ಕಣಿವೆ, ಏ. ೭: ಕೂಡಿಗೆ ಗ್ರಾಮ ಪಂಚಾಯಿತಿಯ ಮದಲಾಪುರದ ದಿಡ್ಡಳ್ಳಿ ಗಿರಿಜನರು ಮೂಲಸೌಕರ್ಯ ಗಳಿಗಾಗಿ ಆಗ್ರಹಿಸಿ ಭಾನುವಾರ ದಿಢೀರ್ ಪ್ರತಿಭಟನೆ ನಡೆಸಿದರು.

ಪುನರ್ವಸತಿ ಕೇಂದ್ರದಲ್ಲಿ ೩೫೪ ಕುಟುಂಬಗಳು ಇದ್ದು, ಮನೆಗಳನ್ನು ನಿರ್ಮಿಸಿದ್ದು ಹೊರತುಪಡಿಸಿ ಇದುವರೆಗೂ ಇನ್ನಿತರೆ ಯಾವುದೇ ಮೂಲ ಸೌಲಭ್ಯಗಳನ್ನು ನೀಡುವಲ್ಲಿ ಸ್ಥಳೀಯ ಕೂಡಿಗೆ ಗ್ರಾಮಾಡಳಿತ ಹಾಗೂ ಜಿಲ್ಲಾಡಳಿತ ವಿಫಲವಾಗಿದೆ. ಮೂಲ ಸೌಕರ್ಯಗಳನ್ನು ಒದಗಿಸಿ ಎಂದು ಹತ್ತಾರು ಬಾರಿ ಸರ್ಕಾರಿ ಕಚೇರಿಗಳಿಗೆ ಹಾಗೂ ಜನಪ್ರತಿನಿಧಿಗಳ ಬಳಿ ತೆರಳಿ ಮನವಿ ನೀಡಿದ್ದರೂ ಇದುವರೆಗೂ ಪರಿಹಾರ ದೊರೆತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ನಿವಾಸಿಗಳು, ಲೋಕಸಭಾ ಚುನಾವಣೆ ಬಹಿಷ್ಕಾರ ಎಚ್ಚರಿಕೆ ನೀಡಿದರು.

ಪುನರ್ವಸತಿ ಕೇಂದ್ರವನ್ನು ಮಾಡಿ ಆರೇಳು ವರ್ಷಗಳು ಕಳೆದರೂ ಇದುವರೆಗೂ ಸಮರ್ಪಕವಾದ ಕುಡಿಯುವ ನೀರು, ಸುಸಜ್ಜಿತ ರಸ್ತೆ, ವ್ಯವಸ್ಥಿತ ಚರಂಡಿ, ಉದ್ಯಾನವನ, ಸಮುದಾಯ ಭವನ, ಅಂಗನವಾಡಿ, ನ್ಯಾಯಬೆಲೆ ಅಂಗಡಿ ಹೀಗೆ ಯಾವೊಂದು ಸೌಲಭ್ಯಗಳನ್ನು ನಮಗೆ ಒದಗಿಸಿಲ್ಲ ಎಂದು ನಿವಾಸಿಗಳಾದ ಪಾರ್ವತಿ, ಮುತ್ತ, ಮಣಿ, ಶಂಕರ ಮೊದಲಾದವರು ಅಸಮಾಧಾನ ವ್ಯಕ್ತಪಡಿಸಿದರು. ಇಷ್ಟೇ ಅಲ್ಲದೇ ಇಲ್ಲಿನ ನಿವಾಸಿಗಳಿಗೆ ಅಗತ್ಯ ದಾಖಲೆ ಒದಗಿಸುವಲ್ಲಿ ಅಧಿಕಾರಿಗಳು ಮುಂದಾಗಿಲ್ಲ ಎಂದು ನಿವಾಸಿಗಳು ಆರೋಪಿಸಿದರು.

ನಾವು ಎಷ್ಟೆಲ್ಲಾ ಸಮಸ್ಯೆಗಳನ್ನು ಹೇಳಿಕೊಂಡರೂ ಯಾವುದೇ ಜನಪ್ರತಿನಿಧಿಗಳಾಗಲಿ, ಅಧಿಕಾರಿ ಗಳಾಗಲಿ ಇತ್ತ ಧಾವಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ನಿವಾಸಿ ಗಳು ಸ್ಥಳೀಯ ಕೂಡಿಗೆ ಗ್ರಾಮ ಪಂಚಾಯಿತಿಯ ಆಡಳಿತ ಮಂಡಳಿ ಹಾಗೂ ಪಿಡಿಓ ವಿರುದ್ಧ ಆಕ್ರೋಶ ಹೊರಹಾಕಿ ಧಿಕ್ಕಾರ ಕೂಗಿದರು. ಈ ಸಂದರ್ಭ ನಿವಾಸಿಗಳಾದ ವೈ.ಸಿ ಮುತ್ತ, ಅನಿತಾ, ದೇವಿ, ಬಾಬು, ಮಣಿ, ಬೆಳ್ಳಿ, ರಾಜು, ರವಿ, ಗೌರಿ, ಚಿಪ್ಪ, ರಮೇಶ.ವೈಕೆ ಚೋಮ ಮೊದಲಾದವರಿದ್ದರು.

ವರದಿ: ಕೆ.ಎಸ್. ಮೂರ್ತಿ