ಸೋಮವಾರಪೇಟೆ, ಏ. ೮ : ಶ್ರೇಷ್ಠ ಹಾಗೂ ವಿಕಸಿತ ಭಾರತ ನಿರ್ಮಾಣಕ್ಕಾಗಿ ಮತ್ತೊಮ್ಮೆ ನರೇಂದ್ರ ಮೋದಿಯನ್ನು ಬೆಂಬಲಿಸಿ ಎಂದು ಮನವಿ ಮಾಡಿದ ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್, ಕ್ಷೇತ್ರದ ಅಭಿವೃದ್ಧಿಗೆ ಅವಕಾಶ ಲಭಿಸಿದರೆ ಎಲ್ಲರ ಮನೆ ಮಗನಂತೆ ಸೇವೆ ಸಲ್ಲಿಸುತ್ತೇನೆ ಎಂದು ಭರವಸೆ ನೀಡಿದರು.
ಸೋಮವಾರಪೇಟೆ ಮಂಡಲ ಭಾರತೀಯ ಜನತಾ ಪಾರ್ಟಿಯ ವತಿಯಿಂದ ಸೋಮವಾರಪೇಟೆ ಭಾಗದಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಗಳಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪಟ್ಟಣದ ಜೇಸೀ ವೇದಿಕೆಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಯಧುವೀರ್, ಕಳೆದ ೧೦ ವರ್ಷಗಳಲ್ಲಿ ಭಾರತ ಅಭಿವೃದ್ಧಿ, ರಕ್ಷಣೆ, ಉತ್ಪಾದನೆ, ವಿದೇಶೀ ವಿನಿಮಯ, ಆರ್ಥಿಕತೆ, ಯುವ ಸಮುದಾಯದ ಬಲವರ್ಧನೆಯತ್ತ ಹೆಚ್ಚಿನ ಪ್ರಗತಿ ಸಾಧಿಸಿದೆ. ಶ್ರೇಷ್ಠ ಹಾಗೂ ವಿಕಸಿತ ಭಾರತದ ಮುಂದಾಲೋಚನೆಯನ್ನು ಇಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ದೇಶಕ್ಕಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಕೈ ಬಲಪಡಿಸುವ ಕೆಲಸದಲ್ಲಿ ನಾವೆಲ್ಲರೂ ತೊಡಗಿಸಿಕೊಳ್ಳಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಮೈಸೂರು ರಾಜವಂಶಸ್ಥರು ರಾಜಪ್ರಭುತ್ವದ ಕಾಲದಿಂದಲೂ ಜನಸೇವೆ ಮಾಡಿಕೊಂಡು ಬಂದಿದ್ದಾರೆ. ಜನಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಅರಮನೆಯಲ್ಲಿದ್ದರೂ ಪ್ರತಿ ಮನೆಗಳಿಗೆ ತಂದೆ ಸ್ಥಾನದಲ್ಲಿ ನಿಂತು ಸಹಕಾರ ನೀಡಿದ್ದಾರೆ. ಇದೀಗ ಪ್ರಜಾಪ್ರಭುತ್ವವಿದೆ. ತಾನು ಬಿಜೆಪಿ ಅಭ್ಯರ್ಥಿಯಾಗಿದ್ದೇನೆ. ಜನಸೇವೆಗೆ ಅವಕಾಶ ಲಭಿಸಿದರೆ ಕೊಡಗು-ಮೈಸೂರು ಕ್ಷೇತ್ರದ ಪ್ರತಿ ಮನೆಯ ಮಗನಂತೆ ಕೆಲಸ ಮಾಡುತ್ತೇನೆ ಎಂದರು.
