ಮಡಿಕೇರಿ, ಏ. ೧೧: ಚುನಾವಣೆ ಹಿನ್ನೆಲೆಯಲ್ಲಿ ಲೈಸನ್ಸ್ದಾರರು ತಮ್ಮ ಕೋವಿಗಳನ್ನು ಜಮಾವಣೆ ಮಾಡುವ ವಿಚಾರಕ್ಕೆ ಸಂಬAಧಿಸಿದAತೆ ಬಂದೂಕಿನ ಅಗತ್ಯತೆ ಬಗ್ಗೆ ಪರವಾನಗಿದಾರರು ಸೂಕ್ತ ಅರ್ಜಿ ಸಲ್ಲಿಸಿದಲ್ಲಿ ಅದರ ಪರಿಶೀಲನೆ ಮಾಡಲು, ನ್ಯಾಯಾಲಯ ಸರಕಾರಕ್ಕೆ ಸೂಚನೆ ನೀಡಿ ವಿಚಾರಣೆ ಮುಂದೂಡಿದೆ.
ಚುನಾವಣೆ ಹಿನ್ನೆಲೆ ಬಂದೂಕು ಜಪ್ತಿ ಆದೇಶ ಪ್ರಶ್ನಿಸಿ ಕೊಡಗಿನ ಹಲವು ಕಾಫಿ ತೋಟಗಳ ಮಾಲೀಕರು ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ ಬುಧವಾರ ವಿಚಾರಣೆ ನಡೆಸಿ ಬಂದೂಕು ವಾಪಸ್ ನೀಡುವ ಬಗ್ಗೆ ಅರ್ಜಿದಾರರು ಮನವಿ ಸಲ್ಲಿಸಿದರೆ ಎರಡು ದಿನಗಳಲ್ಲಿ ಅದನ್ನು ಪರಿಗಣಿಸುವಂತೆ ಸೂಚನೆ ನೀಡಿ ವಿಚಾರಣೆಯನ್ನು ಮುಂದೂಡಿತು.
ಅರ್ಜಿದಾರರ ಪರ ವಕೀಲರು, ಚುನಾವಣೆ ಹಿನ್ನೆಲೆ ಎಲ್ಲಾ ಬಂದೂಕುಗಳನ್ನು ಜಪ್ತಿ ಮಾಡಲು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಆದರೆ, ಇದರಿಂದ ತೋಟಗಳ ಮಾಲೀಕರಿಗೆ ತೊಂದರೆಯಾಗುತ್ತಿದೆ. ಕಾಡು ಪ್ರಾಣಿಗಳಿಂದ ಆತ್ಮರಕ್ಷಣೆಗೆ ಬಂದೂಕಿನ ಅಗತ್ಯವಿದೆ. ಹಾಗಾಗಿ ಬಂದೂಕು ತಂದೊಪ್ಪಿಸುವ ಆದೇಶ ರದ್ದುಗೊಳಿಸಬೇಕು ಎಂದು ಮನವಿ ಮಾಡಿದರು.
ಸರಕಾರದ ಪರ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ, ಚುನಾವಣಾ ನಿಯಮಗಳಂತೆ ಆದೇಶ ಹೊರಡಿಸಲಾಗಿದೆ. ಆದರೆ, ಅರ್ಜಿದಾರರು ತಮಗೆ ಬಂದೂಕಿನ ಅಗತ್ಯತೆ ಬಗ್ಗೆ ಮನವಿ ಸಲ್ಲಿಸಿದರೆ ಅದನ್ನು ಪರಿಗಣಿಸಲಾಗುವುದು ಎಂದು ನ್ಯಾಯಾಲಯಕ್ಕೆ ಭರವಸೆ ನೀಡಿದರು. ಅದನ್ನು ದಾಖಲಿಸಿಕೊಂಡ ನ್ಯಾಯಾಲಯ ಸರಕಾರಕ್ಕೆ ಸೂಚನೆ ನೀಡಿ ವಿಚಾರಣೆಯನ್ನು ಮುಂದೂಡಿತು.