ಪ್ರಮುಖ ಎರಡು ಹಬ್ಬಗಳು ಈದುಲ್ ಫಿತರ್ (ರಂಜಾನ್) ಮತ್ತು ಈದುಲ್ ಅದ್ಹಾ (ಬಕ್ರೀದ್). ಈ ಎರಡು ಆಚರಣೆಗಳಿಗೂ ವಿಶೇಷವಾದ ಹಿನ್ನೆಲೆ ಮತ್ತು ಪ್ರಾಮುಖ್ಯತೆ ಇದೆ. ರಂಜಾನ್ ಅಥವಾ ಈದುಲ್-ಫಿತರ್ ಬಹಳ ಪ್ರಾಮುಖ್ಯತೆ ಹೊಂದಿರುವ ಹಬ್ಬವಾಗಿದ್ದು, ಮುಸಲ್ಮಾನರ ಧಾರ್ಮಿಕ ಗ್ರಂಥ ಪವಿತ್ರ ಕುರಾನ್, ಪ್ರವಾದಿ ಪೈಗಂಬರ್ ಮುಹಮ್ಮದ್ ಮುಸ್ತಫ ಸ್ವಲ್ಲಲ್ಲಾಹು ಅಲೈವ ಸ್ವಲ್ಲಮರ ಮುಖಾಂತರ ಅವತೀರ್ಣಗೊಂಡ ತಿಂಗಳೇ ರಂಜಾನ್ ತಿಂಗಳು.
ಇದು ಇಸ್ಲಾಮಿಕ್ ಕ್ಯಾಲೆಂಡರಿನ ಒಂಭತ್ತನೇ ತಿಂಗಳು. ಕುರಾನ್ ಅವತೀರ್ಣಗೊಂಡ ಸವಿ ನೆನಪಿಗಾಗಿ ಆಚರಿಸುತ್ತಿ ರುವ ಈದುಲ್ ಫಿತರ್ ಹಬ್ಬವು ರಂಜಾನ್ ತಿಂಗಳು ಪೂರ್ತಿ ಒಂದು ನಿರ್ದಿಷ್ಟ ಸಮಯದವರೆಗೆ ಅಂದರೆ, ಸೂರ್ಯೋದಯದಿಂದ ಸೂರ್ಯಾಸ್ತಮದ ವರೆಗೆ ಅನ್ನ ಪಾನೀಯ ಮತ್ತು ಲೈಂಗಿಕ ಆಸಕ್ತಿಯಿಂದ ದೂರ ಇದ್ದು, ಕಠಿಣವ್ರತಾಚರಣೆಯ ಬಳಿಕ ಶವ್ವಾಲ್ ತಿಂಗಳ ಮೊದಲ ದಿನದ ಆಚರಣೆ ಯಾಗಿದೆ. ಇಸ್ಲಾಮಿನ ತಿಂಗಳ ಲೆಕ್ಕಾಚಾರಗಳು ಚಂದ್ರ ದರ್ಶನದ ಮೇಲೆ ಅವಲಂಬಿತವಾಗಿದ್ದು, ಶವ್ವಾಲ್ ಮಾಸದ ಚಂದ್ರ ದರ್ಶನವಾದ ಕ್ಷಣದಿಂದ ಈದ್ ಆಚರಣೆಯ ಸಿದ್ದತೆಯಾಗಲಿದೆ. ಆ ದಿನ ಉಪವಾಸ ಇರುವುದು ನಿಷಿದ್ಧವಾಗಿದೆ.