ಭಾರತ ವಿಭಜನೆಯ ಶಕ್ತಿಗಳ ವಿರುದ್ಧ ಎಲ್ಲರೂ ಎಚ್ಚರಿಕೆಯಿಂದಿರಬೇಕು. ಶ್ರೇಷ್ಠ ಭಾರತ ನಿರ್ಮಾಣಕ್ಕಾಗಿ ನಾವೆಲ್ಲರೂ ಒಗ್ಗಟ್ಟಾಗಬೇಕು. ಮತದ ಶಕ್ತಿಯಿಂದ ಮಾತ್ರ ದೇಶದ ಭವಿಷ್ಯ ಉಜ್ವಲಗೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ದೇಶಕ್ಕಾಗಿ ಮತ ಚಲಾಯಿಸಬೇಕೆಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಮಾಜಿ ಉಪ ಮುಖ್ಯಮಂತ್ರಿ ಹಾಗೂ ಚುನಾವಣಾ ಉಸ್ತುವಾರಿ ಡಾ. ಅಶ್ವಥ್ನಾರಾಯಣ್ ಸ್ವಾತಂತ್ರö್ಯ ಪೂರ್ವದಲ್ಲಿ ಇಡೀ ದೇಶದಲ್ಲಿಯೇ ಜನಕಲ್ಯಾಣ ಕಾರ್ಯಕ್ರಮಗಳಿಗೆ ಮೈಸೂರು ಅರಸರು ಹೆಸರುವಾಸಿಯಾಗಿದ್ದಾರೆ. ಕೆಆರ್ಎಸ್ ನಿರ್ಮಾಣದಿಂದ ನೀರಾವರಿ ಕ್ಷೇತ್ರದಲ್ಲಿ ಮೈಲಿಗಲ್ಲು ಸಾಧಿಸಿದ್ದಾರೆ. ಆ ವಂಶದ ಕುಡಿ ಯದುವೀರ್ ಅವರು ನಮ್ಮ ಬಿಜೆಪಿ ಅಭ್ಯರ್ಥಿ. ತಂತ್ರಜ್ಞಾನ, ಕ್ರೀಡೆ, ಸಂಸ್ಕೃತಿ, ರಾಜಕೀಯ, ಆರ್ಥಿಕ ತಜ್ಞ, ಯುವ ನಾಯಕರಾಗಿ ಯದುವೀರ್ ಹೆಸರುಗಳಿಸಿದ್ದು, ಮೋದಿ ತಂಡದಲ್ಲಿ ಸಂಸದರಾಗಿ ಆಯ್ಕೆಯಾಗಿ ದೇಶಮೆಚ್ಚುವ ಕೆಲಸ ನಿರ್ವಹಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ಮೋದಿ ಸರ್ಕಾರದ ಜನಪರ ಯೋಜನೆಗಳ ಬಗ್ಗೆ ಪ್ರತಿ ಮನೆಗೂ ತಿಳಿಸಬೇಕು. ನಮ್ಮ ಸರ್ಕಾರವಿದ್ದ ಸಂದರ್ಭ ಕೊಡಗಿನಲ್ಲಿ ಮೆಡಿಕಲ್, ಇಂಜಿನಿಯರಿAಗ್, ಸೈನಿಕ ಶಾಲೆ, ವಿಶ್ವವಿದ್ಯಾಲಯ ಸ್ಥಾಪನೆಯಾಗಿದೆ. ಕೋವಿಡ್ ಸಂದರ್ಭ ೪೦ ಸಾವಿರ ಮಂದಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಕೋವಿಡ್ ಸಂದರ್ಭ ಕಾಂಗ್ರೆಸ್ನವರು ಮನೆ ಬಿಟ್ಟು ಹೊರಬಂದಿರಲಿಲ್ಲ. ಪ್ರಸ್ತುತ ಕೊಡಗಿನಲ್ಲಿ ಅಭಿವೃದ್ಧಿ ಕಾರ್ಯಗಳೇ ನಡೆಯುತ್ತಿಲ್ಲ ಎಂದು ಆರೋಪಿಸಿದರು.
ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯಡಿ ಮಡಿಕೇರಿ ಮತ್ತು ವೀರಾಜಪೇಟೆ ಕ್ಷೇತ್ರಕ್ಕೆ ತಲಾ ೭ ಕೋಟಿ ಅನುದಾನ ಬಿಡುಗಡೆ ಮಾಡಿ ಕಾಮಗಾರಿಗಳಿಗೆ ಕ್ರಿಯಾಯೋಜನೆ ತಯಾರಿಸಿದ್ದೆವು. ಕಾಂಗ್ರೆಸ್ ಶಾಸಕರು ಆ ಕಾಮಗಾರಿಗಳನ್ನು ಬದಲಿಸಿ, ಅದೇ ಅನುದಾನದಲ್ಲಿ ಬೇರೆ ಕಾಮಗಾರಿ ಮಾಡುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಕೊಡಗಿಗೆ ಬಿಡಿಗಾಸೂ ಬಂದಿಲ್ಲ ಎಂದು ದೂರಿದರು.
