ಪ್ರಜಾಪ್ರಭುತ್ವವಾಗಿ ಅನೇಕ ಶತಮಾನಗಳಿಂದ ನಡೆಯುತ್ತಿ ರುವ ಚುನಾವಣೆಗೆ ಅನೇಕ ಮಾನದಂಡಗಳನ್ನು ಸರ್ಕಾರವೇ ನಿಗದಿಪಡಿಸಿರುವುದು ಬಹುಮುಖ್ಯವಾದ ವಿಚಾರ. ಇಡೀ ದೇಶದ ಅಸ್ತಿತ್ವವೇ ನಮ್ಮ ಪ್ರಜಾಪ್ರಭುತ್ವದೊಳಗೆ ಅಡಗಿರುವುದು ಒಂದು ಅದ್ಭುತವೇ ಸರಿ. ಹೀಗಿರುವಾಗ ಚುನಾವಣೆಗೆ ಒಂದು ಮಹತ್ವವಾದ ಸ್ಥಾನವಿದೆ. ಹಾಗೂ ಚುನಾವಣೆಯಲ್ಲಿ ಆಯ್ಕೆಯಾಗುವ ಪ್ರತಿಯೊಬ್ಬ ಜನಪ್ರತಿನಿಧಿಗೂ ಮಾನದಂಡದ ಅಗತ್ಯತೆ ಖಂಡಿತ ಇದೆ. ಇರಲೂಬೇಕು. ಜನಪ್ರತಿನಿಧಿ ಎಂದರೆ ಜನರ ಪರವಾಗಿ ಮಾತನಾಡುವ ಹಾಗೂ ಜನರ ನೋವುಗಳಿಗೆ ಸ್ಪಂದಿಸುವ ಜನರ ನಾಯಕ. ಪ್ರಮುಖವಾಗಿ ತಾಳ್ಮೆಯು ಜನಪ್ರತಿನಿಧಿಯ ಮುಖ್ಯವಾದ ಮಾನದಂಡವಾಗಿರುತ್ತದೆ. ಯಾವುದೇ ಸಮಯ, ಸಂದರ್ಭದಲ್ಲಾದರೂ ಆತ ತಾಳ್ಮೆ ಕಳೆದುಕೊಳ್ಳದೆ ಸಂಯಮದಿAದ ವರ್ತಿಸಿ ಜನರಿಗೆ ಸೂಕ್ತವಾದ ಪರಿಹಾರವನ್ನು ಜನಪರ ನಾಯಕನು ಕಂಡು ಹಿಡಿಯಬೇಕು.
ಇಂದಿನ ಕಂಪ್ಯೂಟರ್ ಯುಗ ಹೇಗಿದೆ ಎಂದರೆ ಒಂದು ಪುಟ್ಟ ಮಗು ಶಾಲೆಗೆ ದಾಖಲಾಗಬೇಕಾದರೆ ಕೆಲವು ಮಾನದಂಡಗಳನ್ನು ನಿಗದಿಪಡಿಸಲಾಗಿರುತ್ತದೆ. ಅಷ್ಟೆ ಏಕೆ ಮನೆಯ ಗೃಹಿಣಿಯಾಗಲು ಕೂಡ ಮನೆಯ ಹಿರಿಯರು ಮಾನದಂಡಗಳನ್ನು ವಿಧಿಸಿರುತ್ತಾರೆ ಹೀಗೆ ಮಾನದಂಡ ಮತ್ತು ಅರ್ಹತೆಗಳನ್ನು ವಿಧಿಸಿಕೊಂಡು ನಡೆಯುವ ಅನೇಕ ಸನ್ನಿವೇಶಗಳು ನಮ್ಮ ನಡುವಲ್ಲೇ ಇವೆ. ಹೀಗಿರುವಾಗ ಜನರ ಪ್ರತಿನಿಧಿಗೆ ಅರ್ಹತಾ ಮಾನದಂಡಗಳಿಲ್ಲವೆAದರೆ ಬಹಳ ವಿಪರ್ಯಾಸ ಎನಿಸುತ್ತದೆ. ಹಾಗಾಗಿ ಇದು ಅಗತ್ಯ ಮತ್ತು ಅನಿವಾರ್ಯ. ಮಾನವೀಯ ಮೌಲ್ಯಗಳು ಕಾಣೆಯಾಗುತ್ತಿರುವ ಈ ಕಾಲಘಟದಲ್ಲಿ ಮಾನವೀಯ ಮೌಲ್ಯಗಳ ಬೆಲೆಯನ್ನು ಅರಿಯುವ ಹಾಗೂ ಮನುಷ್ಯನ ಕಷ್ಟಗಳಿಗೆ ಮಿಡಿಯುವ ಹೃದಯವಂತರು ಸ್ಪರ್ಧೆಗೆ ಇಳಿಯಬೇಕು ಮತ್ತು ಅಂತಹ ಹೃದಯವಂತರು ಸ್ಪರ್ಧಿಸಿದ್ದಾರೆಂದರೆ ಮತದಾರರು ಹಣ, ಆಮಿಷಗಳಿಗೆ ಮರುಳಾಗದೆ ತಮ್ಮ ಪ್ರತಿನಿಧಿಯನ್ನು ಹೃದಯವಂತಿಕೆಯಿAದ ಆಯ್ಕೆ ಮಾಡುವ ಮಹಾಕಾರ್ಯವನ್ನು ಮಾಡಬೇಕು.
