ಸಿದ್ದಾಪುರ, ಏ. ೬: ಕಾರ್ಮಿಕರು ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಒಂಟಿ ಸಲಗವೊಂದು ಹಠಾತ್ತನೇ ದಾಳಿಗೆ ಮುಂದಾಗಿದ್ದು, ಸಲಗವನ್ನು ಕಂಡು ಬೆದರಿದ ಓಡಿದ ವ್ಯಕ್ತಿಯೋರ್ವ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಬಾಡಗ - ಬಾಣಂಗಾಲ ಗ್ರಾಮದ ಮಠದಲ್ಲಿ ನಡೆದಿದೆ. ಬಾಡಗ - ಬಾಣಂಗಾಲ ಗ್ರಾಮದ ನಿವಾಸಿಯಾಗಿರುವ ಸದಾಶಿವ ಎಂಬವರ ಕಾಫಿ ತೋಟದೊಳಗೆ ೫ ಮಂದಿ ಕಾರ್ಮಿಕರು ಶನಿವಾರ ಬೆಳಿಗ್ಗೆ ೯ ಗಂಟೆಯ ಸಮಯಕ್ಕೆ ಕೆಲಸ ಮಾಡುತ್ತಿದ್ದರು.

ಈ ಸಂದರ್ಭದಲ್ಲಿ ಏಕಾಏಕಿ ಒಂಟಿ ಸಲಗವೊಂದು ಕಾರ್ಮಿಕರು ಕೆಲಸ ಮಾಡುವ ಸ್ಥಳಕ್ಕೆ ಲಗ್ಗೆ ಇಟ್ಟಿದೆ. ದಾಳಿಗೆ ಮುಂದಾಗುವ ಅಪಾಯವನ್ನು ಅರಿತ ಕಾರ್ಮಿಕರು ಕಾಫಿ ತೋಟದೊಳಗೆ ದಿಕ್ಕಾಪಾಲಾಗಿ ಓಡಿ ದಾಳಿಯಿಂದ ತಪ್ಪಿಸಿಕೊಂಡರು. ಈ ಸಂದರ್ಭದಲ್ಲಿ ತೋಟದೊಳಗೆ ಓಡಾಡುವ ಸಂದರ್ಭದಲ್ಲಿ ಕಾರ್ಮಿಕ ಹುಸೈನ್ ಎಂಬವರು ಜಾರಿ ಬಿದ್ದು ಗಾಯಗಳಾಗಿವೆ.

ಕೂಡಲೇ ತೋಟದ ಮಾಲೀಕರು ಕಾರ್ಮಿಕ ಹುಸೈನ್‌ನನ್ನು ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಬಾಡಗ - ಬಾಣಂಗಾಲ ವ್ಯಾಪ್ತಿಯಲ್ಲಿ ಮಿತಿಮೀರಿದ ಕಾಡಾನೆಗಳ ಹಾವಳಿ ಇದ್ದು, ಆಗ್ಗಿಂದಾಗೆ ಕಾಡಾನೆಗಳು ಮಾನವನ ಮೇಲೆ ದಾಳಿ ನಡೆಸಲು ಮುಂದಾಗುತ್ತಿದೆ. ಗ್ರಾಮದಲ್ಲಿ ಭಯದ ವಾತಾವರಣ ಮೂಡಿದೆ ಎಂದು ಗ್ರಾ.ಪಂ. ಮಾಜಿ ಸದಸ್ಯ ಮುತ್ತಪ್ಪ ಪೂಜಾರಿ ತಿಳಿಸಿದ್ದಾರೆ. ಕಾಡಾನೆಗಳ ಹಾವಳಿ ಅಲ್ಲದೇ ಹುಲಿಗಳು ಕೂಡ ಬಾಡಗ - ಬಾಣಂಗಾಲ ಮಠ ವ್ಯಾಪ್ತಿಯಲ್ಲಿ ಜಾನುವಾರುಗಳನ್ನು ಸಾಯಿಸಿದ್ದು, ವನ್ಯಜೀವಿಗಳ ಹಾವಳಿ ತಪ್ಪಿಸಬೇಕೆಂದರು. - ವಾಸು