ಮಾಜಿ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಚುನಾವಣೆ ಸಂದರ್ಭ ಸಿದ್ದರಾಮಯ್ಯ ಅವರು ಪ್ರತಿ ಸದಸ್ಯನಿಗೂ ೧೦ ಕೆ.ಜಿ. ಅಕ್ಕಿ ನೀಡುವುದಾಗಿ ಹೇಳಿದ್ದರು. ಆದರೆ ಅಕ್ಕಿ ನೀಡಿಲ್ಲ. ೫ ಕೆ.ಜಿ. ಅಕ್ಕಿಯ ಹಣ ಹಾಕುತ್ತಿದ್ದರೂ ಎಲ್ಲರಿಗೂ ಸಿಗುತ್ತಿಲ್ಲ. ಕೇಂದ್ರದ ಮೋದಿ ಸರ್ಕಾರ ನೀಡುತ್ತಿರುವ ೫ ಕೆ.ಜಿ. ಅಕ್ಕಿ ಮಾತ್ರ ಜನರಿಗೆ ತಲುಪುತ್ತಿದೆ. ಇದೇ ಮೋದಿ ಸರ್ಕಾರದ ಗ್ಯಾರಂಟಿ ಎಂದರು.
ರೈತರಿಗೆ ಮೋದಿ ಸರ್ಕಾರ ೬ ಸಾವಿರ, ಬಿಜೆಪಿ ಸರ್ಕಾರ ೪ ಸಾವಿರ ಸೇರಿದಂತೆ ವಾರ್ಷಿಕ ೧೦ ಸಾವಿರ ನೀಡಲಾಗುತ್ತಿದ್ದು, ಕಾಂಗ್ರೆಸ್ ಸರ್ಕಾರ ಬಂದು ೪ ಸಾವಿರ ಹಣವನ್ನು ತಡೆಹಿಡಿದಿದೆ. ಮೋದಿ ಸರ್ಕಾರದ ಹಣ ಮಾತ್ರ ಬರುತ್ತಿದೆ. ವಿದ್ಯಾನಿಧಿ ವಿದ್ಯಾರ್ಥಿ ವೇತನ ನಿಲ್ಲಿಸಲಾಗಿದೆ. ಮಕ್ಕಳ ಭವಿಷ್ಯದ ಮೇಲೂ ಕಾಂಗ್ರೆಸ್ ಸರ್ಕಾರ ಚೆಲ್ಲಾಟವಾಡಿದೆ ಎಂದು ವಾಗ್ದಾಳಿ ನಡೆಸಿದರು.
ಚುನಾವಣಾ ಸಮನ್ವಯ ಸಮಿತಿ ಸದಸ್ಯ, ಜೆಡಿಎಸ್ ಮುಖಂಡ ಸಿ.ಎಲ್. ವಿಶ್ವ ಮಾತನಾಡಿ, ದೇಶದ ಉಳಿವು ಮತ್ತು ಅಭಿವೃದ್ಧಿಗಾಗಿ ಜೆಡಿಎಸ್ ಪಕ್ಷವು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಜೆಡಿಎಸ್ನ ಎಲ್ಲಾ ಕಾರ್ಯಕರ್ತರು ಈ ಬಾರಿ ಯದುವೀರ್ ಗೆಲುವಿಗೆ ಶ್ರಮಿಸಲಿದ್ದಾರೆ ಎಂದರು.
ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಮಾಜಿ ಸದಸ್ಯರುಗಳಾದ ಎಸ್.ಜಿ. ಮೇದಪ್ಪ ಹಾಗೂ ಎಂ.ಪಿ. ಸುನಿಲ್ ಸುಬ್ರಮಣಿ, ಯಮುನಾ ಚಂಗಪ್ಪ, ಪಕ್ಷದ ಜಿಲ್ಲಾಧ್ಯಕ್ಷ ರವಿ ಕಾಳಪ್ಪ, ಮಾಜಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ, ಜೆಡಿಎಸ್ ತಾಲೂಕು ಅಧ್ಯಕ್ಷ ನಾಗರಾಜು, ಬಿಜೆಪಿ ಮಂಡಲ ಅಧ್ಯಕ್ಷ ಗೌತಮ್, ಜೆಡಿಎಸ್ ಮುಖಂಡರಾದ ಕಾಟ್ನಮನೆ ವಿಠಲ್ ಗೌಡ, ಪ್ರವೀಣ್ ಸೇರಿದಂತೆ ಇತರರು ಉಪಸ್ಥಿತರಿದ್ದರು.