ಮತ್ತೊಂದು ಬಹುಮುಖ್ಯವಾದ ಅರ್ಹತೆ ಎಂದರೆ ಶೈಕ್ಷಣಿಕ ವಿದ್ಯಾರ್ಹತೆ, ಇದು ಜನಪ್ರತಿನಿಧಿಗೆ ನನ್ನ ದೃಷ್ಟಿಯಲ್ಲಿ ಅತ್ಯಂತ ಕಡ್ಡಾಯವಾಗಿ ಇರಲೇಬೇಕಾದ ಮಾನದಂಡವಾಗಿದೆ. ಸರ್ಕಾರವು ಶಿಕ್ಷಣ ಕ್ಷೇತ್ರಕ್ಕೆ ಅಪಾರವಾದ ಪ್ರಾಮುಖ್ಯತೆಯನ್ನು ನೀಡುತ್ತಿರುವಾಗ ಹಾಗೂ ಶಿಕ್ಷಣವು ಅತೀ ಅನಿವಾರ್ಯವಾಗಿರುವ ಈ ಡಿಜಿಟಲ್ ಪ್ರಪಂಚದಲ್ಲಿ ಸಾಮಾನ್ಯ ವ್ಯಕ್ತಿಯಾಗಿ ಬದುಕಲು ಶಿಕ್ಷಣವು ಅನಿವಾರ್ಯವಾಗಿದೆ. ಹೀಗಿರುವಾಗ ಒಬ್ಬ ಅನಕ್ಷರಸ್ಥನು ನಮ್ಮ ಪ್ರತಿನಿಧಿಯಾದರೆ ನಮ್ಮ ದೇಶದ ಭವಿಷ್ಯದ ಗತಿಯೇನು ? ಎಂಬ ಪ್ರಶ್ನೆಯು ಕಾಡದೆ ಇರಲಾರದು. ಶಿಕ್ಷಣವೇ ದೇಶದ ಭದ್ರ ಬುನಾದಿಗೆ ಕಾರಣ. ಇಂತಹ ಅಮೂಲ್ಯವಾದ ಮಾತಿಗೆ ಹಾಗೂ ಆ ಮಾತನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ನಾವು ಸಾಗಲೇಬೇಕಿದೆ. ದೇಶದಲ್ಲಿರುವ ೧೪ ವರ್ಷದೊಳಗಿನ ಪ್ರತಿ ಮಗುವಿಗೂ ಸಂಪೂರ್ಣ ಉಚಿತ ಶಿಕ್ಷಣದೊಂದಿಗೆ ಆಹಾರ, ಆರೋಗ್ಯ, ಕಲಿಕಾ ಸಾಮಗ್ರಿಗಳನ್ನು ಉಚಿತವಾಗಿ ನೀಡಿ ಅಕ್ಷರಸ್ಥರಾಗಲೆಂದು ಹಾಗೂ ವಯಸ್ಕರು ಶಿಕ್ಷಣವನ್ನು ಪಡೆಯಲೆಂದು, ವಯಸ್ಕರ ಶಿಕ್ಷಣವನ್ನು ಪ್ರಾರಂಭಿಸಿದೆ. ಮಾಹಿತಿ, ತಂತ್ರಜ್ಞಾನ ಮುಂದುವರೆದ ಹಾಗೆ ನಮ್ಮ ಶಿಕ್ಷಣ ರಂಗದಲ್ಲೂ ಅನೇಕ ಬದಲಾವಣೆ ಅನಿವಾರ್ಯವಾಗಿ ಆಗುತ್ತಿದೆ. ಶಿಕ್ಷಣದೊಂದಿಗೆ ಪ್ರಸ್ತುತ ಡಿಜಿಟಲ್ ಯುಗಕ್ಕೂ ಕೂಡ ಹೊಂದಿಕೊಳ್ಳಬೇಕಾಗುತ್ತದೆ. ಕೈ ಬೆರಳ ತುದಿಯಲ್ಲಿ ಜಗತ್ತನ್ನು ನೋಡುವ ಈ ಕಾಲದಲ್ಲಿ ಓದು ಬರಹವೇ ಬಾರದವರು ಪ್ರತಿನಿಧಿಯಾಗುವುದೆಂದರೆ ಪ್ರತಿ ಒಬ್ಬ ವಿದ್ಯಾವಂತನಿಗೂ ನಿಜಕ್ಕೂ ತಲೆತಗ್ಗಿಸುವ ಕಾರ್ಯವಾಗುತ್ತದೆ.
ಅಕ್ಷರ ಜ್ಞಾನವಿಲ್ಲದೆ ಅಗಣಿತ ಕ್ಷೇತ್ರಗಳಲ್ಲಿ ಸಾಧನೆಗೈದ ಅನೇಕರನ್ನು ನಾವು ನೋಡುತ್ತೇವೆಯಾದರೂ ಪ್ರತಿನಿಧಿಗೆ ಶಿಕ್ಷಣದ ಅವಶ್ಯಕತೆ ಅನಿವಾರ್ಯವಾಗಿದೆ. ಯಾವ ಪದವಿಯ ಅಗತ್ಯವಿಲ್ಲವಾದರು ಜನಪ್ರತಿನಿಧಿಯಾಗಿ ಜನರು ಸಲ್ಲಿಸುವ ಅರ್ಜಿಗಳನ್ನು ಓದಿ ಅರ್ಥೈಸಿಕೊಳ್ಳುವ ಕನಿಷ್ಟ ವಿದ್ಯಾರ್ಹತೆ ಇರಲೇಬೇಕೆಂದು ನಾನು ಬಲವಾಗಿ ಹೇಳುತ್ತೇನೆ.
ಒಟ್ಟಿನಲ್ಲಿ ಒಬ್ಬ ಪ್ರಜ್ಞಾವಂತ ಪ್ರಜೆಗೆ ಇರಲೇಬೇಕಾದ ಎಲ್ಲಾ ಮಾನದಂಡಗಳು ಸೇರಿದಂತೆ ಜನರ ನಾಯಕನಾಗಿ ಕಾರ್ಯನಿರ್ವಹಿಸುವ ತನ್ನ ಸತ್ಕಾರ್ಯಗಳ ಮೂಲಕ ಜನರ ಮನವನ್ನು ಗೆಲ್ಲುವ ಪ್ರಯತ್ನ ಮಾಡುವ ಆತ್ಮ ವಿಶ್ವಾಸ, ಛಲ ಮತ್ತು ಪ್ರಜಾಪ್ರೀತಿಯನ್ನು ಹೊಂದಿರುವ ಉತ್ತಮ ಹೃದಯವಂತ ಜನಪ್ರತಿನಿಧಿಯು ಮುಂದಿನ ಸ್ಪರ್ಧೆ ಯಲ್ಲಿ ಸ್ಪರ್ಧಿಸಲಿ ಹಾಗೂ ಆಯ್ಕೆಯಾಗಲೆಂದು ಹಾರೈಸುತ್ತೇನೆ.
-ಆಂಡಮಾಡ ಚರಿತ್ರ ಪವನ್
ಮಾಯಮುಡಿ-ಪೊನ್ನಂಪೇಟೆ