ಕೂಡಿಗೆ, ಏ. ೬: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗಡಹಳ್ಳಿ ಗ್ರಾಮದಲ್ಲಿರುವ ಶ್ರೀ ಹರಕೆ ಚೌಡೇಶ್ವರಿ ದೇವಿ, ನಾಗದೇವರ ವಾರ್ಷಿಕ ಪೂಜೋತ್ಸವ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನಡೆಯಿತು.
ವಾರ್ಷಿಕೋತ್ಸವದ ಅಂಗವಾಗಿ ಬೆಳಿಗ್ಗೆ ಗಣಪತಿ ಹೋಮ, ದುರ್ಗಾಹೋಮ, ಕಲಾವೃದ್ಧಿ ಹೋಮ, ಅಭಿಷೇಕ, ಕಲಶ ಪ್ರತಿಷ್ಠೆ ಹಾಗೂ ದೇವಿಗೆ ವಿವಿಧ ಅಭಿಷೇಕ ಸೇರಿದಂತೆ ಹೋಮ ಹವನಗಳು ನಡೆದವು. ಪೂಜಾ ಕೈಂಕರ್ಯಗಳನ್ನು ಗಣಪತಿ ಭಟ್ ಮತ್ತು ಚಂದ್ರಮುರುಳಿ ಆರಾಧ್ಯ ನಡೆಸಿಕೊಟ್ಟರು.
ಮಧ್ಯಾಹ್ನ ೧ ಗಂಟೆಗೆ ಮಹಾಮಂಗಳಾತಿ ಪ್ರಸಾದ ವಿನಿಯೋಗ ನಡೆದ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.
ಪೂಜೋತ್ಸವ ಕಾರ್ಯಕ್ರಮಕ್ಕೆ ಕೂಡಿಗೆ, ಕೂಡುಮಂಗಳೂರು ಮದಲಾಪುರ ಸೀಗೆಹೊಸೂರು ಹುದುಗೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನೂರಾರು ಭಕ್ತರು ಆಗಮಿಸಿದ್ದರು. ಸಂಜೆ ದೇವಾಲಯದ ಆವರಣದಲ್ಲಿ ದೀಪಾಲಂಕಾರ ಮತ್ತು ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು.
ಈ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷ ಕೆ.ಸಿ. ರವಿ, ಕಾರ್ಯದರ್ಶಿ ಅರುಣ್ ಸೇರಿದಂತೆ ಸಮಿತಿ ನಿರ್ದೇಶಕರು, ಗ್ರಾಮಸ್ಥರು ಭಾಗವಹಿಸಿದ್ದರು.