ಐದು ಆಧಾರ ಸ್ತಂಬಗಳು: ಇಸ್ಲಾಂ ಧರ್ಮವು ಪ್ರಮುಖ ಐದು ಕಡ್ಡಾಯ ಕರ್ಮಗಳ ಆಧಾರದಲ್ಲಿ ನೆಲೆ ನಿಂತಿದ್ದು, ಏಕ ದೈವ ವಿಶ್ವಾಸ (ಶಹಾದತ್), ನಮಾಜ್ (ಸ್ವಲಾಹ್), ದಾನ (ಝಕಾತ್), ಉಪವಾಸ (ಸೌಮ್) ಮತ್ತು ಮೆಕ್ಕಾ ಪ್ರವಾಸ (ಹಜ್) ಯಾತ್ರೆಯಾಗಿದೆ. ಈ ಐದು ಕಂಬಗಳಲ್ಲಿ ನಾಲ್ಕನೆಯ ಕಂಬವಾದ ಸಿಯಾಮ್ ಅಥವಾ ಸೌಮ್ (ಉಪವಾಸ) ರಂಜಾನ್ ತಿಂಗಳ ಪ್ರಮುಖ ಆಚರಣೆಯಾಗಿದೆ. ರಂಜಾನ್ ಎಂಬುವುದು ತಿಂಗಳ ಹೆಸರಾಗಿದ್ದು, ಹಬ್ಬಾಚರಣೆಯಲ್ಲ. ಇಸ್ಲಾಂ ಧರ್ಮದ ೯ನೇ ತಿಂಗಳಿನಲ್ಲಿ ಪ್ರವಾದಿ ಮುಹಮ್ಮದ್ (ಸ್ವಅ) ರಿಗೆ ಅಲ್ಲಾಹು ಸುಬ್ಹಾನಹೂ ವತಹಲಾ ಪವಿತ್ರ ಕುರಾನ್ನ ಸೂಕ್ತಿಗಳನ್ನು ಪ್ರಪಂಚದ ಒಳಿತಿಗಾಗಿ ಜಿಬ್ರೀಲ್ ಅಲೈಸಲಾಂ ಮುಖಾಂತರ ಕಳುಹಿಸಿ ಕೊಟ್ಟ ಕಾರಣಕ್ಕೆ ಈ ತಿಂಗಳನ್ನು ಅತ್ಯಂತ ಪವಿತ್ರ ತಿಂಗಳಾಗಿ ಪರಿಗಣಿಸಲಾಗಿದೆ. ಮಾತ್ರವಲ್ಲ ಈ ತಿಂಗಳು ಪೂರ್ತಿ ಮುಸಲ್ಮಾನರು ಕಡ್ಡಾಯ ಕಠಿಣ ವ್ರತ ಆಚರಿಸಬೇಕಿದೆ. ಇದು ಧರ್ಮದ ಆದೇಶವಾಗಿದ್ದು, ಸಣ್ಣ ಮಕ್ಕಳು, ಸ್ತಿçÃಯರ ವಿಶೇಷ ಸಂದರ್ಭ, ವಿಶೇಷ ಚೇತನರು ಸೇರಿದಂತೆ ಕೆಲವು ವ್ಯಕ್ತಿಗಳನ್ನು ಹೊರತುಪಡಿಸಿ ಪ್ರತಿಯೊಬ್ಬರೂ ಕಡ್ಡಾಯವಾಗಿ ವ್ರತಾಚರಣೆ ಮಾಡಲೇ ಬೇಕಿದೆ. ಪ್ರಬಲ ಕಾರಣದೊಂದಿಗೆ ಕೆಲವೊಬ್ಬರಿಗೆ ರಿಯಾಯಿತಿಯಿದ್ದರೂ ಅವರು ಮತ್ತೆ ಅದನ್ನು ತೀರಿಸಬೇಕಿದೆ. ಪ್ರಭಾತ ಕಾಲದಿಂದ ಹಿಡಿದು ಸೂರ್ಯಾಸ್ತಮದವರೆಗೆ, ಅಂದಾಜು ೧೩ ಗಂಟೆಗಳ ಕಾಲ ತನ್ನ ದೇಹ ಮತ್ತು ಮನಸ್ಸನ್ನು ಹತೋಟಿಯಲ್ಲಿಟ್ಟು ಅನ್ನ, ಪಾನೀಯಗಳನ್ನು ತ್ಯಜಿಸುವ ಮೂಲಕ ದೇಹದಂಡನೆ ಮಾಡಬೇಕಿದೆ. ಇದಕ್ಕಾಗಿ ಪ್ರತಿಯೊಬ್ಬ ಮುಸಲ್ಮಾನರು ಮಾನಸಿಕ ಹಾಗೂ ದೈಹಿಕವಾಗಿ ತಯಾರಾಗ ಬೇಕಿದೆ. ಸ್ವೇಚ್ಚೆ, ಸ್ವಾರ್ಥ, ಮದ, ಮತ್ಸರ, ಕಾಮ, ಕ್ರೌರ್ಯ, ಅಸೂಯೆ ಮುಂತಾದ ಮಾನವೀಯ ದೌರ್ಬಲ್ಯಗಳಿಂದ ಮನುಷ್ಯನನ್ನು ಮುಕ್ತಿಗೊಳಿಸಿ ದೇಹ ಮತ್ತು ಆತ್ಮವನ್ನು ಪವಿತ್ರಗೊಳಿಸಿ ತಾನು ಮಾಡಿದ ದುಷ್ಕೃತ್ಯಗಳಿಗೆ ದೇವರಲ್ಲಿ ಕ್ಷಮೆ ಯಾಚಿಸಿ ಪಾವನರಾಗುವ ಅವಕಾಶ ಕೂಡಾ ಈ ಆಚರಣೆಯ ಮೂಲಕ ಕಲ್ಪಿಸಲಾಗಿದೆ.
