ಮಡಿಕೇರಿ, ಏ. ೮: ಅವರಿಗೆ ರಾಜಕೀಯ ಪಕ್ಷಗಳ ಸಮಾವೇಶ, ಚಲನಚಿತ್ರಗಳ ‘ಫಸ್ಟ್ ಡೇ ಫಸ್ಟ್ ಶೋ’ಗಳೇ ‘ಟಾರ್ಗೆಟ್’. ಜನಸಂದಣಿ ಹೆಚ್ಚಿರುವ ಪ್ರದೇಶಗಳಿಗೆ ಸಾಮಾನ್ಯರಂತೆ ತೆರಳಿ ನಾಜೂಕಾಗಿ ಜನರಿಗೆ ಜೇಬಿಗೆ ಕತ್ತರಿ ಹಾಕುವ ನೈಪುಣ್ಯತೆ ಹೊಂದಿದ್ದ ತಂಡ ಇದೀಗ ಪೊಲೀಸರ ಅತಿಥಿಯಾಗಿದೆ. ಹಲವು ವರ್ಷಗಳಿಂದ ಕಳ್ಳತನವನ್ನೇ ವೃತ್ತಿಯಾಗಿಸಿಕೊಂಡು ಹಣ ದೋಚುತ್ತಿದ್ದ ಕಳ್ಳರ ಗುಂಪನ್ನು ಜಿಲ್ಲಾ ಪೊಲೀಸರು ಪತ್ತೆಹಚ್ಚಿದ್ದೇ ರೋಚಕ.

ಹೌದು.. ಕೊಡಗು ಪೊಲೀಸರು ಪ್ರಕರಣಗಳನ್ನು ಮಿಂಚಿನ ಕಾರ್ಯಾಚರಣೆ ಮೂಲಕ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿ ಸಾಧಿಸುತ್ತಿದ್ದಾರೆ. ಇತ್ತೀಚಿಗಂತು ಗಾಂಜಾ, ಕೊಲೆ, ದರೋಡೆಯಂತಹ ಸವಾಲೊಡ್ಡುವ ಕೃತ್ಯಗಳನ್ನು ಶರವೇಗದಲ್ಲಿ ಪತ್ತೆಹಚ್ಚುವ ಮೂಲಕ ರಾಜ್ಯದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಹೆಸರುವಾಸಿಯಾಗುತ್ತಿದೆ. ಇದೇ ರೀತಿ ಮಾ. ೨೭ ರಂದು ಬಿಜೆಪಿ ಪಕ್ಷದ ಸಮಾವೇಶ ಮಡಿಕೇರಿಯಲ್ಲಿ ನಡೆದ ಸಂದರ್ಭ ಜೇಬು ಕಳ್ಳತನವಾಗಿದೆ. ಕೃತ್ಯವನ್ನು ೬ ದಿನಗಳೊಳಗೆ ಭೇದಿಸಿ, ಒಂದೆ ಗುಂಪಿನ ೧೩ ಕಳ್ಳರನ್ನು ಬಂಧಿಸಿ ಮುಂದೆ ನಡೆಸಲು ಯೋಜಿಸಿದ್ದ ಕಳ್ಳತನವನ್ನು ತಪ್ಪಿಸುವ ಮೂಲಕ ಸೈ ಎನಿಸಿಕೊಂಡಿದ್ದಾರೆ. ಆದರೆ, ಪೊಲೀಸರ ಕೈಗೆ ಸಿಗದೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಈ ಗ್ಯಾಂಗ್‌ನ್ನು ಪತ್ತೆಹಚ್ಚಿದ ಕಾರ್ಯಾಚರಣೆ ಅತ್ಯಂತ ರೋಚಕತೆಯೊಂದಿಗೆ ಸವಾಲನ್ನೂ ಪೊಲೀಸ್ ಇಲಾಖೆಗೆ ಮೂಡಿಸಿತ್ತು.

ಮಾರ್ಚ್ ೨೭ ರಂದು ಕುಶಾಲನಗರ ಹಾಗೂ ಮಡಿಕೇರಿಯಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆ ನಡೆದಿದ್ದ ಬಿಜೆಪಿ ಪಕ್ಷದ ಬಹಿರಂಗ ಸಮಾವೇಶ ಸಂದರ್ಭ ಒಂದೆ ತಂಡದ ೧೩ ಮಂದಿಯ ಕಳ್ಳರ ಗುಂಪು ಮಾಜಿ ಶಾಸಕ ಕೆ.ಜಿ ಬೋಪಯ್ಯ ಸೇರಿದಂತೆ ೬ ಮಂದಿ ಜೇಬಿನಿಂದ ಒಟ್ಟು ರೂ.೧,೯೬,೩೦೦ ನಗದು ಎಗರಿಸಿದ್ದರು. ಈ ಸಂಬAಧ ಕುಶಾಲನಗರ ಹಾಗೂ ಮಡಿಕೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ನಿರ್ದೇಶನದಂತೆ ಕುಶಾಲನಗರ ಡಿ.ವೈ.ಎಸ್.ಪಿ. ಆರ್.ವಿ. ಗಂಗಾಧರಪ್ಪ ಅವರ

ನೇತೃತ್ವದಲ್ಲಿ ಕುಶಾಲನಗರ ಪಟ್ಟಣ ವೃತ್ತ ನಿರೀಕ್ಷಕ ಪ್ರಕಾಶ್, ಠಾಣಾಧಿಕಾರಿಗಳಾದ ಬಿ.ಎಸ್. ಉಮಾ ಮತ್ತು ಅಪರಾಧ ತನಿಖಾ ವಿಭಾಗದ ಸಿಬ್ಬಂದಿಗಳ ವಿಶೇಷ ತಂಡ ‘ಪಿಕ್ ಪಾಕೆರ‍್ಸ್’ ಪತ್ತೆಗೆ ಬಿರುಸಿನ ತನಿಖೆ ಕೈಗೆತ್ತುಕೊಂಡಿತ್ತು.

(ಮೊದಲ ಪುಟದಿಂದ)

ಬೆನ್ನತ್ತಿದ್ದ ಪೊಲೀಸ್ ಪಡೆ

ಮಡಿಕೇರಿ ಹಾಗೂ ಕುಶಾಲನಗರದಲ್ಲಿ ‘ಪಿಕ್‌ಪಾಕೆಟ್’ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಗಳ ಪತ್ತೆಗೆ ಬಲೆ ಬೀಸಿ ಬೆನ್ನತ್ತಿದ್ದ ಪೊಲೀಸರ ನಿರಂತರ ಶ್ರಮದ ಫಲವಾಗಿ ಇದೀಗ ೧೩ ಮಂದಿ ಆರೋಪಿಗಳು ಖಾಕಿ ಖೆಡ್ಡಾಕ್ಕೆ ಬಿದ್ದಿದ್ದಾರೆ.

ಕೊಡಗಿನಲ್ಲಿ ಕಳ್ಳತನ ನಡೆಸಿ ಹಾಸನದ ಕಾಂಗ್ರೆಸ್ ಸಮಾವೇಶದಲ್ಲಿ ಕೈಚಳಕ ತೋರಿ ಬೆಂಗಳೂರಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಉಪಸ್ಥಿತಿಯಲ್ಲಿ ನಡೆಯುತ್ತಿದ್ದ ಬಿಜೆಪಿ ಸಮಾವೇಶಕ್ಕೆ ಕಳ್ಳತನದ ಗುರಿಯೊಂದಿಗೆ ‘ಪ್ಲಾನ್’ ರೂಪಿಸಿ ತೆರಳುತ್ತಿದ್ದ ಗುಂಪನ್ನು ಚನ್ನಪಟ್ಟಣದಲ್ಲಿ ಅಡ್ಡಗಟ್ಟಿ ಪೊಲೀಸರು ಬಂಧಿಸಿ ಇದೀಗ ಕಂಬಿ ಹಿಂದೆ ಕಳುಹಿಸಿದ್ದಾರೆ.

