಕಾವೇರಿ ತಮಿಳು ಸಂಘ ಸಮುದಾಯ ಬಾಂಧವರ ಏಳಿಗೆಗಾಗಿ ಶ್ರಮಿಸುತ್ತಿದ್ದು ಮತ್ತಷ್ಟು ಅಭಿವೃದ್ಧಿಯೊಂದಿಗೆ ಮುನ್ನಡೆದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗಲಿದೆ.
ಮಕ್ಕಳ ಶಿಕ್ಷಣದ ಬಗ್ಗೆ ಕಾಳಜಿ ವಹಿಸಿ ಪ್ರತಿಭಾನ್ವಿತರಾಗಿ ಮುಂದೆ ತರುವ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದರು. ಕಾವೇರಿ ತಮಿಳು ಸಂಘದ ಅಧ್ಯಕ್ಷ ಮೈಕಲ್ ಮಾತನಾಡಿ, ಜಿಲ್ಲೆಯಲ್ಲಿ ನೆಲೆಸಿರುವ ತಮಿಳು ಬಾಂಧವರು ಸಂಘಟನೆಯೊAದಿಗೆ ಕೈಜೋಡಿಸಿದ ಪರಿಣಾಮ ಕಳೆದ ೯ ವರ್ಷಗಳಿಂದಲೂ ಬಾಂಧವರ ಸೇವಾ ಮನೋಭಾವದೊಂದಿಗೆ ಮುನ್ನಡೆಯುತ್ತಿದ್ದು, ಈ ಬಾರಿಯೂ ಅದ್ದೂರಿ ಕಾರ್ಯಕ್ರಮವನ್ನು ಆಚರಿಸಲಾಗಿದೆ. ಮುಂದಿನ ದಿನಗಳಲ್ಲಿ ಸಮುದಾಯ ಬಾಂಧವರ ಏಳಿಗೆಗಾಗೆ ಶ್ರಮಿಸುವ ಮೂಲಕ ಅಭಿವೃದ್ಧಿ, ಆರೋಗ್ಯ, ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗುವುದು ಎಂದರು. ಇದೇ ಸಂದರ್ಭ ತಮಿಳು ಸಂಘದ ವತಿಯಿಂದ ಮಾಜಿ ಶಾಸಕ ಕೆ.ಜಿ. ಬೋಪಯ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಮಾರಂಭದಲ್ಲಿ ಯೋಧರು, ಸಮಾಜ ಸೇವಕರು, ತಮಿಳು ಶಾಲೆಯ ಶಿಕ್ಷಕರುಗಳು, ಪ್ರತಿಭಾವಂತ ವಿದ್ಯಾರ್ಥಿಗಳನ್ನು ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು. ಕ್ರೀಡೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನೆರೆದಿದ್ದವರ ಗಮನ ಸೆಳೆಯಿತು. ಈ ಸಂದರ್ಭ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಹಾಗೂ ಬಿಜೆಪಿ ಮುಖಂಡ ವಿಜು ಸುಬ್ರಮಣಿ, ಕುಟ್ಟಂಡ ಅಜಿತ್ ಕರುಂಬಯ್ಯ, ಸುವೀನ್ ಗಣಪತಿ, ಮಲ್ಲಂಡ ಮಧು ದೇವಯ್ಯ, ಕಾವೇರಿ ತಮಿಳು ಸಂಘದ ಅಧ್ಯಕ್ಷ ಮೈಕಲ್ ಪಾಲಿಬೆಟ್ಟ, ಕಾವೇರಿ ತಮಿಳು ಸಂಘದ ಉಪಾಧ್ಯಕ್ಷರುಗಳಾದ ನಾಗರಾಜ್, ಕಣ್ಣನ್, ಕಾರ್ಯದರ್ಶಿ ಕುಮಾರ್, ಸಹ ಕಾರ್ಯದರ್ಶಿ ಗಣೇಶ್, ಖಜಾಂಚಿ ಮುತ್ತು ವೇಲ್, ಆಡಿಟರ್ ಶೇಖರ್ ಸೇರಿದಂತೆ ಸಮಿತಿಯ ಪ್ರಮುಖರು ಹಾಜರಿದ್ದರು.