ಕಣಿವೆ, ಏ. ೧೧ : ಕಾವೇರಿ ನದಿ ದಂಡೆಯ ಕುಶಾಲನಗರದಲ್ಲಿ ಹಿಂದೆAದು ಕಂಡು, ಕೇಳರಿಯದ ಜಲ ದಾಹ ತಲೆದೋರಿದೆ. ಪಟ್ಟಣದ ಬಹುತೇಕ ಬಡಾವಣೆಗಳಲ್ಲಿ ಮನೆ ಮನೆಗಳಲ್ಲಿ ಇದ್ದಂತಹ ಕೊಳವೆ ಬಾವಿಗಳಲ್ಲಿ ಕೂಡ ನೀರಿಲ್ಲದೇ ಸ್ಥಗಿತಗೊಂಡಿವೆ.

ಕಾವೇರಿ ನದಿಯಲ್ಲಿ ನೀರು ಸ್ಥಗಿತಗೊಂಡು ತಿಂಗಳು ಕಳೆಯಿತು. ಹಾಗಾಗಿ ಅಂತರ್ಜಲ ಪ್ರಪಾತಕ್ಕಿಳಿದಿದೆ. ಕುಶಾಲನಗರ ಜಲಮಂಡಳಿ ವತಿಯಿಂದ ಟ್ರಾö್ಯಕ್ಟರ್‌ಗಳಲ್ಲಿ ಕುಡಿಯುವ ನೀರು ಪೂರೈಸುವ ಪ್ರಯತ್ನ ಮಾಡುತ್ತಿದ್ದರಾದರೂ ಹೆಚ್ಚು ಜನಸಂಖ್ಯೆ ಹಾಗೂ ಬಡಾವಣೆಗಳುಳ್ಳ ಕುಶಾಲನಗರದ ಜನರಿಗೆ ಸರಾಗವಾಗಿ ನೀರು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ.

ಇನ್ನು ಕಳೆದ ಒಂದು ವರ್ಷದಿಂದಲೂ ಆಡಳಿತ ಮಂಡಳಿಯೇ ಇಲ್ಲದ ಸ್ಥಳೀಯ ಪುರಸಭೆಯಲ್ಲಿ ನಾಗರಿಕರ ನೀರಿನ ಬವಣೆ ನೀಗಿಸುವಂತಹ ಕಾರ್ಯ ಯೋಜನೆ ಆಗುತ್ತಿಲ್ಲ ಎಂಬುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಒಂದೆಡೆ ಚುನಾವಣಾ ಕಾವು ಆದರೆ, ಇನ್ನೊಂದೆಡೆ ಏರುತ್ತಿರುವ ತಾಪಮಾನದ ಬೇಗೆ ಮಂದಿಯ ಒಡಲು ಸುಡುತ್ತಿದೆ.

ನೀರಿಗೆ ಹಾಹಾಕಾರ ಜೋರಾಗಿದ್ದು ಮನೆಯೊಳಗಿನ ಹಳೆ ಬಕೆಟ್, ಹಳೇ ಬಿಂದಿಗೆ, ಹಳೇ ಪ್ಲಾಸ್ಟಿಕ್ ಡ್ರಂ ಗಳ ಧೂಳನ್ನು ಕೊಡಕಿ ಜಲಮಂಡಳಿಯವರು ತಂದು ನೀಡುವ ಹನಿ ನೀರನ್ನು ತುಂಬಿಸಿ ಇಟ್ಟುಕೊಳ್ಳುವಂತಹ ಚಿತ್ರಣ ಕುಶಾಲನಗರದ ಬೀದಿ ಬೀದಿಗಳಲ್ಲಿ ಕಾಣಬರುತ್ತಿದೆ. ಯುಗಾದಿ ಕಳೆದರೂ ಮೋಡದಲ್ಲಿ ಗೋಚರಿಸದ ಮಳೆಗಾಗಿ ಮಂದಿ ದೇವರಲ್ಲಿ ಬೇಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಪರಿಸ್ಥಿತಿ ಇನ್ನು ಒಂದು ತಿಂಗಳ ಕಾಲ ಹೀಗೆಯೇ ಮುಂದುವರೆದಲ್ಲಿ ಇದ್ದ ಬದ್ದ ಕೊಳವೆ ಬಾವಿಗಳೆಲ್ಲಾ ಸಂಪೂರ್ಣ ಸ್ಥಗಿತಗೊಂಡು ಜೀವ ಜಲಕ್ಕಾಗಿ ಹಪ ಹಪಿಸಿ ಕಣ್ಣೀರಿಡುವ ಚಿತ್ರಣವನ್ನು ಅಲ್ಲಗಳೆಯಲಾಗದು. ಒಟ್ಟಾರೆ, ಜೀವ ರಾಶಿಗಳ ಜೀವ ಕೋಟಿಗಳ ಉಳಿವಿಗೆ ವರುಣ ಕೃಪೆ ಮಾಡದೇ ಅನ್ಯ ಮಾರ್ಗವೇ ಇಲ್ಲ.

-ಕೆ.ಎಸ್. ಮೂರ್ತಿ