ಬಂಧನಕ್ಕೆ ಮುನ್ನ ಮಡಿಕೇರಿ ಹಾಗೂ ಕುಶಾಲನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೊಲೀಸರು ಹಾಗೂ ಮಾಧ್ಯಮ ಛಾಯಾಗ್ರಹಕರು ಸೆರೆಹಿಡಿದ ಕ್ಯಾಮರ ದೃಶ್ಯಾವಳಿಗಳನ್ನು ಗಮನಿಸಿದಾಗ ಮೂವರು ಅನುಮಾನಿತ ವ್ಯಕ್ತಿಗಳು ಕಳ್ಳತನ ಮಾಡುತ್ತಿರುವ ದೃಶ್ಯಗಳು ಪೊಲೀಸರ ಕಣ್ಣಿಗೆ ಬಿದ್ದಿವೆ. ತಕ್ಷಣ ಮೂವರ ಫೋಟೋಗಳನ್ನು ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಿಗೆ ರವಾನಿಸಲಾಯಿತು. ಈ ಆಧಾರದಲ್ಲಿ ರಾಜ್ಯದ ವಿವಿಧ ಠಾಣೆಗಳಲ್ಲಿ ವಿಚಾರಣೆ ನಡೆಸಿದ ಸಂದರ್ಭ ಶಿವಮೊಗ್ಗ ಪೊಲೀಸ್ ಠಾಣೆಯಲ್ಲಿ ಇವರ ಸುಳಿವು ದೊರೆತಿದೆ. ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಿದ ಸಂದರ್ಭ ಇದು ವೃತ್ತಿಪರ ಕಳ್ಳರ ಜಾಲ ಎಂದು ಖಾತ್ರಿಯಾಗಿದೆ.

ವಿವಿಧ ಮೂಲಗಳ ಮೂಲಕ ಆರೋಪಿಗಳ ಮೊಬೈಲ್ ಸಂಖ್ಯೆ ಪತ್ತೆಹಚ್ಚುವಲ್ಲಿ ಯಶಸ್ವಿಯಾದ ಕೊಡಗು ಪೊಲೀಸರಿಗೆ ಕಳ್ಳರ ಗುಂಪು ಹಾಸನದಿಂದ ಬೆಂಗಳೂರಿನತ್ತ ತೆರಳುತ್ತಿರುವುದು ‘ನೆಟ್‌ವರ್ಕ್ ಟ್ರೇಸಿಂಗ್’ ಮೂಲಕ ಗೊತ್ತಾಗಿದೆ. ‘ಡಿಜಿಟಲ್’ ಸಾಕ್ಷಾö್ಯಧಾರಗಳ ಆಧಾರದಲ್ಲಿ ಕಳ್ಳರ ಗುಂಪನ್ನು ಬೆನ್ನತ್ತಿದ ಖಾಕಿ ಪಡೆ ಟೊಯೋಟ ಇನ್ನೋವ ಹಾಗೂ ಇಟಿಯೋಸ್ ಕಾರಿನಲ್ಲಿ ಚನ್ನಪಟ್ಟಣ ಬಳಿ ತೆರಳುತ್ತಿದ್ದ ಕಳ್ಳರನ್ನು ಅಡ್ಡಗಟ್ಟಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿವಿಧೆಡೆ ಕಳ್ಳತನ ಪ್ರಕರಣಕ್ಕೆ ಸಂಬAಧಿಸಿದ ಆರೋಪಿಗಳು ಇವರಾಗಿದ್ದು, ಹಲವು ಸಮಾವೇಶ, ಚಲನಚಿತ್ರ ಬಿಡುಗಡೆಯ ಮೊದಲ ದಿನ ತಮ್ಮ ಕರಾಮತ್ತು ತೋರಿಸುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ಹೊರಬಿದ್ದಿದೆ. ಅಲ್ಲದೆ, ಇವರ ಅಪರಾಧದ ಹಿನ್ನೆಲೆಯ ಬಗ್ಗೆ ವಿಚಾರಣೆ ನಡೆಯುತ್ತಿದೆ.

