ಮಡಿಕೇರಿ, ಏ. ೧೨: ಹುಣಸೂರು ವನ್ಯಜೀವಿ ವಲಯದ ಆನೆಚೌಕೂರಿನಲ್ಲಿ ಕಾಡುಪ್ರಾಣಿ ಬೇಟೆ ಮಾಡಲು ಯತ್ನಿಸಿದ ಕೊಡಗಿನ ಇಬ್ಬರನ್ನು ಬಂಧಿಸುವಲ್ಲಿ ಹುಣಸೂರು ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಜಿಲ್ಲೆಯ ಮೂಲದ ಉಳಿದ ಮೂವರು ತಲೆಮರೆಸಿಕೊಂಡಿದ್ದಾರೆ.

ಹುಣಸೂರು-ಗೋಣಿಕೊಪ್ಪ ಮುಖ್ಯ ರಸ್ತೆ ಕೂಡುವ ದಾರಿಯಲ್ಲಿ ಜಡೆ ಆಲದಮರ ಗೇಟ್ ಎಂಬ ಸ್ಥಳದ ಬಳಿ ತಾ.೧೦ ರಂದು ಹುಣಸೂರು ವನ್ಯಜೀವಿ ವಲಯದ ಉಪ ವಲಯ ಅರಣ್ಯಾಧಿಕಾರಿ ರಾಮಣ್ಣ ಪಿ.ಎಲ್ ಹಾಗೂ ಗಸ್ತು ಅರಣ್ಯ ಪಾಲಕರು, ಎ.ಪಿ.ಸಿ ಸಿಬ್ಬಂದಿಗಳೊAದಿಗೆ ರಾತ್ರಿ ಗಸ್ತು ತಿರುಗುವಾಗ ಮಾರುತಿ ಓಮ್ನಿ ವಾಹನವೊಂದು ನಿಂತಿದ್ದು, ಪರಿಶೀಲಿಸಲೆಂದು ವಾಹನದ ಬಳಿ ತೆರಳಿದಾಗ ವಾಹನ ಬಳಿಯೇ ಹೊರಗೆ ನಿಂತಿದ್ದ ಐವರು, ವಾಹನ ಹತ್ತಿ ಪರಾರಿಯಾಗಲು ಯತ್ನಿಸಿದ್ದಾರೆ. ಇವರನ್ನು ಹಿಂಬಾಲಿಸಿದ ಗಸ್ತು ತಂಡ, ಪಿರಿಯಾಪಟ್ಟಣ-ಬೆಟ್ಟದಪುರ ಮುಖ್ಯರಸ್ತೆ ಬಳಿ ಕಾರನ್ನು ನಿಲ್ಲಿಸಿ ಇಳಿದು ತಪ್ಪಿಸಿಕೊಳ್ಳಲು ಯತ್ನಿಸಿದ ಐವರಲ್ಲಿ ಈರ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಇಬ್ಬರು ಆರೋಪಿಗಳಾದ ವೀರಾಜಪೇಟೆ ನಾಲ್ಕೇರಿ ಗ್ರಾಮದ ಕಾವೇರಪ್ಪ ಕೆ.ಕೆ(೩೮) ಹಾಗೂ ಕೋತೂರು ಗ್ರಾಮದ ಆಕರ್ಷ ವಿ.ಆರ್(೩೧) ಅವರುಗಳನ್ನು ಗಸ್ತು ತಂಡ ಸೆರೆ ಹಿಡಿದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಕೃತ್ಯಕ್ಕೆ ಬಳಸಲಾದ, ತಲೆಮರೆಸಿಕೊಂಡ ಆರೋಪಿ ರಂಜು ಅವರ ತಂದೆ ಕೃಷ್ಣ ಅವರಿಗೆ ಸೇರಿದ ಕೆಂಪು ಬಣ್ಣದ ಓಮ್ನಿ ಕಾರು(ಕೆ.ಎ.೧೨-ಎಂ-೨೬೮೧), ಎಸ್.ಬಿ.ಬಿ.ಎಲ್ ಒಂಟಿ ನಳಿಕೆಯ ಬಟ್, ೧ ಚೂರಿ ಹಾಗೂ ಮೊಬೈಲ್ ಫೋನ್ ಗಳನ್ನು ವಶಪಡಿಸಿ ಕೊಳ್ಳಲಾಗಿದೆ.

ಬೇಟೆಯಾಡಲು ತಂದಿದ್ದ ಬಂದೂಕಿನ ಒಂಟಿ ನಳಿಕೆ ಹಾಗೂ ತುಂಬಿದ ಕಾಡತೂಸುಗಳೊಂದಿಗೆ ಮತ್ತೋರ್ವ ಆರೋಪಿ ಕೋತೂರು ಗ್ರಾಮದ ಬೋಪಣ್ಣ ಪರಾರಿ ಯಾಗಿದ್ದು, ಇನ್ನಿಬ್ಬರು ಆರೋಪಿ ಗಳಾದ ಕೋತೂರು ಗ್ರಾಮದ ವಿನಯ್ ಕುಮಾರ್(೩೩) ಹಾಗೂ ರಂಜು(೫೦) ಅವರುಗಳು ಕೂಡ ತಲೆಮರೆಸಿಕೊಂಡಿದ್ದಾರೆ.