ವೀರಾಜಪೇಟೆ, ಏ. ೧೨: ದಾಖಲೆ ಇಲ್ಲದೆ ಕೊಂಡೊಯ್ಯುತ್ತಿದ್ದ ನಗದನ್ನು ಚುನಾವಣಾ ಅಧಿಕಾರಿಗಳು ವಶಪಡಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

ವೀರಾಜಪೇಟೆ ಪೆರುಂಬಾಡಿ ತಪಾಸಣೆ ಕೇಂದ್ರದಲ್ಲಿ ಘಟನೆ ನಡೆದಿದ್ದು, ರೂ. ೯೫,೫೦೦ ಅನ್ನು ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ಪೆರುಂಬಾಡಿ ಪೊಲೀಸ್ ತಪಾಸಣೆ ಕೇಂದ್ರದಲ್ಲಿ ವಾಹನಗಳ ಪರಿಶೀಲನೆ ಸಂದರ್ಭ ಕೇರಳ ರಾಜ್ಯದಿಂದ ತಾ. ೧೧ ರಂದು ಮಧ್ಯರಾತ್ರಿ ೧೨ ಗಂಟೆ ವೇಳೆಯಲ್ಲಿ ಡಸ್ಟರ್ ಕಾರಿನಲ್ಲಿ (ಕೆಎಲ್-೬೦ಪಿ-೬೩೫೭) ಇರಿಟಿ ಮೂಲದ ರಂಶೀದ್ ಎಂಬವರು ದಾಖಲೆ ಇಲ್ಲದೆ ಹಣವನ್ನು ಮೈಸೂರಿಗೆ ಕೊಂಡೊಯ್ಯುತ್ತಿರುವುದು ಪತ್ತೆಯಾಗಿದೆ. ವಶಕ್ಕೆ ಪಡೆದಿರುವ ಹಣವನ್ನು ಉಪ ಖಜಾನೆ ಅಧಿಕಾರಿಗಳಿಗೆ ಒಪ್ಪಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ತಪಾಸಣೆ ಕೇಂದ್ರದಲ್ಲಿ ಕಣ್ಗಾವಲು ತಂಡದ ಶಿಕ್ಷಣ ಇಲಾಖೆಯ ವೆಂಕಟೇಶ್, ಕೃಷಿ ಇಲಾಖೆಯ ಅಶ್ವಿನ್ ಕುಮಾರ್ ಮತ್ತು ಪೊಲೀಸ್ ಸಿಬ್ಬಂದಿಗಳು ಹಾಜರಿದ್ದರು.