ಹಾಸನದಲ್ಲೂ ಕೈಚಳಕ

ಕುಶಾಲನಗರ ಹಾಗೂ ಮಡಿಕೇರಿಯಲ್ಲಿ ಕೃತ್ಯ ಎಸಗಿದ ತಂಡ ಏಪ್ರಿಲ್ ೧ ರಂದು ಹಾಸನದಲ್ಲಿ ನಡೆದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ನಾಮಪತ್ರ ಸಲ್ಲಿಕೆಗೆ ತೆರಳಿದೆÀ. ಕೆ.ಪಿ.ಸಿ.ಸಿ. ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಅನೇಕ ನಾಯಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಜೊತೆಗೆ ಸಾವಿರಾರು ಕಾರ್ಯಕರ್ತರು ನೆರೆದಿದ್ದರು. ಇಲ್ಲಿಯೂ ಕೈಚಳಕ ತೋರಿದ ಕಳ್ಳರ ಗುಂಪು ಹಣ ಎಗರಿಸಿದೆ. ಆದರೆ, ಯಾವುದೇ ಪ್ರಕರಣಗಳು ಹಾಸನ ಪೊಲೀಸ್ ಠಾಣೆಯಲ್ಲಿ ದಾಖಲಾಗಿರಲಿಲ್ಲ.

ಅಮಿತ್ ಷಾ ಕಾರ್ಯಕ್ರಮಕ್ಕೆ ‘ಗ್ಯಾಂಗ್’

ಎರಡು ಜಿಲ್ಲೆಗಳಲ್ಲಿ ಕೃತ್ಯ ಎಸಗಿ ತಾ. ೨ ರಂದು ಬೆಂಗಳೂರಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಪಾಲ್ಗೊಂಡಿದ್ದ ಬಿಜೆಪಿಯ ಬಹಿರಂಗ ಸಭೆಗೆ ಕಳ್ಳತನ ಉದ್ದೇಶಕ್ಕೆಂದು ತೆರಳ್ಳುತ್ತಿದ್ದ ಕಳ್ಳರನ್ನು ಏಕಕಾಲದಲ್ಲಿ ಕೊಡಗು ಪೊಲೀಸರು ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಚನ್ನಪಟ್ಟಣದಲ್ಲಿ ಬಂಧಿಸಿದ್ದಾರೆ.

ಅಮಿತ್ ಷಾ ಕಾರ್ಯಕ್ರಮಕ್ಕೆ ರಾಜ್ಯದ ವಿವಿಧೆಡೆಗಳಿಂದ ಕಾರ್ಯಕರ್ತರು ಆಗಮಿಸಿದ್ದರು. ಸಾವಿರಾರು ಮಂದಿ ನೆರೆದಿದ್ದ ಈ ಸಭೆಯಲ್ಲಿ ಕಳ್ಳತನ ಮಾಡುವ ಗುರಿಯೊಂದಿಗೆ ತಂಡ ಸಾಗಿತ್ತು. ಜೊತೆಗೆ ಚುನಾವಣೆಯ ಹೊಸ್ತಿಲಿನಲ್ಲಿ ರಾಜ್ಯವ್ಯಾಪಿ ಬಹಿರಂಗ ಸಮಾವೇಶಗಳು ನಡೆಯುವ ಹಿನ್ನೆಲೆ ಎಲ್ಲಾ ಕಡೆ ಕಿಸೆಗಳ್ಳತನ ಮಾಡುವ ಯೋಜನೆಯನ್ನು ಕಳ್ಳರ ಜಾಲ ಹೊಂದಿತ್ತು ಎನ್ನಲಾಗಿದೆ. ಆದರೆ, ಖಾಕಿಪಡೆ ಸಕಾಲದಲ್ಲಿ ಕಳ್ಳರನ್ನು ಹೆಡೆಮುರಿ ಕಟ್ಟಿ ಕಂಬಿ ಹಿಂದೆ ಹೋಗುವಂತೆ ಮಾಡಿದೆ. ಅಲ್ಲದೆ, ಅಲ್ಲಿ ನಡೆಯಬೇಕಾಗಿದ್ದ ಕಳ್ಳತನವನ್ನು ತಪ್ಪಿಸಿದೆ.

- ಹೆಚ್.ಜೆ. ರಾಕೇಶ್