ಮಡಿಕೇರಿ, ಏ. ೧೨: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಇದುವರೆಗೆ ಮತದಾನ ಪ್ರಮಾಣ ಶೇ. ೭೦ರ ಗಟಿದಾಟಿಯೇ ಇಲ್ಲ. ೧೯೮೯ರಲ್ಲಿ ನಡೆದ ಚುನಾವಣೆಯಲ್ಲಿ ಅತೀ ಹೆಚ್ಚು ಮತದಾನವಾದ ದಾಖಲೆ ಇದೆ. ೧೯೮೯ರ ಚುನಾವಣೆಯಲ್ಲಿ ಶೇ. ೬೯.೭೪ ರಷ್ಟು ಮತದಾನವಾಗಿತ್ತು.

ನಂತರ ಬಹುತೇಕ ಚುನಾವಣೆಗಳಲ್ಲಿ ಶೇಕಡ ೬೦ರ ಆಸುಪಾಸಿನಲ್ಲಿ ಮತದಾನವಾಗುತ್ತಿದೆ.

ಚುನಾವಣಾ ಆಯೋಗ ಮತ್ತು ಜಿಲ್ಲಾಡಳಿತ ಮತದಾನ ಪ್ರಮಾಣ ಹೆಚ್ಚಿಸಲು ನಾನಾ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡರು ಕೂಡ ಮೈಸೂರು-ಕೊಡಗು ಕ್ಷೇತ್ರದಲ್ಲಿ ಮತದಾನದ ಪ್ರಮಾಣ ಶೇಕಡಾ ೭೦ರ ಗಡಿದಾಟುತ್ತಿಲ್ಲ.

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ಒಳಪಡುವ ನಗರ ಪ್ರದೇಶಗಳನ್ನೊಳಗೊಂಡ ಅತೀ ಹೆಚ್ಚು ವಿದ್ಯಾವಂತ ಮತದಾರರು ಇರುವ ಕೃಷ್ಣರಾಜ, ಚಾಮರಾಜ ಮತ್ತು ನರಸಿಂಹರಾಜ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತೀ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಮತದಾನದ ಮಾಡಲು ಮತದಾರರು ಆಸಕ್ತಿ ತೋರುತ್ತಿಲ್ಲ. ಇನ್ನುಳಿದಂತೆ ಗ್ರಾಮೀಣ ಪ್ರದೇಶಗಳಾದ ಚಾಮುಂಡೇಶ್ವರಿ, ಹುಣಸೂರು, ಪಿರಿಯಾಪಟ್ಟಣ, ಮಡಿಕೇರಿ ಮತ್ತು ವೀರಾಜಪೇಟೆ ಕ್ಷೇತ್ರಗಳಲ್ಲಿ ವರ್ಷದಿಂದ ವರ್ಷಕ್ಕೆ ಮತದಾನ ಪ್ರಮಾಣ ಹೆಚ್ಚಾಗುತ್ತಲೇ ಇವೆ.

೨೦೧೯ರ ಲೋಕಸಭಾ ಚುನಾವಣೆಯಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಶೇಕಡ ೬೯.೫೧ ರಷ್ಟು ಮತದಾನವಾಗಿತ್ತು.ಆದರೆ ೭೦ರ ಗಟಿದಾಟಿಲ್ಲ.ಈ ಬಾರಿ ಶೇಕಡ ೭೫ ರಷ್ಟು ಮತದಾನವಾಗುವ ನಿರೀಕ್ಷೆ ಇದೆ. ಇದುವರೆಗೆ ಕ್ಷೇತ್ರದಲ್ಲಿ ೫೪.೧೦ ಅತೀ ಕಡಿಮೆ ಮತದಾನ ಪ್ರಮಾಣ.

೧೯೯೧ರ ಚುನಾವಣೆಯಲ್ಲಿ ಅತೀ ಕಡಿಮೆ ಮತದಾನವಾಗಿತ್ತು.