ಈದುಲ್ ಫಿತರ್: ರಂಜಾನ್ ಹಬ್ಬವೆಂದು ಪ್ರಚಲಿತದಲ್ಲಿರುವ ಹಬ್ಬವೇ ಈದುಲ್ ಫಿತರ್ ಅಂದರೆ ದಾನ್ಯಗಳನ್ನು ದಾನ ನೀಡುವ ಹಬ್ಬ. ಬಡವ ಬಲ್ಲಿದನೆಂಬ ಬೇಧಬಾವವಿಲ್ಲದೆ ಪ್ರತಿಯೊಬ್ಬರೂ ಕಡ್ಡಾಯವಾಗಿ, ಉಪವಾಸವಿದ್ದು, ಹಸಿವಿನ ಕಠಿಣತೆಯನ್ನು ಅರಿತು, ಅದರ ಮೂಲಕ ಹಸಿದವನ ಸಂಕಷ್ಟವನ್ನು ಅರಿಯ ಬೇಕೆಂಬುದೇ ಈದುಲ್ ಫಿತರ್ನ ಪ್ರಮುಖ ಸಂದೇಶ. ಒಬ್ಬ ಮುಸಲ್ಮಾನ ಈದ್ ದಿನದಂದು ತನ್ನ ಸಂಸಾರದ ಖರ್ಚಿಗೆ ಬೇಕಿರುವ ದಾನ್ಯ ಸಂಪತ್ತನ್ನು ಹೊರತುಪಡಿಸಿ ಆತನಲ್ಲಿ ಉಳಿದಿರುವ ವಸ್ತುಗಳ ಮೇಲೆ ಆತ ಕಡ್ಡಾಯವಾಗಿ ದಾನ ನೀಡಬೇಕಿದೆ. ಮುದ್ದ್ (೭೦೦ಮಿ.ಲೀ. ಅಳತೆಯ ಪಾತ್ರೆ) ಲೆಕ್ಕದಲ್ಲಿ ದವಸ ದಾನ್ಯಗಳನ್ನು ದಾನ ನೀಡಬೇಕಿದೆ. ಒಂದು ಕುಟುಂಬದ ತಲಾ ವ್ಯಕ್ತಿಯ ಮೇಲೆ ನಾಲ್ಕು ಮುದ್ದ್ (ಅಕ್ಕಿಯ ಅಳತೆಯು ಅಂದಾಜು ೩ಕೆಜಿ) ದಾನ ಕಡ್ಡಾಯವಾಗಿದೆ. ನಾಲ್ಕು ಮುದ್ದ್ ಅನ್ನು ಒಂದು ಸ್ವಾಹ್ ಎಂದು ಪರಿಗಣಿಸಲಾಗಿದ್ದು, ಒಬ್ಬ ವ್ಯಕ್ತಿಗೆ ಒಂದು ಸ್ವಾಹ್ ದಾನ್ಯ ನೀಡುವುದು ಕಡ್ಡಾಯ. ಅದು ಆ ಗ್ರಾಮ ಅಥವಾ ಪರಿಸರದಲ್ಲಿ ಅತ್ಯಂತ ಬಳಕೆಯಲ್ಲಿರುವ ಆಹಾರವೇ ನೀಡ ಬೇಕಿದೆ. ಉದಾಹರಣೆಗೆ ಕುಸಲಕ್ಕಿ ಹೆಚ್ಚು ಉಪಯೋಗಿಸುವ ಪ್ರದೇಶದಲ್ಲಿ ಅದನ್ನೇ ನೀಡಬೇಕು. ಈದ್ ದಿನದಂದು ಯಾರೂ ಕೂಡಾ ಹಸಿವಿನಿಂದ ಇರ ಕೂಡದು ಹಾಗೂ ಉಪವಾಸ ವ್ರತಾಚರಣೆಯಲ್ಲಿ ಉಂಟಾಗುವ ನ್ಯೂನತೆಗಳ ಪರಿಹಾರ ವಾಗಿಯೂ ಫಿತರ್ ಝಕಾತನ್ನು ಪರಿಗಣಿಸಲಾಗಿದೆ. ಶವ್ವಾಲ್ ಚಂದ್ರ ದರ್ಶನವಾದ ಸಮಯದಿಂದ ಹಬ್ಬದ ನಮಾಜ್ವರೆಗಿನ ಸಮಯ ದೊಳಗೆ ದಾನ್ಯಗಳನ್ನು ದಾನ ಮಾಡುವ ಸಮಯ ನಿಗದಿಪಡಿಸಲಾಗಿದೆ. ದಾನ್ಯದ ಬದಲು ಹಣ ನೀಡಿದ್ದಲ್ಲಿ ಫಿತರ್ ಝಕಾತ್ ಸಿಂಧುವಾಗುವುದಿಲ್ಲ.
