ಸಿದ್ದಾಪುರ, ಏ. ೬: ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕಾನೂನು ಕಟ್ಟುಪಾಡುಗಳನ್ನು ಪಾಲಿಸಿಕೊಂಡು ಚುನಾವಣೆಯನ್ನು ಉತ್ತಮ ರೀತಿಯಲ್ಲಿ ನಡೆಸಲು ಸಹಕರಿಸಬೇಕೆಂದು ಮಡಿಕೇರಿ ವಿಭಾಗದ ಡಿವೈಎಸ್‌ಪಿ ಮಹೇಶ್‌ಕುಮಾರ್ ಮನವಿ ಮಾಡಿಕೊಂಡರು. ಗುರುವಾರದಂದು ಸಿದ್ದಾಪುರ, ಚೆಟ್ಟಳ್ಳಿ, ನೆಲ್ಲಿಹುದಿಕೇರಿ, ಮಾಲ್ದಾರೆ, ಚೆನ್ನಯ್ಯನಕೋಟೆ ಗ್ರಾಮಗಳಲ್ಲಿ ಗ್ರಾಮಮಟ್ಟದ ಬೂತ್‌ಮಟ್ಟದ ರಾಜಕೀಯ ಪಕ್ಷಗಳ ಮುಖಂಡರುಗಳ ಸಭೆಯಲ್ಲಿ ಅವರು ಮಾತನಾಡಿದರು.

ಮತದಾರರು ಕಾನೂನು ಉಲ್ಲಂಘನೆ ಮಾಡದಂತೆ ಹಾಗೂ ಗೊಂದಲಗಳು ಮೂಡದಂತೆ ರಾಜಕೀಯ ಮುಖಂಡರು ಮನವರಿಕೆ ಮಾಡಿಕೊಡುವಂತೆ ಸಲಹೆ ನೀಡಿದರು. ಚುನಾವಣೆ ಆಯೋಗವು ನೀಡಿದ ಶಿಸ್ತುಗಳನ್ನು ಮೀರದಂತೆ ಸಾರ್ವಜನಿಕರು ಎಚ್ಚರ ವಹಿಸುವ ಮೂಲಕ ಇಲಾಖೆಯೊಂದಿಗೆ ಸಹಕರಿಸಬೇಕೆಂದರು.

ಚುನಾವಣೆಯ ದಿನದಂದು ಮತದಾನ ಹೆಸರು ಬಿಟ್ಟು ಹೋಗಿದೆ. ಅಲ್ಲದೇ ಯಾರೋ ಮತ ಚಲಾಯಿಸಿದ್ದಾರೆ ಎಂಬ ಗೊಂದಲ ಸೃಷ್ಟಿಸಬಾರದೆಂದರು. ಇದೇ ಪ್ರಥಮ ಬಾರಿಗೆ ಪೊಲೀಸ್ ಇಲಾಖೆಯಿಂದ ಬೂತ್‌ಮಟ್ಟದಲ್ಲಿ ಚುನಾವಣೆಯ ಸಂಬAಧ ನಿರ್ಭೀತಿಯಿಂದ ಮತದಾರರು ಮತದಾನ ಮಾಡಲು ರಾಜಕೀಯ ಮುಖಂಡರುಗಳ ಸಭೆ ನಡೆಸಲಾಗಿದೆಯೆಂದು ಮಾಹಿತಿ ನೀಡಿದರು.

ಈ ಸಂದರ್ಭ ಮಡಿಕೇರಿ ವೃತ್ತನಿರೀಕ್ಷಕ ರಾಜು, ಸಿದ್ದಾಪುರ ಠಾಣಾಧಿಕಾರಿ ರಾಘವೇಂದ್ರ, ವಿವಿಧ ರಾಜಕೀಯ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಹಾಜರಿದ್ದರು.