ಮನೆಮನೆ ಮತದಾನ ನೋಂದಣಿಗೆ ನಿರಾಸಕ್ತಿ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚುನಾವಣಾ ಆಯೋಗ ಪರಿಚಯಿಸಿದ ಮನೆಯಲ್ಲೇ ಮತದಾನ ಕಾರ್ಯಕ್ರಮ ಅಭೂತಪೂರ್ವ ಯಶಸ್ಸು ಕಂಡಿತ್ತು. ೮೦ ವರ್ಷ ಮೇಲ್ಪಟ್ಟವರು ಮತ್ತು ಅಂಗವಿಕಲರಿಗೆ ಮನೆಯಲ್ಲೇ ಮತದಾನ ಮಾಡುವ ಅವಕಾಶ ಮಾಡಿಕೊಡಲಾಗಿತ್ತು. ಇದೇ ಮೊದಲ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಮನೆಯಲ್ಲೇ ಮತದಾನ ಮಾಡಲು ಅವಕಾಶ ನೀಡಲಾಗಿದೆ. ಮತದಾನದ ಪ್ರಮಾಣ ಹೆಚ್ಚಿಸಲು ಭಾರತ ಚುನಾವಣಾ ಆಯೋಗವು ಮನೆಮನೆಗೆ ಮತದಾನ ಯೋಜನೆಯನ್ನು ಪರಿಚಯಿಸಿದೆ. ಆದರೆ, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಈ ಸೇವೆಯ ಬಳಕೆ ಕಡಿಮೆಯಾಗಿದೆ.

ಈ ಯೋಜನೆಯು ಪ್ರಾಥಮಿಕವಾಗಿ ೮೫ ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಮತ್ತು ೪೦% ಕ್ಕಿಂತ ಹೆಚ್ಚು ಅಂಗವೈಕಲ್ಯ ಹೊಂದಿರುವವರಿಗೆ ಮನೆಯಲ್ಲೇ ಮತದಾನ ಮಾಡಲು ಅವಕಾಶ ನೀಡಲಾಗಿದೆ.

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಕೆಲವರು ಮಾತ್ರ ನೋಂದಾಯಿಸಿಕೊAಡಿದ್ದಾರೆ.

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕೊಡಗಿನ ವೀರಾಜಪೇಟೆ ಮತ್ತು ಮಡಿಕೇರಿ ವಿಧಾನಸಭಾ ಕ್ಷೇತ್ರಗಳಲ್ಲಿ ಹೆಚ್ಚಿನ ಮತದಾರರು ಈ ಸೌಲಭ್ಯವನ್ನು ಬಳಸಿಕೊಂಡಿದ್ದಾರೆ.

ಕ್ಷೇತ್ರದಲ್ಲಿ ಸರಿಸುಮಾರು ೩೦,೦೦೦ ಹಿರಿಯ ನಾಗರಿಕರು ಮತ್ತು ೨೧,೦೦೦ ದೈಹಿಕ ವಿಶೇಷಚೇತನ ಮತದಾರರು ಮನೆಮನೆ ಮತದಾನಕ್ಕೆ ಅರ್ಹರಾಗಿದ್ದರೂ, ಕೂಡ ೨,೪೬೧ ಹಿರಿಯ ನಾಗರಿಕರು ಮತ್ತು ೯೫೪ ದೈಹಿಕ ವಿಕಲಚೇತನರು ಮಾತ್ರ ನೋಂದಾಯಿಸಿಕೊAಡಿದ್ದಾರೆ.

ನಾವು ವೋಟ್ ಮಾಡದಿದ್ದರೆ ಏನೂ ಆಗುವುದಿಲ್ಲ ಎಂಬ ಉದಾಸೀನ ಭಾವ ಕೆಲವರಲ್ಲಿ ಬೇರೂರಿದೆ. ಒಂದು ಮತ ಕೂಡ ಅಭ್ಯರ್ಥಿಯ ಸೋಲು-ಗೆಲುವು ನಿರ್ಧರಿಸುತ್ತದೆ.

ಒಂದು ವೋಟ್‌ನಿಂದ ಸೋತ ಹಲವಾರು ನಿದರ್ಶನಗಳು ನಮ್ಮ ಕಣ್ಣಮುಂದಿವೆ.

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ೨೦ ಲಕ್ಷ ಮತದಾರರು ಇದ್ದಾರೆ. ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಶೇಕಡಾ ೬೯.೫೧ ರಷ್ಟು ಮತದಾನವಾಗುವ ಮೂಲಕ ೧೩,೧೮,೧೦೩ ಮತ ಚಲಾವಣೆಯಾಗಿತ್ತು. - ಕೆ.ಎಂ ಇಸ್ಮಾಯಿಲ್ ಕಂಡಕರೆ