ಝಕಾತ್: ಪ್ರತಿಯೊಬ್ಬ ಮುಸಲ್ಮಾನನು ತನ್ನ ಆಸ್ತಿ ಸೇರಿದಂತೆ ಇತರ ಎಲ್ಲಾ ಮೂಲಗಳ ವಾರ್ಷಿಕ ಆದಾಯದ ನಿರ್ದಿಷ್ಟ ಪ್ರಮಾಣವನ್ನು ಕಡ್ಡಾಯ ದಾನ ಮಾಡುವುದೇ ಝಕಾತ್. ಆದಾಯ ಮತ್ತು ಆಸ್ತಿಯ ಮೌಲ್ಯಕ್ಕೆ ಅನುಗುಣವಾಗಿ ಝಕಾತ್ ನಿರ್ಧರಿಸಲಿದೆ. ಒಬ್ಬ ಮುಸಲ್ಮಾನನ ವಾರ್ಷಿಕ ಒಟ್ಟು ಆದಾಯದ ೨.೫% ಅಥವಾ ೧/೪೦ ಭಾಗ ಕಡ್ಡಾಯವಾಗಿ ದಾನ ನೀಡಬೇಕಿದೆ. ಇದು ಕೂಡಾ ಪ್ರಾರ್ಥನೆಯ ಒಂದು ಭಾಗವಾಗಿ ಪರಿಗಣಿಸ ಲಿದೆ. ಇದು ಇಸ್ಲಾಮಿನ ಮೂರನೇ ಕಡ್ಡಾಯ ಕರ್ಮವಾಗಿದ್ದು, ಉಪವಾಸ ಆಚರಣೆಗೂ ಪ್ರಮುಖವಾಗಿ ಝಕಾತ್ ನೀಡುವುದು ಕಡ್ಡಾಯವಾಗಿದೆ. ಈ ಕಾರಣಕ್ಕಾಗಿಯೇ ಉಪವಾಸಕ್ಕೂ ಮೊದಲಿನ ಕಡ್ಡಾಯ ಕರ್ಮವಾಗಿ ಝಕಾತನ್ನು ಪರಿಗಣಿಸಲಾಗಿದೆ. ಫಿತರ್ ಝಕಾತ್ ದಾನ್ಯಗಳ ದಾನವಾದರೆ, ಝಕಾತ್ ಹಣದ ದಾನವಾಗಿದೆ. ಸಮಾಜದಲ್ಲಿನ ಬಡತನದ ನಿರ್ಮೂಲನೆಗಾಗಿ ಇಸ್ಲಾಂ ಧರ್ಮವು ಕೈಗೊಂಡ ವಿಶೇಷ ರೀತಿಯ ದಾನ ಇದಾಗಿದ್ದು, ಇಸ್ಲಾಂ ಸಂಪತ್ತಿನ ಕ್ರೋಢೀಕರಣವನ್ನು ವಿರೋಧಿಸುತ್ತದೆ. ಶ್ರೀಮಂತರು ಬಡವರಿಗೆ ಕಡ್ಡಾಯವಾಗಿ ದಾನ ನೀಡಬೇಕೆಂಬುದು ಧಾರ್ಮಿಕ ಬಾದ್ಯತೆಯಾಗಿದೆ. ಒಬ್ಬ ಮುಸಲ್ಮಾನ ತನ್ನ ಆಸ್ತಿ ಸೇರಿದಂತೆ ವಾರ್ಷಿಕ ಆದಾಯವು ೮೭.೪೮ಗ್ರಾಂ ಚಿನ್ನದ ಮೌಲ್ಯ ಅಥವಾ ೬೧೨.೩೬ಗ್ರಾಂ ಬೆಳ್ಳಿಯ ಮೌಲ್ಯದ ಹೊಸ್ತಿಲು ದಾಟಿ ಉಳಿದ ಆದಾಯಕ್ಕೆ ಕಡ್ಡಾಯವಾಗಿ ಝಕಾತ್ ನೀಡಬೇಕಿದೆ. ಝಕಾತ್ ನೀಡಲು ಚಂದ್ರ ವರ್ಷ ಪೂರೈಕೆಯಾಗ ಬೇಕಿದ್ದು, ಇಂತಿಷ್ಟೇ ತಿಂಗಳಲ್ಲಿ ನೀಡಬೇಕೆಂದಿಲ್ಲ. ಆದರೆ ಬಹುತೇಕರು ರಂಜಾನ್ ತಿಂಗಳಿನಲ್ಲಿಯೇ ಝಕಾತ್ ನೀಡುತ್ತಾರೆ. ಕಾರಣ ಈ ತಿಂಗಳು ಧಾರ್ಮಿಕ ಕಾರ್ಯಗಳನ್ನು ಹೆಚ್ಚು ಹೆಚ್ಚಾಗಿ ಮಾಡಲು ಇಚ್ಚಿಸುತ್ತಾರೆ. ಮತ್ತು ಅದಕ್ಕೆ ಉಳಿದ ತಿಂಗಳಿಗಿAತಲೂ ಪುಣ್ಯ ಸಿಗಲಿದೆ ಎಂಬ ನಂಬಿಕೆಯೂ ಇದೆ. ಒಟ್ಟಿನಲ್ಲಿ ಇಸ್ಲಾಂ ಧರ್ಮದ ಆಚರಣೆಗಳು ದಾನ ಧರ್ಮದ ಆಧಾರ ದಲ್ಲಿ ನೆಲೆ ನಿಂತಿದ್ದು, ಈದುಲ್ ಫಿತರ್ ದಾನ್ಯಗಳನ್ನು ದಾನ ಮಾಡುವ ಮೂಲಕ ಬಡತನದ ನಿರ್ಮೂಲನೆಗೆ ಒತ್ತು ನೀಡುತ್ತದೆ. ತ್ಯಾಗ ಮತ್ತು ಬಲಿದಾನದ ಸಂಕೇತವಾದ ಬಕ್ರಿದ್ ಹಬ್ಬವೂ ದಾನವನ್ನು ಪ್ರೋತ್ಸಾಹಿಸುತ್ತದೆ.
ಹಬ್ಬಾಚರಣೆ: ಪ್ರಪಂಚದಾದ್ಯAತ ಮುಸಲ್ಮಾನರು ಈದುಲ್ ಫಿತರ್ ಹಬ್ಬವನ್ನು ಪ್ರಾರ್ಥನೆಯ ಮೂಲಕ ಆಚರಿಸುತ್ತಾರೆ. ಈದ್ ದಿನದಂದು ಪ್ರತಿ ಮಸೀದಿಗಳಲ್ಲಿಯೂ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಕೆಲವೊಂದು ಪ್ರದೇಶಗಳಲ್ಲಿ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ನೆರವೇರಿಸ ಲಾಗುತ್ತದೆ. ಹೊಸ ಬಟ್ಟೆ ಧರಿಸಿ, ಸುಗಂಧ ದ್ರವ್ಯಗಳನ್ನು ಲೇಪಿಸಿ ಮಸೀದಿಗೆ ತೆರಳುತ್ತಾರೆ. ಪರಸ್ಪರ ಒಬ್ಬರಿಗೊಬ್ಬರು ತಬ್ಬಿಕೊಂಡು ಈದ್ ಶುಭಾಶಯ ತಿಳಿಸುವುದು, ಮರಣ ಹೊಂದಿದವರ ಸಮಾದಿ ಬಳಿ ತೆರಳಿ ಅವರಿಗಾಗಿ ಪ್ರಾರ್ಥನೆ ಸಲ್ಲಿಸುವುದು. ನೆಂಟರು, ಸಂಬAಧಿಕರು ಮತ್ತು ಕುಟುಂಬ ಸದಸ್ಯರ ಮನೆಗಳಿಗೆ ತೆರಳಿ ಹಬ್ಬದೂಟವನ್ನು ಸವಿಯುವುದೇ ಪ್ರಮುಖ ಆಚರಣೆಯಾಗಿದೆ. -ಎಂ. ಎಂ. ಅಜೀಜ್, ಸಿದ್ದಾಪುರ.