ಕುಶಾಲನಗರ, ಏ.೧೨: ಪಟ್ಟಣ ವ್ಯಾಪ್ತಿಯ ಎರಡು ಬಡಾವಣೆಗಳಲ್ಲಿ ಬುಧವಾರ ರಾತ್ರಿ ಸರಣಿ ಕಳ್ಳತನ ನಡೆದಿದೆ.

ಕುಶಾಲನಗರ ಪಟ್ಟಣ ಠಾಣಾ ವ್ಯಾಪ್ತಿಯ ಸ್ವಾಮಿ ಬಡಾವಣೆಯ ಮಹಿಳೆ ಒಬ್ಬರ ಮನೆಯಲ್ಲಿ ಕಳ್ಳತನ ನಡೆದಿದ್ದು, ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಗೊಂದಿಬಸವನಹಳ್ಳಿಯ ವಿಮಲ ವೀರಪ್ಪ ಬಡಾವಣೆಯಲ್ಲಿ ಸೈನಿಕ ಪೂರ್ಣಯ್ಯ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಚಿಣ್ಣಪ್ಪ ಎಂಬವರಿಗೆ ಸೇರಿದ ಮನೆಗಳ ಬಾಗಿಲು ಮುರಿದು ಒಟ್ಟು ಮೂರು ಕಡೆ ಕಳ್ಳತನ ಮಾಡಿರುವ ಬಗ್ಗೆ ವರದಿಯಾಗಿದೆ.

ಮನೆಯ ಎದುರು ಬಾಗಿಲನ್ನು ಮುರಿದು ಒಳನುಗ್ಗಿರುವ ಕಳ್ಳರು ನಗದು, ಬೆಲೆಬಾಳುವ ಆಭರಣಗಳಿಗಾಗಿ ಮನೆಯಲ್ಲಿರುವ ಗಾಡ್ರೆಜ್‌ಗಳನ್ನು ಜಾಲಾಡಿದ್ದಾರೆ. ಈ ಸಂದರ್ಭ ಚಿನ್ನಾಭರಣಗಳು ದೊರಕದೆ ಪೂಜಾ ಕೊಠಡಿಯಿಂದ ಬೆಳ್ಳಿಯ ದೀಪಗಳನ್ನು ಹೊತ್ತೊಯ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕುಶಾಲನಗರ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸ್ವಾಮಿ ಬಡಾವಣೆಯಲ್ಲಿ ಮನೆಯೊಂದಕ್ಕೆ ಕಳ್ಳರು ಕನ್ನ ಹಾಕಿದ್ದಾರೆ. ಮನೆ ಮಾಲೀಕರು ಆಸ್ಪತ್ರೆಗೆ ತೆರಳಿದ ಸಂದರ್ಭ ಮನೆಗೆ ನುಗ್ಗಿ ಅಲ್ಪ ಮೊತ್ತದ ನಗದು ಕಳ್ಳತನ ಮಾಡಲಾಗಿದೆ. ಈ ಮನೆಯ ಮಾಲೀಕರಾದ ಹರಿಣಿ ಎಂಬ ಮಹಿಳೆ ಅನಾರೋಗ್ಯದಿಂದ ಬುಧವಾರ ಬೆಂಗಳೂರಿನಲ್ಲಿ ಮೃತಪಟ್ಟಿದ್ದು ಕಳ್ಳತನ ಮೊತ್ತ ಅಂದಾಜಿಸುವ ಕಾರ್ಯ ಸಾಧ್ಯವಾಗಿಲ್ಲ. ಘಟನಾ ಸ್ಥಳಗಳಿಗೆ ಶ್ವಾನ ದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.