ಗೋಣಿಕೊಪ್ಪಲು, ಏ. ೧೧: ಹುಲಿ ಸೆರೆ ಕಾರ್ಯಾಚರಣೆ ನಡೆಸಲು ಸಾಕಾನೆಗಳ ಸಹಾಯದಿಂದ ಅರಣ್ಯ ಪ್ರದೇಶಕ್ಕೆ ತೆರಳಿದ ವೇಳೆ ಹೆಜ್ಜೇನು ಹಿಂಡು ದಾಳಿ ನಡೆಸಿದ ಘಟನೆ ದಕ್ಷಿಣ ಕೊಡಗಿನ ಹರಿಹರ ಗ್ರಾಮದಲ್ಲಿ ನಡೆದಿದೆ.
ಕಾರ್ಯಾಚರಣೆಯಲ್ಲಿದ್ದ ದುಬಾರೆಯ ಡಿ.ಆರ್.ಎಫ್.ಒ. ಹಾಗೂ ಅರವಳಿಕೆ ಪ್ರಯೋಗದಲ್ಲಿ ನಿಸ್ಸೀಮರಾಗಿರುವ ಶಾರ್ಪ್ಶೂಟರ್ ರಂಜನ್ ಮೇಲೆ ಹೆಜ್ಜೇನು ದಾಳಿ ನಡೆಸಿರುವುದರಿಂದ ಅವರನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ. ಇನ್ನುಳಿದ ಸಿಬ್ಬಂದಿ ಅಪಾಯದಿಂದ ಪಾರಾಗಿದ್ದಾರೆ. ಕಾರ್ಯಾಚರಣೆಯನ್ನು ಮುಂದುವರೆಸಲಾಗಿದೆ.
ಕಳೆದ ಎರಡು ದಿನಗಳ ಹಿಂದೆ ಹರಿಹರ ಗ್ರಾಮದ ದೇವಾಲಯದ ಕೆರೆಯ ಸಮೀಪ ಮುಂಜಾನೆಯ ವೇಳೆ ಸ್ಥಳೀಯರಿಗೆ ಹುಲಿಯೊಂದು ಕಂಡು ಬಂದಿತ್ತು. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಹುಲಿ ಪತ್ತೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿದ ಪೊನ್ನಂಪೇಟೆ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಹುಲಿ ಸೆರೆಗೆ ಕಾರ್ಯಾಚರಣೆಗೆ ಮುಂದಾದರು.
ಗುರುವಾರ ಮುಂಜಾನೆ ಹುಲಿ ಸೆರೆಗೆ ಶಿಬಿರದಿಂದ ಭೀಮ ಹಾಗೂ ಮಹೇಂದ್ರ ಎಂಬ ಸಾಕಾನೆಗಳ ಸಹಾಯ ಪಡೆದು ಅರಣ್ಯ ಇಲಾಖೆಯ ವೈದ್ಯರ ತಂಡ, ಶಾರ್ಪ್ಶೂಟರ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಹರಿಹರ ಗ್ರಾಮದ ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿ ಕಾರ್ಯಚರಣೆ ಆರಂಭಿಸಿದ್ದರು. ಈ ವೇಳೆ ದಟ್ಟ ಕಾಡಿನ ನಡುವೆ ಹೆಜ್ಜೇನು ಹಿಂಡು ಸಾಕಾನೆ ಭೀಮನ ಮೇಲೆ ಮೊದಲು ದಾಳಿ ಆರಂಭಿಸಿದೆ. ಇದರಿಂದ ಆನೆ ಹಾಗೂ ಸಿಬ್ಬಂದಿ ಬೆದರಿ ಸ್ಥಳದಿಂದ ದಿಕ್ಕಾಪಾಲಾಗಿ ಓಡಿದ್ದಾರೆ. ಆನೆಯೊಂದಿಗಿದ್ದ ಅರಣ್ಯ ಅಧಿಕಾರಿ ಕನ್ನಂಡ ರಂಜನ್ ಹಾಗೂ ಮಾವುತ ಕುಳ್ಳನ ಮೇಲೆ ದಾಳಿ ನಡೆಸಿದೆ. ಈ ವೇಳೆ ರಂಜನ್ ಅವರಿಗೆ ಗಂಭೀರ ಗಾಯಗೊಂಡಿದ್ದು,೩ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಮಡಿಕೇರಿ ಜಿಲ್ಲಾಸ್ಪತ್ರಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಯಿತು. ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು ಚೇತರಿಸಿಕೊಳ್ಳುತ್ತಿದ್ದಾರೆ. ಉಳಿದವರು ಓಡಿ ಹೆಚ್ಚಿನ ಅಪಾಯದಿಂದ ಪಾರಾಗಿದ್ದು, ಸಣ್ಣಪುಟ್ಟ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು.
ಮುಂದುವರೆದ ಕಾರ್ಯಾಚರಣೆ
ಘಟನೆ ನಂತರವೂ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ಮುಂದುವರೆಸಿದೆ. ವಿಪರೀತ ಬಿಸಿಲಿನ ತಾಪವನ್ನು ಸಹಿಸಿಕೊಳ್ಳಲು ಸಾಧ್ಯವಾಗದ ಹುಲಿಗಳು ಅರಣ್ಯ ಪ್ರದೇಶದಿಂದ ನೀರಿನ ತೇವಾಂಶವಿರುವ ಕೆರೆ, ಹೊಳೆ ಬದಿ ಹಾಗೂ ತಂಪಾದ ಕಾಫಿ ತೋಟದಲ್ಲಿ ಆಗಿಂದ್ದಾಗೆಯೇ ನಾಗರಿಕರಿಗೆ ಕಾಣಿಸಿಕೊಳ್ಳುತ್ತಿದೆ. ಮುಂಜಾಗ್ರತ ಕ್ರಮವಾಗಿ ೩೦ಕ್ಕೂ ಅಧಿಕ ಸಿಬ್ಬಂದಿಗಳು ಹರಿಹರ ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಕೂಂಬಿAಗ್ ಮುಂದುವರೆಸುತ್ತಿದ್ದಾರೆ.
ಈ ಭಾಗದಲ್ಲಿ ಹುಲಿಗಳು ಪ್ರತ್ಯಕ್ಷವಾಗುತ್ತಿರುವುದರಿಂದ ಸಹಜವಾಗಿಯೇ ನಾಗರಿಕರಿಗೆ ಭಯದ ವಾತಾವರಣ ನಿರ್ಮಾಣವಾಗಿದೆ. ಈ ಗ್ರಾಮದ ಜನರು ರಾತ್ರಿಯ ವೇಳೆಯಲ್ಲಿ ಹೊರ ಬರುವುದು, ಓಡಾಟ ನಡೆಸುವುದನ್ನು ಸದ್ಯದ ಮಟ್ಟಿಗೆ ಸ್ಥಗಿತಗೊಳಿಸಿದ್ದಾರೆ. -ಹೆಚ್.ಕೆ.ಜಗದೀಶ್