ಮಡಿಕೇರಿ, ಏ. ೪: ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ ನೂತನ ಅಧ್ಯಕ್ಷರಾಗಿ ಕೊಡಂದೇರ ಬಾಂಡ್ ಗಣಪತಿ, ಉಪಾಧ್ಯಕ್ಷರಾಗಿ ಕೇಟೋಳಿರ ಹರೀಶ್‌ಪೂವಯ್ಯ ಅವಿರೋಧವಾಗಿ ಪುನರ್ ಆಯ್ಕೆಯಾ ಗಿದ್ದಾರೆ. ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕಾಗಿ ಇಂದು ನಡೆದ ಚುನಾವಣಾ ಪ್ರಕ್ರಿ ಯೆಯಲ್ಲಿ ಇವರಿಬ್ಬರು ಅವಿರೋಧ ವಾಗಿ ಮುಂದಿನ ಸಾಲಿಗೂ ಆಯ್ಕೆಗೊಂಡಿದ್ದಾರೆ.

ಮಾರ್ಚ್ ೧೭ ರಂದು ಬ್ಯಾಂಕ್‌ನ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಜಿದ್ದಾಜಿದ್ದಿನ ಪೈಪೋಟಿ ನಡುವೆ ಹಾಲಿ ಅಧ್ಯಕ್ಷರಾಗಿದ್ದ ಬಾಂಡ್ ಗಣಪತಿ, ಉಪಾಧ್ಯಕ್ಷ ಹರೀಶ್ ಪೂವಯ್ಯ ಸೇರಿದಂತೆ ೧೩ ಮಂದಿ ನಿರ್ದೇಶಕರಾಗಿ ಆಯ್ಕೆ ಆಗಿದ್ದರು.

ಹಾಲಿ ಆಡಳಿತ ಮಂಡಳಿ ಅವಧಿ ಏ. ೪ಕ್ಕೆ ಕೊನೆಗೊಳ್ಳಲಿದ್ದು, ನೂತನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಸಲು ಮುಂದಾಗದ ಚುನಾವಣಾಧಿಕಾರಿಗಳ ನಿಲುವನ್ನು ಪ್ರಶ್ನಿಸಿ ಹಾಲಿ ಅಧ್ಯಕ್ಷರಾಗಿದ್ದ ಕೊಡಂದೇರ ಬಾಂಡ್ ಗಣಪತಿ ಅವರು ರಾಜ್ಯ ಉಚ್ಚ ನ್ಯಾಯಾಲ ಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಈ ಸ್ಥಾನಕ್ಕೆ ಚುನಾವಣೆ ನಡೆಸುವಂತೆ ಕೋರಿ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕರು

ಡಿಸಿಸಿ ಬ್ಯಾಂಕ್: ಬಾಂಡ್ ಗಣಪತಿ- ಹರೀಶ್ ಪೂವಯ್ಯ ಪುನರಾಯ್ಕೆ

(ಮೊದಲ ಪುಟದಿಂದ) ರಿಟರ್ನಿಂಗ್ ಆಫೀಸರ್ ಆಗಿದ್ದ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಉಪವಿಭಾಗಾಧಿಕಾರಿಗಳು ಈ ಬಗ್ಗೆ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿಗಳಿಗೆ ಬರೆದಿದ್ದ ಪತ್ರಕ್ಕೆ ಅವರು ಪ್ರಸ್ತುತ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಜೂನ್ ೪ರತನಕ ಚುನಾವಣೆ ನಡೆಸಲು ಸಾಧ್ಯವಿಲ್ಲ. ಸದರಿ ಚುನಾವಣೆಯನ್ನು ನೀತಿ ಸಂಹಿತೆ ಮುಗಿದ ಬಳಿಕ ನಡೆಸಲಾಗುವುದು ಎಂಬ ಉತ್ತರ ಲಭ್ಯವಾಗಿತ್ತು. ಆದರೆ ಮಾರ್ಚ್ ೨೧ರಂದು ಸಹಕಾರ ಇಲಾಖೆಯಿಂದ ಜಾರಿಯಾಗಿದ್ದ ಮರು ಆದೇಶದಲ್ಲಿ ಈಗಾಗಲೇ ಆಡಳಿತ ಮಂಡಳಿ ಚುನಾವಣೆ ನಡೆದು ಪದಾಧಿಕಾರಿಗಳ ಚುನಾವಣೆ ಬಾಕಿ ಇದ್ದಲ್ಲಿ ಅಂತಹ ಪ್ರಕರಣಗಳಿಗೆ ಚುನಾವಣೆ ನೀತಿ ಸಂಹಿತೆ ಪ್ರಕಾರ ಚುನಾವಣೆ ಮುಂದೂಡುವ ಆದೇಶ ಅನ್ವಯವಾಗುವುದಿಲ್ಲ ಎಂದು ಸೂಚಿಸಲಾಗಿತ್ತು. ಇದನ್ನು ಉಲ್ಲೇಖಿಸಿ ಬಾಂಡ್ ಗಣಪತಿ ಅವರು ಉಚ್ಚನ್ಯಾಯಾಲದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಾಲಯ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಸುವಂತೆ ನಿರ್ದೇಶನ ನೀಡಿದ್ದ ಹಿನ್ನೆಲೆಯಲ್ಲಿ ಇಂದು ಚುನಾವಣೆ ನಿಗದಿಯಾಗಿತ್ತು. ಚುನಾವಣಾಧಿಕಾರಿಗಳಾದ ಉಪವಿಭಾಗಾಧಿಕಾರಿ ವಿನಾಯಕ ನರ್ವಾಡೆ ಅವರ ಸಮ್ಮುಖದಲ್ಲಿ ನಡೆದ ಪ್ರಕ್ರಿಯೆಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಬಾಂಡ್ ಗಣಪತಿ ಹಾಗೂ ಹರೀಶ್ ಪೂವಯ್ಯ ಇವರುಗಳು ಮಾತ್ರ ನಾಮಪತ್ರ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಮುಂದಿನ ಐದು ವರ್ಷಗಳ ಅವಧಿಗೆ ಅವಿರೋಧವಾಗಿ ಪುನರಾಯ್ಕೆ ಆದರು. ಈ ಸಂದರ್ಭ ಇತರ ನಿರ್ದೇಶಕರುಗಳು ಹಾಜರಿದ್ದರು.